
ಮಡಿಕೇರಿ ಫೆಬ್ರವರಿ 06, 2025: ಪಾರ್ಶ್ವವಾಯು ಪೀಡಿತವಾಗಿ ವರ್ಷಗಳಿಂದ ನರಳಾಡುತ್ತಿರುವ ಗಂಡ, ಸದಾ ಕಾಯಿಲೆಯಿಂದ ಬಳಲುತ್ತಿರುವ ಹೆಂಡತಿ. ಜೀವನ ಯಾತನಾಮಯ. ಪರಿಸ್ಥಿತಿ ನಿಭಾಯಿಸಲು ಕಾಯಿಲೆಯ ನೋವಿನ ನಡುವೆ ಕೂಲಿಗೆ ತೆರಳಬೇಕಾದ ಅನಿವಾರ್ಯತೆ. ‘ದೇವರೇ ನಮ್ಮ ಸ್ಥಿತಿ ಇನ್ಯಾರಿಗೂ ಬರೋದು ಬೇಡ’ ಪರಿತಪಿಸುತ್ತಾ ಕಷ್ಠದಲ್ಲಿದ್ದಾರೆ ವಿಜಯ ಮತ್ತು ತಂಗ ದಂಪತಿ.

ಮಡಿಕೇರಿ ತಾಲ್ಲೂಕಿನ ಕೂರುಳಿ ಗ್ರಾಮದಲ್ಲಿರುವ ಈ ಕುಟುಂಬದ ದಯನೀಯ ಸ್ಥಿತಿ ಸ್ಥಳೀಯ ನಾಪೋಕ್ಲು ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ತಿಳಿಯುತ್ತಿದ್ದಂತೆಯೇ ಮನೆ ಭೇಟಿ ಮಾಡಿದರು. ಹಳೆಯ ಮನೆ. ಚದುರಿದ ವಸ್ತುಗಳು. ಗೋಡೆಗಳ ಬಣ್ಣ ಮಾಸಿವೆ. ಮನೆಯ ಸುತ್ತಲಿನ ಪರಿಸರ ನಿರ್ಲಕ್ಷ ಕ್ಕೆ ಒಳಗಾಗಿದೆ. ಮನೆಯಲ್ಲಿ ಇರುವ ಇಬ್ಬರೂ ಕಾಯಿಲೆಯಿಂದ ಬಳಲುವಾಗ ಮನೆ ಮಂತ್ರಾಲಯವಾಗುವುದು ಹೇಗೆ? ಈ ಕುಟುಂಬ ತ್ರಾಸದಾಯಕ ಸ್ಥಿತಿಯಲ್ಲಿದೆ ಎನ್ನುವುದನ್ನು ಮನೆಯೇ ಸಾಕ್ಷೀಕರಿಸುತ್ತಿತ್ತು.

ಕುಟುಂಬದ ಸ್ಥಿತಿಯನ್ನು ಗಮನಿಸಿದ ಘಟಕದ ಸ್ವಯಂಸೇವಕರು, ದಂಪತಿಗಳು ಸಹಾಯ ಯಾಚಿಸದಿದ್ದರೂ ನೆರವಿಗೆ ಧಾವಿಸಲು ಯೋಚಿಸಿದರು. ಯಾವ ರೀತಿಯ ಸಹಾಯ ಮಾಡಬಹುದು? ಘಟಕದ 15 ಸ್ವಯಂಸೇವಕರ ನಡುವೆ ವಿಚಾರ ಹರಿದಾಡಿತು. ಆಹಾರದ ಕಿಟ್ ಕೊಡೋಣ ಎಂದರು ಒಂದಿಬ್ಬರು. ಸಣ್ಣ ಮೊತ್ತವಾದರೂ ಧನ ಸಹಾಯ ಮಾಡುವುದು ಒಳಿತು ಎಂದರು ಕೆಲವರು. “ಇವನ್ನು ಯಾರು ಬೇಕಾದರೂ ಮಾಡಬಲ್ಲರು. ಆದರೆ ಮನೆಯ ಪರಿಸರ ಸ್ವಚ್ಚಗೊಳಿಸುವುದು, ಮನೆಯನ್ನು ಶುದ್ಧಗೊಳಿಸುವುದು, ಜೊತೆಗೆ ಮಾಸಿದ ಗೋಡೆಗೆ ಬಣ್ಣ ಬಳಿದು ಕೊಡುವುದು, ಇವನ್ನು ಮಾಡಿಕೊಡಲು ಯಾರೂ ಮುಂದಾಗುವುದಿಲ್ಲ, ನಾವು ಇದೇ ಕೆಲಸವನ್ನು ಮಾಡೋಣ’ ಕೆಲವು ಸ್ವಯಂಸೇವಕರು ಅಭಿಪ್ರಾಯ ಮುಂದಿಟ್ಟರು. ಈ ವಿಷಯವಾಗಿ ಒಮ್ಮತ ಮೂಡಿಬಂತು. ದಿನ ನಿಗದಿಪಡಿಸಿ ಘಟಕದ ಸದಸ್ಯರು ಶ್ರಮ ಸೇವೆ ಆರಂಭಿಸಿದರು.


ಮನೆಯ ಸುತ್ತಲಿನ ಪರಿಸರವನ್ನು ಶುಚಿಗೊಳಿಸಿದರು. ಕಸ ಕಡ್ಡಿಗಳನ್ನು ತೆರವುಗೊಳಿಸಿದರು. ಅನಗತ್ಯ ಗಿಡ ಕಂಟಿಗಳನ್ನು ಕಡಿದು ತೆಗೆದರು. ಮನೆಯ ಮೇಲ್ಛಾವಣಿಗೆ ಹೆಣೆದಿದ್ದ ಬಲೆಗಳನ್ನು ಗುಡಿಸಿ ತೆಗೆದರು. ಮಾಡು ಶುಚಿಗೊಳಿಸಿದರು. ಬಣ್ಣ ಮಾಸಿದ್ದ ಗೋಡೆಗೆ ಬಣ್ಣ ಬಳಿದರು. ಮನೆಯ ಕೋಣೆಗಳು ಸ್ವಯಂಸೇವಕರ ಶ್ರಮದಿಂದ ಬಣ್ಣ ಕಂಡವು.
ಬಣ್ಣ ಖರೀದಿಸಲು ಬೇಕಾದ ಮೊತ್ತವನ್ನು ಸ್ವಯಂಸೇವಕರೇ ಸಂಗ್ರಹಿಸಿದರು. ಘಟಕದ ಪ್ರತಿನಿಧಿ, ತಾಲ್ಲೂಕು ಸಮಿತಿಯ ಮಾಸ್ಟರ್ ದಿವ್ಯಾ ಬಾಳೆಯಡ, ಘಟಕದ ಸಂಯೋಜಕಿ ಉಮಾಲಕ್ಷ್ಮೀ, ಸದಸ್ಯರಾದ ಸೀನಾ, ಮಾಧವನ್, ಶಂಕರ, ಶರವಣ, ರವಿ, ಚಂದ್ರಕಲಾ, ಪೊನ್ನಮ್ಮ, ರಮ್ಯಾ ಶ್ರಮದಾನದಲ್ಲಿ ತೊಡಗಿಕೊಂಡರು.
ಧರ್ಮಸ್ಥಳದ “ಶೌರ್ಯ” ವಿಪತ್ತು ನಿರ್ವಹಣಾ ಘಟಕದ ಸಣ್ಣ ಸೇವೆ ಕಷ್ಠದಲ್ಲಿರುವ ದಂಪತಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸ್ಥಳೀಯರು ‘ಶೌರ್ಯ’ ಸ್ವಯಂಸೇವಕರ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.