
ಹೆಬ್ರಿ, ಮಾರ್ಚ್ 5,2025: ಹೆಬ್ರಿ ಕೊಲ್ಲೂರು ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಅನೇಕ ಸೂಚನಾ ಫಲಕಗಳಿವೆ. ಹೆದ್ದಾರಿಯಾಗಿರುವುದರಿಂದ ಈ ಮಾರ್ಗದಲ್ಲಿ ಸಾಗುವ ವಾಹನಗಳ ಸಂಖ್ಯೆ ಜಾಸ್ತಿ. ವಾಹನಗಳ ಓಡಾಟಕ್ಕೆ ಸೂಚನಾ ಫಲಕಗಳು ಅತಿ ಪ್ರಾಮುಖ್ಯ. ಈ ಭಾಗದಲ್ಲಿರುವ ಸೂಚನಾ ಫಲಕಗಳನ್ನು ಅಳವಡಿಸಿ ಬಹಳ ದಿನಗಳಾಗಿದ್ದರಿಂದ ಧೂಳು ಆವರಿಸಿ ಕಳೆಗುಂದಿದ್ದವು. ವಾಹನ ವೇಗವಾಗಿ ಓಡುತ್ತಿದ್ದರೆ ಸೂಚನಾ ಫಲಕ ಗಳು ಸ್ಪಸ್ಟವಾಗಿ ಗೋಚರಿಸದೇ ಚಾಲಕರು ತೊಂದರೆ ಅನುಭವಿಸಿದ್ದೂ ಇದೆ.

ಸ್ವಚ್ಚತೆ ಮತ್ತು ದುರಸ್ತಿ: ರಸ್ತೆ ಮಾರ್ಗ ಸೂಚಿಗಳನ್ನು, ಸೂಚನಾ ಫಲಕಗಳನ್ನು ಸ್ವಚ್ಚಗೊಳಿಸಿಬೇಕು ಎಂದು ನಿರ್ಧರಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಚಾರ ಬೆಳಂಜೆ ಘಟಕದ ಸ್ವಯಂಸೇವಕರು ಹೆಬ್ರಿ ಕೊಲ್ಲೂರು ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಇರುವ ಸೂಚನಾ ಫಲಕಗಳು, ಮಾರ್ಗಸೂಚಿಗಳನ್ನು ಸ್ವಚ್ಚಗೊಳಿಸಿದ್ದಾರೆ. ಕೆಲವು ಸೂಚನಾ ಫಲಕಗಳಿಗೆ ಅಡ್ಡಲಾಗಿ ಮರದ ಗೆಲ್ಲುಗಳು ತೂಗಿ ನಿಂತಿದ್ದು ವಾಹನ ಚಾಲಕರಿಗೆ ಸೂಚನಾ ಫಲಕಗಳು ಗೋಚರವಾಗುತ್ತಿರಲಿಲ್ಲ. ಇಂತಹ ಕಡೆಗಳಲ್ಲಿ ಮರದ ಗೆಲ್ಲುಗಳನ್ನು ತೆರವುಗೊಳಿಸಿದ್ದಾರೆ. ತೀರಾ ಹಳೆಯದಾಗಿದ್ದ ಕೆಲವು ಫಲಕಗಳು ಬಾಗಿಕೊಂಡಿದ್ದು ಅವುಗಳನ್ನು ಸರಿಪಡಿಸಿದ್ದಾರೆ. ಫಲಕಗಳ ಸುತ್ತಲೂ ಬೆಳೆದಿದ್ದ ಗಿಡಕಂಟಿಗಳನ್ನು ತೆರವುಗೊಳಿಸುವ ಕೆಲಸವನ್ನು ಸ್ವಯಂಸೇವಕರು ಮಾಡಿದ್ದಾರೆ.

4 ಕಿಮೀ ದೂರದ ವರೆಗೆ: ಚಾರ ಮೂರು ರಸ್ತೆ ಸರ್ಕಲ್ ನಿಂದ ಬೇಳಂಜೆ ತೆಂಕೊಲ ಅರಣ್ಯ ವಿಭಾಗದವರೆಗೆ ಸುಮಾರು 4 ಕಿಲೋಮೀಟರ್ ದೂರದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿನ 30 ಕ್ಕೂ ಹೆಚ್ಚು ಫಲಕಗಳನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸ್ವಯಂಸೇವಕರು ಮಾಡಿದ್ದಾರೆ. ಸ್ವಯಂಸೇವಕರು ಕೆಲಸ ಮಾಡುತ್ತಿದ್ದ ಸಮಯದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ ಅನೇಕರು ಕೆಲಸವನ್ನು ಗಮನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕ ಯಾತ್ರಿಕರು ಸ್ವಯಂಸೇವಕರ ಸಮವಸ್ತ್ರವನ್ನು ಗಮನಿಸಿ ತಂಡದ ಬಗ್ಗೆ ಕೇಳಿ ತಿಳಿದಿದ್ದು ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುತ್ತಾರೆ.

ಶ್ರಮದಾನದಲ್ಲಿ ಘಟಕ ಪ್ರತಿನಿಧಿ ಚಂದ್ರ ನಾಯ್ಕ, ಸ್ವಯಂಸೇವಕರಾದ ಸುಮಲತಾ, ಶಶಿಕಲಾ, ಗಂಗಾರತ್ನ, ಶ್ರೀನಿವಾಸ ನಾಯ್ಕ, ಮಹೇಶ್ ನಾಯ್ಕ್, ಸಂತೋಷ ನಾಯ್ಕ, ಸಂತೋಷ ಪೂಜಾರಿ, ಕೆ.ಕೃಷ್ಣ ನಾಯ್ಕ ಮತ್ತು ನಯನ್ ಕುಮಾರ್ ಉಪಸ್ಥಿತರಿದ್ದರು.
