ಪುಣಚ ದಂಬೆ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಸ್ವಚ್ಛಗೊಳಿಸಿ ಸಾಮಾಜಿಕ ಪ್ರಜ್ಞೆ ಮೆರೆದ ಸ್ವಯಂಸೇವಕರು
ವಿಟ್ಲ: ಶಾಲೆಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶಾಲಾ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದ ಅಳಿಕೆ ಘಟಕದ ಸ್ವಯಂಸೇವಕರು ಪುಣಚ ದಂಬೆಯ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಒಂದು ದಿನದ ಸ್ವಚ್ಛತಾ ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಶಾಲೆಯ ವಾರ್ಷಿಕೋತ್ಸವದ ಸಿದ್ಧತೆಯ ಅಂಗವಾಗಿ ಶಾಲಾ ಆವರಣ ಮತ್ತು ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಮ ನಾಯ್ಕ ಹಾಗೂ ಶಾಲೆಯ ಶಿಕ್ಷಕರು ಶೌರ್ಯ ತಂಡದ ಸಹಕಾರವನ್ನು ಕೋರಿದ್ದರು.
ವಿಟ್ಲ ತಾಲ್ಲೂಕಿನಲ್ಲಿ ವಿಪತ್ತು ನಿರ್ವಹಣಾ ಸೇವೆ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಳಿಕೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಶಾಲೆಯ ಮನವಿಗೆ ತಕ್ಷಣ ಸ್ಪಂದಿಸಿ ಶ್ರಮದಾನಕ್ಕೆ ಮುಂದಾದರು.
ಬೆಳಿಗ್ಗೆ 9 ಗಂಟೆಗೆ ಆರಂಭವಾದ ಸ್ವಚ್ಛತಾ ಕಾರ್ಯ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಶಾಲಾ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆಯಿದ್ದ ಸಮೀಪದ ಮರಗಳ ಗೆಲ್ಲುಗಳನ್ನು ತೆರವುಗೊಳಿಸಲಾಯಿತು. ಶಾಲಾ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಪರಿಸರವನ್ನು ಅಚ್ಚುಕಟ್ಟಾಗಿ ಹಾಗೂ ಸುಂದರವಾಗಿ ರೂಪಿಸುವ ಕಾರ್ಯವನ್ನು ಸ್ವಯಂಸೇವಕರು ಶ್ರಮಪಟ್ಟು ನಿರ್ವಹಿಸಿದರು.

ಈ ಶ್ರಮದಾನದಲ್ಲಿ ಶೌರ್ಯ ಘಟಕದ ಸಂಯೋಜಕಿ ಸರಸ್ವತಿ, ತಾಲ್ಲೂಕು ಸಮಿತಿಯ ಮಾಸ್ಟರ್ ದೀಪಕ್ ಹಾಗೂ ಘಟಕದ ಸದಸ್ಯರಾದ ಅಮಿತ್, ಪುಟ್ಟಣ್ಣ, ಪ್ರೇಮ, ಗಣೇಶ್, ಲಕ್ಷ್ಮಣ್, ವಿನೋದ್, ಕುಶಾಲಪ್ಪ, ರವೀಶ್ ಮತ್ತು ಚಂದ್ರಶೇಖರ್ ಭಾಗವಹಿಸಿ ಸೇವೆ ಸಲ್ಲಿಸಿದರು.
ಶಾಲೆಯ ಅಭಿವೃದ್ಧಿ ಮತ್ತು ಸ್ವಚ್ಛತಾ ಕಾರ್ಯಕ್ಕೆ ಸ್ವಯಂಪ್ರೇರಿತವಾಗಿ ಕೈಜೋಡಿಸಿದ ಶೌರ್ಯ ಸ್ವಯಂಸೇವಕರ ಸೇವೆಯನ್ನು ವಿಟ್ಲ ತಾಲ್ಲೂಕು ಯೋಜನಾಧಿಕಾರಿ ಸುರೇಶ್, ಶಾಲೆಯ ಮುಖ್ಯೋಪಾಧ್ಯಾಯರಾದ ಸಮಂತ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಮ ನಾಯ್ಕ ಹಾಗೂ ಗ್ರಾಮಸ್ಥರು ಮೆಚ್ಚಿ ಕೃತಜ್ಞತೆ ಸಲ್ಲಿಸಿದರು.

ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವುದು ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುವುದು ಶೌರ್ಯ ತಂಡದ ಸೇವಾ ಮನೋಭಾವದ ಪ್ರತಿಬಿಂಬವಾಗಿದೆ. ವಿಪತ್ತು ನಿರ್ವಹಣೆಯ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿಯೂ ಅಳಿಕೆ ಶೌರ್ಯ ತಂಡ ಮಾದರಿಯಾಗಿದೆ.