ಸಪ್ಟೆಂಬರ್, 17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಧರ್ಮಸ್ಥಳ, ಜನಜಾಗೃತಿ ಪ್ರಾದೇಶಿಕ ವಿಭಾಗದ ಮೂಲಕ ಅನುಷ್ಠಾನಗೊಳ್ಳುತ್ತಿರುವ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳ ನಾಯಕರಾದ ಮಾಸ್ಟರ್ ಮತ್ತು ಕ್ಯಾಪ್ಟನ್ ರ ೆರಡು ದಿನದ ತರಬೇತಿ ಕಾರ್ಯಾಗಾರವನ್ನು ಎನ್.ಡಿ.ಆರ್.ಎಫ್ ಟೀಮ್ ಕಮಾಂಡರ್ ಶ್ರೀ ಶಾಂತಿಲಾಲ್ ಜಟಿಯಾ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್.ಡಿ.ಎಮ್ ಮೆಡಿಕಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಶಿಶುಪಾಲ್ ಪೂವಣಿ ಇವರು ಸ್ವಯಂಸೇವಕರಿಗೆ ಸಮವಸ್ತ್ರ ವಿತರಿಸಿದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್, ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತಿದಾರರಾದ ಶ್ರೀ ಸಂತೋಷ್ ಪೀಟರ್ ಡಿಸೋಜಾ, ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಶ್ರೀ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ತರಬೇತಿಯು ದಿನಾಂಕ: 17 ಮತ್ತು 18 ಹೀಗೆ ಎರಡು ದಿನಗಳ ಕಾಲ ನಡೆಯಲಿದ್ದು. 91 ಸಮಿತಿಗಳ 164 ಮಂದಿ ಮಾಸ್ಟರ್ ಮತ್ತು ಕ್ಯಾಪ್ಟನ್ ಭಾಗವಹಿಸಿದ್ದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್, ಕಿಶೋರ್ ಕುಮಾರ್, ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ , ಮೇಲ್ವಿಚಾರಕರಾದ ಶ್ರೀ ನಿತೇಶ್ ಉಪಸ್ಥಿತರಿದ್ದರು.
ಎನ.ಡಿ.ಆರ್.ಎಫ್ ಮೂಲಕ ತರಬೇತಿ:
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಮಾಸ್ಟರ್ ಕ್ಯಾಪ್ಟನ್ ರಿಗೆ ಒಂದು ದಿನದ ತರಬೇತಿ ನಡೆಸಲಾಯಿತು. ಎನ್.ಡಿ.ಆರ್.ಎಫ್ ಪರಿಚಯ, ವಿಪತ್ತು ನಿರ್ವಹಣೆಗೆ ಸರ್ಕಾರದ ವ್ಯವಸ್ಥೆಗಳು, ನಮ್ಮ ದೇಶ ಹಾಗೂ ಕರ್ನಾಟಕ ರಾಜ್ಯ ಇದುವರೆಗೆ ಎದುರಿಸಿದ ಅಪಾಯಕಾರಿ ವಿಪತ್ತುಗಳು, ಸಂಭಾವ್ಯ ವಿಪತ್ತುಗಳು, ವಿಪತ್ತು ಸೂಕ್ಷ್ಮ ಪ್ರದೇಶಗಳು, ಪ್ರಥಮ ಚಿಕಿತ್ಸೆ, ಪ್ರವಾಹ ಕಾರ್ಯಾಚರಣೆ, ಬೆಂಕಿ ಅವಗಢ ನಿರ್ವಹಣೆ, ರಕ್ಷಣಾ ಪರಿಕರಗಳ ಬಳಕೆ, ಕಟ್ಟಡ ಕುಸಿತ ಉಂಟಾದಾಗ ರಕ್ಷಣಾ ಕಾರ್ಯಾಚರಣೆ, ಸಿ.ಪಿ.ಆರ್ ಹೀಗೆ ಹಲವಾರು ವಿಷಯಗಳ ಬಗ್ಗೆ ಟೀಮ್ ಕಮಾಂಡರ್ ಹಾಗೂ ಎನ್.ಡಿ.ಆರ್.ಎಫ್ ತರಬೇತಿದಾರರು ತರಬೇತಿ ನೀಡಿದರು.
ಕಾನೂನು ಸಲಹೆ:
ವಿಪತ್ತು ನಿರ್ವಹಣಾ ಸ್ವಯಂಸೇವಕರು ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಪಾಲಿಸಬೇಕಾದ ಕಾನೂನುಗಳು, ಪೊಲೀಸ್ ಇಲಾಖೆಯೊಂದಿಗೆ ಸಂಬಂಧ ಹೇಗಿರಬೇಕು. ಮರಣ ಹೊಂದಿದ ವ್ಯಕ್ತಿಗಳ ಕಾರ್ಯಾಚರಣೆ ನಡೆಸುವಾಗ ಗಮನಿಸಬೇಕಾದ ಅಂಶಗಳು, ರಸ್ತೆ ಅಪಘಾತದ ಸಮಯದಲ್ಲಿ ವಹಿಸಬೇಕೇದ ಎಚ್ಚರಿಕೆಗಳು, ಕೋರ್ಟ್ ಗೆ ಹೋಗುವ ಅನಿವಾರ್ಯತೆ ಬಂದಾಗ ನೀಡಬೇಕಾದ ಸಹಕಾರ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.
ಉರಗ ರಕ್ಷಣೆ:
ಉರಗ ರಕ್ಷಣೆ ಕೌಶಲ್ಯಗಳು, ಉರಗಗಳ ವಿಧಗಳು, ವಿಷಕಾರಿ ಹಾಗೂ ವಿಷಕಾರಿಯಲ್ಲದ ಹಾವುಗಳು, ಉರಗ ರಕ್ಷಣೆ ವಿಧಾನಗಳು ಇತ್ಯಾದಿಗಳ ಬಗ್ಗೆ ಉಜಿರೆಯ ಸ್ನೇಕ್ ಜಾಯ್ ಮಾಹಿತಿ ನೀಡಿದರು. ಹಾವು ಕಚ್ಚಿಸಿಕೊಂಡ ವ್ಯಕ್ತಿಯ ರಕ್ಷಣೆ ವಿಧಾನ, ಪ್ರಥಮ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿ ಉರಗ ರಕ್ಷಣೆ ಮಾಡುವ ಬಗ್ಗೆ ಸವಿವರ ಮಾಹಿತಿ ನೀಡಿದರು.
ಗುಂಪು ಚರ್ಚೆ:
ಮಾಸ್ಟರ್ ಕ್ಯಾಪ್ಟನ್ ರ ತಂಡವನ್ನು 7 ವಿಭಾಗಗಳನ್ನಾಗಿ ವಿಭಾಗಿಸಿ 7 ವಿಷಯಗಳನ್ನು ನೀಡಿ ಗುಂಪು ಚರ್ಚೆ ಮಾಡಲಾಯಿತು. ಕಾರ್ಯಕ್ರಮ ಅನುಷ್ಠಾನದಲ್ಲಿ ಎದುರಿಸುತ್ತಿರುವ ಸವಾಲುಗಳು, ಗೌರವಧನ, ಶೌರ್ಯ ತಂಡ ಹೇಗಿರಬೇಕು ಇತ್ಯಾದಿಗಳ ಬಗ್ಗೆ ಗುಂಪು ಚರ್ಚೆ ನಡೆಯಿತು. ತಂಡದ ನಾಯಕರು ಚರ್ಚೆ ವಿಷಯವನ್ನು ಪ್ರಸ್ತುತಪಡಿಸಿದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್. ವಿ. ಪಾಯ್ಸ್ ರವರು ನಿರ್ವಹಣೆ ಮಾಡಿದರು.
ಪೂಜ್ಯರ ಭೇಟಿ:
ಎರಡು ದಿನದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಪರಮ ಪೂಜ್ಯ ಖಾವಂದರು ತರಬೇತಿಯ ವಿಡಿಯೋ ವೀಕ್ಷಣೆ ಮಾಡಿ, ಶೌರ್ಯ ಕಾರ್ಯಕ್ರಮದ ಪುಸ್ತಕ ಬಿಡುಗಡೆ ಮಾಡಿದರು. ಸಮವಸ್ತ್ರ ವಿತರಣೆ, ಪ್ರಮಾಣ ಪತ್ರ ವಿತರಣೆ, ಸಿ.ಪಿ.ಆರ್ ಹಾಡಿನಲ್ಲಿ ಬಹುಮಾನ ಪಡೆದ ಸ್ವಯಂಸೇವಕರಿಗೆ ಬಹುಮಾನ ವಿತರಣೆ ಮಾಡಿ ಶೌರ್ಯ ಘಟಕಗಳ ಮೂಲಕ ನಡೆಸುತ್ತಿರುವ ಸೇವೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಸ್ವಯಂಸೇವಕರಿಗೆ ಆಶೀರ್ವದಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್. ರವರು ಮಾತನಾಡಿ ಪೂಜ್ಯರ ಮನಸ್ಸಿನಲ್ಲಿ ಶೌರ್ಯ ಸದಸ್ಯರು ಸ್ಥಾನ ಪಡೆದುಕೊಂಡಿದ್ದಾರೆ. ಸ್ವಯಂಸೇವಕರ ಕಾರ್ಯ ಶ್ಲಾಘನೀಯ ಎಂದರು.
ಎಲ್ಲಾ ಮಾಸ್ಟರ್ ಮತ್ತು ಕ್ಯಾಪ್ಟನ್ ರಿಗೆ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸುವ ಮೂಲಕ ತರಬೇತಿ ಕಾರ್ಯಾಗಾರ ಸಮಾಪ್ತಿಗೊಂಡಿತು.