ಬಂಟ್ವಾಳ ತಾಲ್ಲೂಕಿನ ಕಾಡಬೆಟ್ಟು ಗ್ರಾಮದ ಅಸಾಹಯಕ ಕುಟುಂಬವೊಂದಕ್ಕೆ ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ವಗ್ಗ-ಕಾಡಬೆಟ್ಟು ಘಟಕದ ಸ್ವಯಂಸೇವಕರು ಮನೆ ರಿಪೇರಿ ಮಾಡಿಕೊಟ್ಟಿದ್ದಾರೆ.
ಜೀವನ ನಡೆಸಲು ಬಹಳ ಕಷ್ಠಪಡುತ್ತಿರುವ ಈ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 1000 ಮಾಶಾಸನ ನೀಡಲಾಗುತ್ತಿದೆ.

ಕಾಡಬೆಟ್ಟುವಿನ ರಮಣಿ(65) ಇವರು ಹಳೆಯ ಮನೆಯಲ್ಲಿ ವಾಸವಿದ್ದರು. ಮನೆಯ ಮೇಲ್ಚಾವಣಿ ಹಾಳಾಗಿದ್ದು ಯಾವುದೇ ಸಂದರ್ಭದಲ್ಲಿ ಕುಸಿಯುವ ಭೀತಿಯಿತ್ತು. ಮಳೆಯಲ್ಲಿ ಮನೆ ಸೋರುತ್ತಿತ್ತು. ಮನೆಯೊಳಗೆ ನೀರು ಬಂದು ಉಳಿದುಕೊಳ್ಳುವುದು ಕಷ್ಠವಾಗಿತ್ತು. ಇವರಿಗೆ ಒಬ್ಬ ಮಗ ಇದ್ದು ಬುದ್ದಿಮಾಂದ್ಯನಾಗಿದ್ದು ಮನೆ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಮನೆ ಬಹಳ ಹಳೆಯದಾಗಿರುವುದರಿಂದ ಮನೆಯ ಹಂಚುಗಳು ಒಡೆದಿದ್ದು, ಬದಲಾಯಿಸಬೇಕಾಗಿತ್ತು. ರೀಪುಗಳನ್ನು ಬದಲಿಸಬೇಕಾಗಿತ್ತು. ಈ ಎಲ್ಲಾ ಕೆಲಸಗಳನ್ನು ಶೌರ್ಯ ತಂಡದವರು ಮಾಡಿರುತ್ತಾರೆ. ಅಲ್ಲದೇ ಮನೆಯ ಸುತ್ತಮುತ್ತಲೂ ಸ್ವಚ್ಚತೆ ಮಾಡಿಕೊಟ್ಟು ಮನೆಯ ಒಳಗೆ ಸ್ವಚ್ಚತೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಡಿ , ವಿನೋದ್, ಮಹಾಬಲ ರೈ, ಮೋಹನಂದ, ಅಶೋಕ ಹಾರೊದ್ದು ಅಶೋಕ ಬೋಲ್ಮಾರು, ನಾರಾಯಣ ಪೂಜಾರಿ, ರೋಹಿತ್ ಶ್ರಮದಾನದಲ್ಲಿ ಭಾಗವಹಿಸಿದ್ದರು.