ಕಾಡು ಗಿಡಗಂಟಿಗಳ ತೆರವು, ಮನೆ ಸ್ವಚ್ಛತೆ ಹಾಗೂ ಸುರಕ್ಷತೆಗೆ ಸ್ವಯಂಸೇವಕರಿಂದ ಶ್ರಮದಾನ
ಬೈಂದೂರು: ಸಂಕಷ್ಟದಲ್ಲಿರುವ ಮಹಿಳೆಯೊಬ್ಬರ ಬದುಕಿಗೆ ನೆರವಿನ ಹಸ್ತ ಚಾಚುವ ಮೂಲಕ ಗಂಗೊಳ್ಳಿಯ ಶ್ರೀ ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ.

ಬೈಂದೂರು ತಾಲ್ಲೂಕಿನ ಗಂಗೊಳ್ಳಿಯ ಮಲ್ಯರ್ ಬೆಟ್ಟು ನಿವಾಸಿ ಲಕ್ಷ್ಮೀ ಸಂಜೀವ ಪೂಜಾರಿ (54) ಅವರು ಒಂಟಿಯಾಗಿ ವಾಸಿಸುತ್ತಿದ್ದು, ಬಡತನದ ಕಾರಣದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇವರ ಮನೆಯ ಸುತ್ತಮುತ್ತ ದಟ್ಟವಾಗಿ ಬೆಳೆದಿದ್ದ ಕಾಡು ಗಿಡಗಂಟಿಗಳನ್ನು ತೆರವುಗೊಳಿಸಿ, ಮನೆಗೆ ತೆರಳುವ ದಾರಿಯನ್ನು ಸುಗಮಗೊಳಿಸುವುದರ ಜೊತೆಗೆ ಮನೆಯ ಒಳಭಾಗ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಶೌರ್ಯ ತಂಡದ ಸದಸ್ಯರು ನೆರವಾಗಿದ್ದಾರೆ.
ಮೂರು ವರ್ಷಗಳಿಂದ ಮಾಸಿಕ ಮಾಶಾಸನದ ನೆರವು:
ಲಕ್ಷ್ಮೀ ಸಂಜೀವ ಪೂಜಾರಿ ಅವರ ಆರ್ಥಿಕ ಸಂಕಷ್ಟವನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ಮೂರು ವರ್ಷಗಳಿಂದ ಪ್ರತಿ ತಿಂಗಳು ರೂ.1,000 ಮಾಶಾಸನ ನೀಡುತ್ತಾ ಜೀವನ ನಿರ್ವಹಣೆಗೆ ನೆರವಾಗುತ್ತಿದೆ.
ಇತ್ತೀಚೆಗೆ ಬೈಂದೂರು ತಾಲ್ಲೂಕಿನ ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ಅವರು ಮಾಶಾಸನ ಫಲಾನುಭವಿಯಾದ ಲಕ್ಷ್ಮೀ ಸಂಜೀವ ಪೂಜಾರಿ ಅವರ ಆರೋಗ್ಯ ಮತ್ತು ಕುಶಲೋಪರಿ ವಿಚಾರಿಸಲು ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಮನೆಯ ಪರಿಸ್ಥಿತಿ ಕಂಡು ಯೋಜನೆಯ ಕಾರ್ಯಕರ್ತರಿಗೆ ಆತಂಕವಾಯಿತು.

ಮನೆಯ ಸುತ್ತಮುತ್ತ ದಟ್ಟವಾಗಿ ಬೆಳೆದಿದ್ದ ಗಿಡಗಂಟಿಗಳಿಂದಾಗಿ ಮನೆ ಎಲ್ಲಿದೆ ಎಂಬುದೇ ದೂರದಿಂದ ತಿಳಿಯದಂತಿತ್ತು. ಮನೆಗೆ ತೆರಳುವ ದಾರಿಯೂ ಗಿಡಗಂಟಿಗಳಿಂದ ಮುಚ್ಚಿಹೋಗಿತ್ತು. ಅವುಗಳನ್ನು ತೆರವುಗೊಳಿಸುತ್ತಾ ಮನೆಯವರೆಗೆ ತಲುಪಬೇಕಾದ ಪರಿಸ್ಥಿತಿ ಇತ್ತು.
