ಜೈವಂತ ಪಟಗಾರ್

ಯೋಜನಾಧಿಕಾರಿ | ವಿಪತ್ತು ನಿರ್ವಹಣೆ | ಕೃಷಿ ಬರಹಗಾರ | ಲೇಖಕ | ತರಬೇತುದಾರ

ನಾನು ಜೈವಂತ ಪಟಗಾರ್. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ), ಧರ್ಮಸ್ಥಳದ ಕೇಂದ್ರ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 2006ರಲ್ಲಿ ನನ್ನ ವೃತ್ತಿಜೀವನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಆರಂಭಿಸಿದ್ದು, ಗ್ರಾಮೀಣಾಭಿವೃದ್ಧಿ, ಕೃಷಿ ಅಭಿವೃದ್ಧಿ, ವಿಪತ್ತು ನಿರ್ವಹಣೆ ಹಾಗೂ ಸಾಹಿತ್ಯಿಕ ಬರವಣಿಗೆಯ ಕ್ಷೇತ್ರಗಳಲ್ಲಿ ವೈವಿಧ್ಯಮಯ ಅನುಭವವನ್ನು ಹೊಂದಿದ್ದೇನೆ.

ವೃತ್ತಿಪರ ಅನುಭವ:

2006 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿವಿಧ ಹಂತಗಳ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದೇನೆ. ಸೇವಾನಿರತ ಸಿಬ್ಬಂದಿಯಾಗಿ ಆರಂಭವಾದ ನನ್ನ ವೃತ್ತಿಪಯಣವು ಮೇಲ್ವಿಚಾರಕ, ಕೃಷಿ ಮೇಲ್ವಿಚಾರಕ, ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಉಪನ್ಯಾಸಕ ಹಾಗೂ ಪ್ರಸ್ತುತ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿಯ ಹುದ್ದೆಯವರೆಗೆ ಮುಂದುವರಿದಿದೆ.

ನನ್ನ ವೃತ್ತಿಪಯಣದ ಪ್ರಮುಖ ಹಂತಗಳು:

  • 2006–2010: ಸೇವಾನಿರತ ಸಿಬ್ಬಂದಿಯಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ಸೇವೆ.
  • 2010–2012: ಮೇಲ್ವಿಚಾರಕರಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ.
  • 2012–2017: ಕೃಷಿ ಮೇಲ್ವಿಚಾರಕರಾಗಿ ದಾವಣಗೇರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳು ಮತ್ತು ಕೃಷಿಕರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಸೇವೆ. ರೈತರಿಗೆ ಕೃಷಿ ತರಬೇತಿಗಳು, ಅದ್ಯಯನ ಪ್ರವಾಸಗಳು, ಹೊಸ ಕೃಷಿ ತಾಕುಗಳ ರಚನೆಗೆ ಪ್ರೋತ್ಸಾಹ, ಭತ್ತದಲ್ಲಿ ಶ್ರೀ ಪದ್ದತಿ ಬೇಸಾಯ ಮಾದರಿ ಅನುಷ್ಠಾನ, ಗುಲಾಬಿ, ಮಲ್ಲಿಗೆ ಮತ್ತಿತರ ಹೂವಿನ ಕೃಷಿಗೆ ಮಾರ್ಗದರ್ಶನ.
  • 2017–2019:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ತರಬೇತಿ ಸಂಸ್ಥೆ, ರಾಯಾಪುರ, ಧಾರವಾಡದಲ್ಲಿ ಉಪನ್ಯಾಸಕರಾಗಿ ಸೇವೆ. ಉತ್ತರ ಕರ್ನಾಟಕ ಭಾಗದ ಯೋಜನೆಯ ಸಿಬ್ಬಂದಿಗಳಿಗೆ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತರಬೇತಿ. ರೈತರು, ಹೈನುಗಾರರಿಗೆ ಕೃಷಿ ವಿಶ್ವ ವಿದ್ಯಾಲಯಗಳು, ಕೃಷಿ ಇಲಾಖೆಗಳ ಸಹಭಾಗಿತ್ವದಲ್ಲಿ ವಿಶೇಷ ತಾಂತ್ರಿಕ ತರಬೇತಿಗಳ ಆಯೋಜನೆ.
  • 2019ರಿಂದ ಪ್ರಸ್ತುತ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ವಿಭಾಗದಲ್ಲಿ ಯೋಜನಾಧಿಕಾರಿಯಾಗಿ ಸೇವೆ.

ವಿಪತ್ತು ನಿರ್ವಹಣೆ ಮತ್ತು ಶೌರ್ಯ ಸೇವೆ

ವಿಪತ್ತು ಸಂಭವಿಸುವ ಸಂದರ್ಭದಲ್ಲಿ ಸಕಾಲಿಕ ಸ್ಪಂದನೆ, ಜೀವ ರಕ್ಷಣೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸ್ವಯಂಸೇವಕರನ್ನು ಸನ್ನದ್ಧಗೊಳಿಸುವುದು ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಉದ್ದೇಶದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರ್ನಾಟಕ ರಾಜ್ಯದ 91 ತಾಲ್ಲೂಕುಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದ್ದು, 730 ಘಟಕಗಳಲ್ಲಿ 10,460 ಸ್ವಯಂಸೇವಕರು ಸಕ್ರೀಯರಾಗಿದ್ದು, ಈ ಎಲ್ಲಾ ಸಮಿತಿಗಳ ಮೇಲ್ವಿಚಾರಣೆ ಮತ್ತು ಸಮನ್ವಯದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ.

ವಿಪತ್ತು ನಿರ್ವಹಣಾ ಕಾರ್ಯಕ್ರಮ ಅನುಷ್ಠಾನದಲ್ಲಿ ನನ್ನ ಪ್ರಮುಖ ಜವಾಬ್ದಾರಿಗಳು:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್ ರವರ ಮಾರ್ಗದರ್ಶನದಲ್ಲಿ ಈ ಕೆಳಗಿನ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತ್ತಿದ್ದೇನೆ.

  • ರಾಜ್ಯದ 91 ತಾಲ್ಲೂಕುಗಳ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ.
  • ಸಮಿತಿಗಳ ನಿರಂತರ ಅನುಪಾಲನೆ ಮತ್ತು ಮಾಹಿತಿ ವಿನಿಮಯಕ್ಕಾಗಿ 91 ವಾಟ್ಸಾಪ್ ಗುಂಪುಗಳ ನಿರ್ವಹಣೆ.
  • ಶೌರ್ಯ ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆ, ತುರ್ತು ಸ್ಪಂದನೆ ಮತ್ತು ಜೀವ ರಕ್ಷಣೆಯ ಕುರಿತು ತರಬೇತಿಗಳನ್ನು ಸಂಘಟಿಸುವುದು.
  • NDRF, SDRF, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮಗಳ ಆಯೋಜನೆ.
  • ವಿಪತ್ತು ನಿರ್ವಹಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಸಮುದಾಯ ಮಟ್ಟದಲ್ಲಿ ಸನ್ನದ್ಧತೆಯನ್ನು ಬೆಳೆಸುವ ಕಾರ್ಯಗಳಿಗೆ ಸಹಕಾರ ನೀಡುವುದು.

ತರಬೇತಿ ಮತ್ತು ಸಾಮರ್ಥ್ಯವರ್ಧನೆ

ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ NDRF, SDRF ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ತರಬೇತಿಗಳನ್ನು ಪಡೆದಿದ್ದೇನೆ. ಉಷಾ ಫೈರ್ ಸೇಫ್ಟಿ ಕಂಪನಿಯ ಮೂಲಕ ಜೀವ ರಕ್ಷಣಾ ಕೌಶಲ್ಯ ತರಬೇತಿಯನ್ನೂ ಪಡೆದಿದ್ದೇನೆ. ಇದರ ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ, ತುರ್ತು ಪರಿಸ್ಥಿತಿಯಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ಜೀವ ರಕ್ಷಣೆಯ ಮಹತ್ವದ ಕುರಿತು ತರಬೇತಿಗಳನ್ನು ನೀಡಿದ್ದೇನೆ.

ಕೃಷಿ ಬರವಣಿಗೆ ಮತ್ತು ಪತ್ರಿಕೋದ್ಯಮ

ವಿಪತ್ತು ನಿರ್ವಹಣೆಯ ಜೊತೆಗೆ ಕೃಷಿ, ಗ್ರಾಮೀಣ ಬದುಕು, ಕೃಷಿಕರ ಸಾಧನೆಗಳು ಮತ್ತು ಸ್ವಾವಲಂಬನೆಯ ಕಥೆಗಳನ್ನು ಬರವಣಿಗೆಯ ಮೂಲಕ ಜನರಿಗೆ ತಲುಪಿಸುವುದು ನನ್ನ ಆಸಕ್ತಿಯ ಕ್ಷೇತ್ರವಾಗಿದೆ.

ಕೃಷಿ ಲೇಖನ ಬರವಣಿಗೆಯ ಕುರಿತು ಕೃಷಿ ಮಾಧ್ಯಮ ಕೇಂದ್ರ, ಬೆಂಗಳೂರು ಇವರಿಂದ ತರಬೇತಿ ಪಡೆದಿದ್ದೇನೆ. ಪ್ರಸಿದ್ಧ ಬರಹಗಾರರಾದ ಶ್ರೀ ಶಿವಾನಂದ ಕಳವೆ ಅವರು ಆಯೋಜಿಸಿದ ಅಭಿವೃದ್ಧಿ ಪತ್ರಿಕೋದ್ಯಮದ ಪತ್ರಕರ್ತರ ತರಬೇತಿಯಲ್ಲಿಯೂ ಭಾಗವಹಿಸಿದ್ದೇನೆ.

ನನ್ನ ಬರವಣಿಗೆಯ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಗಳು ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳಿಗೆ ಲೇಖನ ಬರವಣಿಗೆಯ ಕುರಿತು ತರಬೇತಿಯನ್ನು ನೀಡಿದ್ದೇನೆ.

ನನ್ನ ಕೃಷಿ ಲೇಖನಗಳು ರಾಜ್ಯದ ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಮತ್ತು ಸಂಯುಕ್ತ ಕರ್ನಾಟಕ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಡಿಕೆ ಪತ್ರಿಕೆ, ಕೃಷಿ ಬಿಂಬ, ಹಸಿರುವಾಸಿ ಹಾಗೂ ಸಾಗುವಳಿ ಮುಂತಾದ ಕೃಷಿ ಸಂಬಂಧಿತ ಮಾಸಪತ್ರಿಕೆಗಳಲ್ಲಿಯೂ ನನ್ನ ಬರಹಗಳು ಪ್ರಕಟಗೊಂಡಿವೆ.

ಕೃಷಿಯಲ್ಲಿನ ಹೊಸ ಸಾಧ್ಯತೆಗಳು, ಕೃಷಿಕರ ಪರಿಶ್ರಮ, ಸ್ವಾವಲಂಬನೆಯ ಯಶೋಗಾಥೆಗಳು ಮತ್ತು ಗ್ರಾಮೀಣ ಬದುಕಿನ ಅನುಭವಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವುದು ನನ್ನ ಬರವಣಿಗೆಯ ಪ್ರಮುಖ ಉದ್ದೇಶವಾಗಿದೆ.

ಪುಸ್ತಕ ಪ್ರಕಟಣೆ ಮತ್ತು ಸಾಹಿತ್ಯಿಕ ಸಾಧನೆ

ಕೃಷಿ, ಸ್ವಉದ್ಯೋಗ, ಕೃಷಿಕರ ಸಾಧನೆಗಳು, ಮಹಿಳಾ ಸ್ವಾವಲಂಬನೆ, ಜೀವನಾನುಭವಗಳು ಹಾಗೂ ವಿಪತ್ತು ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಂತೆ ಇದುವರೆಗೆ 11 ಪುಸ್ತಕಗಳನ್ನು ರಚಿಸಿದ್ದೇನೆ.

ನನ್ನ ಪ್ರಕಟಿತ ಪುಸ್ತಕಗಳು:

  1. ಕೃಷಿ ಒಲಿದರೆ ಬಾಳು ಬಂಗಾರ
  2. ಬದುಕು ಬದಲಿಸಿತು ಹೊನ್ನ ಕೃಷಿ
  3. ಮಣ್ಣಲ್ಲಿ ಅರಳಿದ ಅನ್ನದಾತ
  4. ಸಬಲೆ
  5. ಸಾಧನೆಯ ಹಾದಿ
  6. ಸಿರಿಧಾನ್ಯ
  7. ಹಸಿರುಹೊನ್ನ ಗಣಿ
  8. ದೇಸಿ ಕೃಷಿ
  9. ಮರೆಯುವ ಮುನ್ನ
  10. ಭಾವಯಾನ
  11. ಶೌರ್ಯ ಆಪತ್ ಕಾಲದ ಆಪ್ತ ರಕ್ಷಕರು

ಈ ಪುಸ್ತಕಗಳನ್ನು ಮೈಸೂರಿನ ಸಾಗರಿ ಪ್ರಕಾಶನ ಮತ್ತು ನಿರಂತರ ಪ್ರಕಾಶನ ಪ್ರಕಟಿಸಿವೆ. ಶೌರ್ಯ ಆಪತ್ ಕಾಲದ ಆಪ್ತ ರಕ್ಷಕರು ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಕಟಿಸಿದೆ.

ಈ ಕೃತಿಗಳ ಮೂಲಕ ಕೃಷಿಯ ಮಹತ್ವ, ಕೃಷಿಕರ ಸಾಧನೆ, ಸ್ವಉದ್ಯೋಗದ ಅವಕಾಶಗಳು, ಮಹಿಳೆಯರ ಸ್ವಾವಲಂಬನೆ ಮತ್ತು ಸಮಾಜಮುಖಿ ಕಾರ್ಯಗಳ ಅನುಭವಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದೇನೆ.

ನನ್ನ ವೃತ್ತಿಪರ ದೃಷ್ಟಿಕೋನ

ಗ್ರಾಮೀಣಾಭಿವೃದ್ಧಿ, ಕೃಷಿ, ವಿಪತ್ತು ನಿರ್ವಹಣೆ ಮತ್ತು ಸಾಹಿತ್ಯ — ಈ ನಾಲ್ಕು ಕ್ಷೇತ್ರಗಳ ಅನುಭವಗಳು ನನ್ನ ವೃತ್ತಿಜೀವನಕ್ಕೆ ವಿಭಿನ್ನ ಆಯಾಮಗಳನ್ನು ನೀಡಿವೆ. ಸಮುದಾಯದೊಂದಿಗೆ ಕೆಲಸ ಮಾಡುವುದು, ಸ್ವಯಂಸೇವಕರ ಸಾಮರ್ಥ್ಯವನ್ನು ಬೆಳೆಸುವುದು, ತರಬೇತಿಯ ಮೂಲಕ ಜ್ಞಾನ ಹಂಚಿಕೊಳ್ಳುವುದು ಹಾಗೂ ಬರವಣಿಗೆಯ ಮೂಲಕ ಅನುಭವಗಳನ್ನು ದಾಖಲಿಸುವುದು ನನ್ನ ವೃತ್ತಿಪರ ಪಯಣದ ಪ್ರಮುಖ ಭಾಗಗಳಾಗಿವೆ.

ಮುಂದಿನ ದಿನಗಳಲ್ಲಿಯೂ ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಸಮುದಾಯದ ಸನ್ನದ್ಧತೆಯನ್ನು ಬಲಪಡಿಸುವುದು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಉತ್ತಮ ಕಾರ್ಯಗಳನ್ನು ದಾಖಲಿಸುವುದು ಹಾಗೂ ಜ್ಞಾನ ಮತ್ತು ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಕೊಡುಗೆ ನೀಡುವುದು ನನ್ನ ಆಶಯವಾಗಿದೆ.

ವೃತ್ತಿಪರ ಆಸಕ್ತಿಗಳು: ವಿಪತ್ತು ನಿರ್ವಹಣೆ | ಸ್ವಯಂಸೇವಕರ ತರಬೇತಿ | ಗ್ರಾಮೀಣಾಭಿವೃದ್ಧಿ | ಕೃಷಿ ಬರವಣಿಗೆ | ಅಭಿವೃದ್ಧಿ ಪತ್ರಿಕೋದ್ಯಮ | ಪುಸ್ತಕ ರಚನೆ | ಜ್ಞಾನ ಹಂಚಿಕೆ

ಪ್ರಸ್ತುತ ಕಾರ್ಯಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ), ಕೇಂದ್ರ ಕಚೇರಿ ಧರ್ಮಸ್ಥಳ. ಕರ್ನಾಟಕ, ಭಾರತ

ಮೂಲ ಸ್ಥಳ: ಕೋಡಕಣಿ ಗ್ರಾಮ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ.

Share Article
Previous ಅಂಕೋಲಾ: ಸ್ವಚ್ಚತಾ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ, ಅಂಕೋಲಾ ಮತ್ತು ಕಣಗಿಲ್ ಶೌರ್ಯ ಘಟಕದಿಂದ ವಿಶೇಷ ಕಾರ್ಯ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved