
ನಿಪ್ಪಾಣಿ ತಾಲ್ಲೂಕಿನಲ್ಲಿ ದುದಗಂಗಾ ವೇದಗಂಗಾ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸರ್ಕಾರದಿಂದ ಕಾಳಜಿ ಕೇಂದ್ರಗಳನ್ನು ತೆರೆದು ಜನವಸತಿಗೆ ಅವಕಾಶ ಮಾಡಿಕೊಡಲಾಗಿದೆ.
ತಾಲ್ಲೂಕಿನ ಹುನ್ನರಗಿ ಗ್ರಾಮದಲ್ಲಿ ಪ್ರವಾಹದ ಕಾರಣದಿಂದ ಸುಮಾರು 45 ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ತಂಗಿದ್ದು ಇವರಿಗೆ ಅಗತ್ಯವಿರುವ ನೆರವು ನೀಡುವಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನಿರತರಾಗಿದ್ದಾರೆ.
ಕೇಂದ್ರದಲ್ಲಿ ವಾಸುತ್ತಿದ್ದ ಕುಟುಂಬಗಳ ಸುಮಾರು 35 ದನಗಳು ಹಾಗೂ 30 ಕರುಗಳಿಗೆ ಕಾಳಜಿ ಕೇಂದ್ರದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾನುವಾರುಗಳಿಗೆ ಮೇವಿನ ಕೊರತೆಯನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಹಸಿರು ಮೇವು ಕಟಾವು ಮಾಡಿ ತಂದು ನೀಡಿರುತ್ತಾರೆ.
ಸ್ಥಳೀಯರಾದ ರಾಮು ಬಣ್ಣೆ ಮತ್ತು ಆನಂದ ಜೋಮ ಇವರು ಜಾನುವಾರುಗಳ ಮೇವಿಗಾಗಿ ಹಸಿರು ಹುಲ್ಲನ್ನು ನೀಡಿದ್ದು ಎಲ್ಲಾ ಸ್ವಯಂಸೇವಕರು ಕಟಾವು ಮಾಡಿ ಕಾಳಜಿ ಕೇಂದ್ರಕ್ಕೆ ತಲುಪಿಸಿ ವಿತರಣೆ ಮಾಡಿದ್ದಾರೆ. ಘಟಕದ ಕ್ಯಾಪ್ಟನ್ ರಾಜು ಕೂಟ ಇವರು ತಮ್ಮ ವಾಹನವನ್ನು ಉಚಿತವಾಗಿ ಮೇವು ಸಾಗಿಸಲು ನೀಡಿರುತ್ತಾರೆ.
ಪ್ರತೀ ವರ್ಷ ಪ್ರವಾಹದಂತಹ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಸ್ವಯಂಸೇವಕರು ಮಾನವೀಯ ಕಳಕಳಿಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸ್ವಯಂಸೇವಕರ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.