ಮನೆಯ ಒಳಭಾಗದಲ್ಲಿಯೂ ಹಳೆಯ ಬಟ್ಟೆಬರೆಗಳು ಹಾಗೂ ಇತರ ವಸ್ತುಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ಮನೆಯ ಕಿಟಕಿ ಮತ್ತು ಬಾಗಿಲುಗಳಿಲ್ಲದ ಕಾರಣ ಸುರಕ್ಷತೆಯ ಸಮಸ್ಯೆಯೂ ಎದುರಾಗಿತ್ತು. ಹುಳ-ಹುಪ್ಪಟೆ ಹಾಗೂ ಸರಿಸೃಪಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆಯಿತ್ತು. ರಾತ್ರಿ ವೇಳೆ ಮನೆಯಲ್ಲಿ ವಾಸಿಸುವುದೂ ಕಷ್ಟಕರವಾಗಿದ್ದರಿಂದ ಕೆಲವೊಮ್ಮೆ ಅವರು ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದರು.
ಶೌರ್ಯ ತಂಡದಿಂದ ಒಂದು ದಿನದ ಶ್ರಮದಾನ
ಮಹಿಳೆಯ ಸಂಕಷ್ಟವನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಗಂಗೊಳ್ಳಿಯ ಶ್ರೀ ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಸಹಕಾರದೊಂದಿಗೆ ಮನೆ ಮತ್ತು ಪರಿಸರವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು.
ಅದರಂತೆ ಶೌರ್ಯ ತಂಡದ ಸದಸ್ಯರು ಶ್ರಮದಾನಕ್ಕೆ ಮುಂದಾದರು. ಮನೆಯವರೆಗೆ ತೆರಳುವ ದಾರಿಯುದ್ದಕ್ಕೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು. ಮನೆಯ ಸುತ್ತಮುತ್ತ ದಟ್ಟವಾಗಿ ಬೆಳೆದಿದ್ದ ಅನಗತ್ಯ ಗಿಡಗಳನ್ನು ಕಡಿದು ಪರಿಸರವನ್ನು ಸ್ವಚ್ಛಗೊಳಿಸಿದರು. ಮನೆಯ ಆವರಣವನ್ನು ಸ್ವಚ್ಛಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ಸ್ವಯಂಸೇವಕರು ಇಡೀ ದಿನ ಶ್ರಮಿಸಿ ಮನೆಗೆ ಹೊಸ ಕಳೆ ತಂದರು.
ಮನೆ ಸುರಕ್ಷತೆಗೂ ನೆರವು
ಲಕ್ಷ್ಮೀ ಅವರಿಗೆ ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರಾಗಿದ್ದರೂ, ಆರ್ಥಿಕ ಸಂಕಷ್ಟದಿಂದಾಗಿ ಮನೆಯ ನಿರ್ಮಾಣ ಮತ್ತು ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಕಿಟಕಿ ಮತ್ತು ಬಾಗಿಲುಗಳ ಅಳವಡಿಕೆಯೂ ಬಾಕಿ ಉಳಿದಿತ್ತು.
ಈ ಪರಿಸ್ಥಿತಿಯನ್ನು ಅರಿತ ಶೌರ್ಯ ತಂಡದ ಸದಸ್ಯರು ಮನೆಯ ಒಳಭಾಗವನ್ನು ಸ್ವಚ್ಛಗೊಳಿಸಿ, ಕಿಟಕಿ ಮತ್ತು ಬಾಗಿಲುಗಳ ಭಾಗಕ್ಕೆ ತಾತ್ಕಾಲಿಕ ಸುರಕ್ಷತಾ ವ್ಯವಸ್ಥೆ ಮಾಡಿಕೊಟ್ಟರು. ಮನೆಯ ಮಾಡು ಹಾಗೂ ಗೋಡೆಗಳನ್ನು ಸ್ವಚ್ಛಗೊಳಿಸಿ, ಮನೆ ಮತ್ತು ಪರಿಸರವನ್ನು ಸಾಧ್ಯವಾದಷ್ಟು ವಾಸಯೋಗ್ಯವಾಗಿಸುವ ಪ್ರಯತ್ನ ಮಾಡಿದರು.
ವಿಪತ್ತು ಸೇವೆಯೊಂದಿಗೆ ಸಾಮಾಜಿಕ ಕಳಕಳಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂಪುಗೊಂಡಿರುವ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡಗಳು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ವಿವಿಧ ಮಾನವೀಯ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿವೆ.
ಯೋಜನೆಯ ಕಾರ್ಯಕರ್ತರು ಸಂಕಷ್ಟದಲ್ಲಿರುವ ಈ ಮಹಿಳೆಯ ಪರಿಸ್ಥಿತಿಯನ್ನು ವಿವರಿಸಿ, ಮನೆ ಪರಿಸರದ ಸ್ವಚ್ಛತೆಗೆ ಸಹಕಾರ ಕೋರಿದಾಗ ಗಂಗೊಳ್ಳಿ ಶೌರ್ಯ ತಂಡದ ಸದಸ್ಯರು ತಕ್ಷಣ ಸ್ಪಂದಿಸಿ ಶ್ರಮದಾನಕ್ಕೆ ಮುಂದಾದರು.

ಈ ಸೇವಾ ಕಾರ್ಯದಲ್ಲಿ ಘಟಕದ ಸದಸ್ಯರಾದ ಮಹೇಶ್, ಭೂಷಣ್, ಪ್ರಶಾಂತ್, ಮಣಿಕಂಠ, ವಿಶ್ವನಾಥ, ರಾಘವೇಂದ್ರ, ನಾಗರಾಜ, ರಾಧಾ, ಗೋಪಾಲ, ಸುಂದರ, ಗಣೇಶ, ಮಂಜುನಾಥ ಹಾಗೂ ಸುರೇಶ್ ಅವರು ಭಾಗವಹಿಸಿ ಸಹಕರಿಸಿದರು.
ಸ್ವಯಂಸೇವಕರ ಈ ಮಾನವೀಯ ಸೇವೆಗೆ ಬೈಂದೂರು ತಾಲ್ಲೂಕು ಯೋಜನಾಧಿಕಾರಿ ಸಂಜಯ ರವರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ಅವರು ಶ್ರಮದಾನದ ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಿದರು.
ನೆರವಿನ ಹಿಂದಿರುವ ಮಾನವೀಯ ಕಾಳಜಿ
ಬಡತನದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾಶಾಸನದ ನೆರವು ನೀಡುವುದಷ್ಟೇ ಅಲ್ಲದೆ, ಅವರ ನೈಜ ಪರಿಸ್ಥಿತಿಯನ್ನು ಅರಿತು ಅಗತ್ಯವಿರುವ ಸಂದರ್ಭದಲ್ಲಿ ನೇರವಾಗಿ ಸಹಾಯಹಸ್ತ ಚಾಚುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.
ಒಬ್ಬಂಟಿಯಾಗಿ ಬದುಕುತ್ತಿರುವ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಮನೆ ಮತ್ತು ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಗಂಗೊಳ್ಳಿ ಶೌರ್ಯ ತಂಡದ ಸ್ವಯಂಸೇವಕರು ಸೇವೆಯ ನಿಜವಾದ ಅರ್ಥವನ್ನು ಸಾರಿದ್ದಾರೆ.