
ಬೆಳ್ತಂಗಡಿ: ಸ್ನೇಹಿತರ ಜೊತೆಗೆ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಓರ್ವ ಈಜಲು ಬಾರದೆ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಮೇ.19,2026 ರಂದು ಕಲ್ಮಂಜ ಗ್ರಾಮದ ಪಜಿರಡ್ಕ ನದಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಿವಾಸಿ ಶ್ರೀಪೂರ್ಣ ದೇಶಪಾಂಡೆ(21) ಈ ದುರಂತದಲ್ಲಿ ಮೃತಪಟ್ಟವರಾಗಿದ್ದಾರೆ. ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿರುವಾಗ ನದಿಯ ಆಳದ ಅರಿವಿಲ್ಲದೇ ಗುಂಡಿಯಲ್ಲಿ ಮುಳುಗಿದ್ದು, ಈಜಲು ಬಾರದೇ ಇರುವುದರಿಂದ ದುರಂತ ಘಟಿಸಿದೆ.
ಸ್ಥಳೀಯರಿಂದ ಶೋಧ:
ನದಿಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಸಾಧ್ಯವಾಗದೇ ಜೊತೆಗಾರರು ಜೋರಾಗಿ ಕೂಗಾಡಿದ್ದಾರೆ. ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮುಳುಗಿದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ. ಸುಮಾರು 3.40 ಕ್ಕೆ ಘಟನೆ ನಡೆದಿದ್ದು ಆರು ಗಂಟೆಯ ವರೆಗೆ ಸ್ಥಳೀಯ ಈಜುಗಾರರು ಹುಡುಕಾಟ ನಡೆಸಿದ್ದಾರೆ. ನದಿಯ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಮುಳುಗಿದ ವ್ಯಕ್ತಿಯ ಕುರುಹು ಪತ್ತೆಯಾಗಲಿಲ್ಲ. 10 ಕ್ಕೂ ಹೆಚ್ಚು ಈಜು ಪರಿಣಿತರು ಹುಡುಕುವ ಕಾರ್ಯಾಚರಣೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.
ಶೌರ್ಯ ತಂಡಕ್ಕೆ ಮನವಿ:
ಸುಮಾರು 3.40 ರಿಂದ ಸಂಜೆ 6 ಗಂಟೆಯ ವೇಳೆಗೆ ಸ್ಥಳೀಯರು ಹುಡುಕಾಟ ನಡೆಸಿದರೂ ಕಣ್ಮರೆಯಾದ ವ್ಯಕ್ತಿಯ ಕುರುಹು ಸಿಗದೇ ಇರುವ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ರವರು ಶೌರ್ಯ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸ್ವಯಂಸೇವಕರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಂದ ಮಾಹಿತಿ ತಿಳಿಯುತ್ತಿದ್ದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ನೀರಿನ ಒತ್ತಡ, ಆಳವಾದ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ಸವಾಲಿನದಾಗಿತ್ತು. ಮುಳುಗಿರುವುದನ್ನು ನೋಡಿದವರ ಮಾಹಿತಿಯ ಮೇರೆಗೆ ಹಲವಾರು ಬಾರಿ ನದಿಯಲ್ಲಿ ಮುಳುಗೆದ್ದರೂ ಕುರುಹು ಪತ್ತೆಯಾಗಿರಲಿಲ್ಲ.

20 ಅಡಿ ಆಳದ ಹೊಂಡ ಪತ್ತೆ:
ನದಿಯುದ್ದಕ್ಕೂ ಈಜುತ್ತಾ, ಮುಳುಗುತ್ತಾ ಹುಡುಕುವ ಸಮಯದಲ್ಲಿ ನದಿಯ ಮದ್ಯದಲ್ಲಿ ಸುಮಾರು 20 ರಿಂದ 25 ಅಡಿ ಆಳದ ಹೊಂಡ ಇರುವುದು ಪತ್ತೆಯಾಗಿದೆ. ಬೋಟ್ ಮೂಲಕ ಹೊಂಡದ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಸುಮಾರು 20 ಅಡಿಗೂ ಉದ್ದದ ಕೋಲಿನ ಸಹಾಯದಿಂದ ಶೋಧ ಮುಂದುವರಿಸಿದರು. ಹುಡುಕುತ್ತಾ ಹುಡುಕುತ್ತಾ ಹೊಂಡದ ಮಧ್ಯಭಾಗಕ್ಕೆ ಬಂದಾಗ ಕೋಲಿಗೆ ಮೃದುವಾದ ವಸ್ತುವಿನ ಸ್ಪರ್ಶವಾದಂತಾಗಿದೆ. ಇದನ್ನು ಗಮನಿಸಿದ ಸ್ವಯಂಸೇವಕರು ಮೃತ ದೇಹ ಇರಬಹುದೆಂದು ಭಾವಿಸಿ ಅಗ್ನಿಶಾಮಕ ಅಧಿಕಾರಿಗಳಿಗೆ ತಿಳಿಸಿದಾಗ ಅವರು ಮೃತದೇಹ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಬೋಟ್ ಭದ್ರಪಡಿಸಿ ಕಾರ್ಯಾಚರಣೆ:
ಮೃತ ದೇಹ ಇರುವ ಸ್ಥಳ ಖಚಿತವಾಗುತ್ತಿದ್ದಂತೆಯೇ ಸುಮಾರು 15 ಅಡಿಗೂ ಹೆಚ್ಚಿನ ಆಳಕ್ಕೆ ಇಳಿಯಲು ನಿರ್ಧರಿಸಿದ ಶೌರ್ಯ ಸ್ವಯಂಸೇವಕರ ತಂಡವು ಬೋಟ್ ನ್ನು ಆಧಾರವಾಗಿಸಿಕೊಂಡು ಮೃತ ದೇಹ ಇರುವ ಪ್ರದೇಶಕ್ಕೆ ಉದ್ದನೆಯ ಕೋಲನ್ನು ಊರಿದ್ದಾರೆ. ಬೋಟ್ ಅತ್ತಿತ್ತ ವಾಲದಂತೆ ಎರಡೂ ಭಾಗದಲ್ಲಿ ಹಗ್ಗದ ಸಹಾಯದಿಂದ ಭದ್ರಪಡಿಸಿದ್ದಾರೆ. ಬೋಟ್ ಅಲ್ಲಾಡದಂತೆ ನೋಡಿಕೊಂಡು ಅದಕ್ಕೆ ತಾಗಿಕೊಂಡು ಕೋಲನ್ನು ನೀರಿನಲ್ಲಿ ಇಳಿಸಿ, ಕೋಲಿನ ಸಹಾಯದಿಂದ ಮುಳುಗು ಪರಿಣತರಾದ ಸಚಿನ್ ಭಿಡೆ ಇವರು ನೀರಿನ ಆಳಕ್ಕೆ ಇಳಿದಿದ್ದಾರೆ. ಸುಮಾರು ಇಪ್ಪತ್ತು ಅಡಿ ಆಳದಲ್ಲಿ ಮೃತ ದೇಹ ಕಂಡುಬಂದಿದ್ದು ಹಿಡಿದುಕೊಂಡು ಕೋಲಿನ ಸಹಾಯದಿಂದ ಮೇಲಕ್ಕೆ ಬಂದಿದ್ದಾರೆ. ಬೋಟ್ ಮೇಲ್ಭಾಗದಲ್ಲಿ ಸಿದ್ದರಿದ್ದ ಸ್ವಯಂಸೇವಕರ ತಂಡವು ಮೃತ ದೇಹವನ್ನು ನದಿಯ ದಡಕ್ಕೆ ತರುವಲ್ಲಿ ಯಶಸ್ವೀಯಾಗಿದ್ದಾರೆ. ಶೌರ್ಯ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಕ್ಯಾಪ್ಟನ್ ರವೀಂದ್ರ, ತುರ್ತು ಸ್ಪಂದನಾ ತಂಡದ ಪ್ರತಿನಿಧಿ ಸುಲೈಮಾನ್, ಸದಸ್ಯರಾದ ಅನಿಲ್ ಪಿ.ಎ, ರಮೇಶ್ ಭೈರಕಟ್ಟ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.
ವರವಾದ ತರಬೇತಿ:
ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುತ್ತೂರು ಸಮೀಪದ ವಾರಣಾಸಿ ಫಾರ್ಮ್ ಹೌಸ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ಅಂತರಾಷ್ಟ್ರೀಯ ಈಜು ತಜ್ಞರಿಂದ ಒಂದು ವಾರಗಳ ತರಬೇತಿ ಕೊಡಿಸಲಾಗಿತ್ತು. “ಈಜುವಿಕೆ ಮತ್ತು ಮುಳುಗುವಿಕೆಯ ಕೌಶಲ್ಯದ ಬಗ್ಗೆ ವೈಜ್ಞಾನಿಕವಾದ ತರಬೇತಿಯನ್ನು ತಜ್ಞರಿಂದಲೇ ಪ್ರಾತ್ಯಕ್ಷಿಕವಾಗಿ ಪಡೆದಿದ್ದರಿಂದಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲು ಸಹಕಾರವಾಯಿತು” ಎನ್ನುತ್ತಾರೆ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ.

ಸ್ವಯಂಸೇವಕರ ತಂಡಕ್ಕೆ ಶ್ಲಾಘನೆ:
ರಾತ್ರಿ ವೇಳೆಯಲ್ಲಿ ನೀರಿನಾಳದಲ್ಲಿ ಕಾರ್ಯಾಚರಣೆ ನಡೆಸುವುದು ಸುಲಭವಲ್ಲ. ಸವಾಲಿನಿಂದ ಕೂಡಿದ ಸಾಹಸವವನ್ನು ಶೌರ್ಯ ಧರ್ಮಸ್ಥಳ ತಂಡದ ಸ್ವಯಂಸೇವಕರು ಯಶಸ್ವಿಯಾಗಿ ಪೂರೈಸಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್.ಎಸ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸ್ವಯಂಸೇವಕರಿಗೆ ದೂರವಾಣಿ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್ ರವರು ಸ್ವಯಂಸೇವಕರಿಗೆ ತರಬೇತಿಯನ್ನು ಕೊಡಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದು ಸ್ವಯಂಸೇವಕರ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ, ಅಗ್ನಿಶಾಮಕ ದಳದ ಅಧಿಕಾರಿ ಉಸ್ಮಾನ್ ರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್ ನಿರಂತರವಾಗಿ ಸ್ವಯಂಸೇವಕರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ನೆರವಾಗಿದ್ದಾರೆ.
ಕೋಡಕಣಿ ಜೈವಂತ ಪಟಗಾರ