ಕಡಬ, ಜೂನ್ 16, 2026: ಮಳೆಗಾಲದಲ್ಲಿನ ವಿಪತ್ತುಗಳ ನಿರ್ವಹಣೆಗೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ತುರ್ತು ಸ್ಪಂದನಾ ತಂಡವನ್ನು ರಚನೆ ಮಾಡಲಾಯಿತು.
ಕಳೆದ 6 ವರ್ಷಗಳಿಂದ ಕಡಬ ತಾಲ್ಲೂಕಿನಲ್ಲಿ ಎನ್.ಡಿ.ಆರ್.ಎಫ್, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಮತ್ತು ವಿವಿಧ ಪರಿಣತರಿಂದ ತರಬೇತಿ ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರಚಿಸಲಾಗಿರುವ ವಿಪತ್ತು ನಿರ್ವಹಣಾ ಸಮಿತಿಯು ಕಾರ್ಯಾಚರಿಸುತ್ತಿದ್ದು ಸಾವಿರಾರು ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಪ್ರಸ್ತುತ ವರ್ಷದಲ್ಲಿ ವಿಪತ್ತುಗಳಿಗೆ ತುರ್ತು ಸ್ಪಂದನೆ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರಿ ಅನಿಲ್ ಕುಮಾರ್ ಎಸ್.ಎಸ್ ರವರು ಹಾಗೂ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್. ವಿ.ಪಾಯ್ಸ್ ರವರ ಮಾರ್ಗದರ್ಶನದಂತೆ ತುರ್ತು ಸ್ಪಂದನಾ ತಂಡವನ್ನು ರಚನೆ ಮಾಡಲಾಗಿದೆ.
ದಕ್ಷಿಣ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ್ ರವರು ಮತ್ತು ಕಡಬ ತಾಲ್ಲೂಕಿನ ಯೋಜನಾಧಿಕಾರಿಯವರಾದ ಶ್ರೀ ಪ್ರಕಾಶ್ ಕುಮಾರ್ ರವರು ಶೌರ್ಯ ತಂಡದ ಸದಸ್ಯರಿಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದು ವಿಪತ್ತು ನಿರ್ವಹಣೆಗೆ ಅಗತ್ಯ ನೆರವನ್ನು, ಕಾಲಕಾಲಕ್ಕೆ ಅಗತ್ಯವಿರುವ ತರಬೇತಿಗಳನ್ನು ಸ್ವಯಂಸೇವಕರಿಗೆ ನೀಡುತ್ತಿದ್ದಾರೆ.
ಕಡಬ ವಿಪತ್ತು ನಿರ್ವಹಣಾ ಸಮಿತಿಯಲ್ಲಿರುವ 20 ಮಂದಿ ಕ್ರಿಯಾಶೀಲ ಸ್ವಯಂಸೇವಕರನ್ನು ತುರ್ತು ಸ್ಪಂದನಾ ತಂಡಕ್ಕೆ ಆಯ್ಕೆ ಮಾಡಲಾಗಿದ್ದು ಮಳೆಗಾಲದ ಸಂದರ್ಭದಲ್ಲಿ ಉಂಟಾಗಬಹುದಾದ ವಿಪತ್ತುಗಳ ನಿರ್ವಹಣೆಗೆ ಸನ್ನದ್ಧರಾಗಿರಲು ತರಬೇತಿ ನೀಡಲಾಗಿದೆ.
ಈ ತಂಡವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ, ಅರಣ್ಯ ಮುಂತಾದ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆಯಲ್ಲಿ ತೊಡಗಿಕೊಳ್ಳಲಿದೆ.

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ಜನಜಾಗೃತಿ ಪ್ರಾದೇಶಿಕ ಮೇಲ್ವಿಚಾರಕರಾದ ನಿತೇಶ್, ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಕ್ಯಾಪ್ಟನ್, ವಲಯ ಮೇಲ್ವಿಚಾರಕರು, ಸಂಯೋಜಕರು, ಘಟಕಪ್ರತಿನಿಧಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು.