
ಧಾರವಾಡ: (11.07.2020) ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಅಡಿಯಲ್ಲಿ ವಿಪತ್ತು ನಿರ್ವಹಣೆ ಸಂಯೋಜಕರ ಒಂದು ದಿನದ ತರಬೇತಿ ಕಾರ್ಯಾಗಾರ ಇಂದು ಧಾರವಾಡದ ರಾಯಾಪುರದಲ್ಲಿರುವ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಜನಜಾಗೃತಿ ನಿರ್ದೇಶನಾಲಯದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಹಾಗೂ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಕಾಶ್ ಭಟ್ ಅವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಧಾರವಾಡ ಮತ್ತು ನವಲಗುಂದ ತಾಲೂಕಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಿಗೆ ಹಮ್ಮಿಕೊಳ್ಳಲಾದ ಈ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಕಾಶ್ ಭಟ್ ಅವರು ಮಾತನಾಡಿ ಸ್ವಯಂಸೇವಕರು ಜನರೊಂದಿಗೆ ಬೆರೆಯಬೇಕು. ಅವರೊಂದಿಗೆ ಕುಳಿತು, ಅವರನ್ನು ಒಳಗೊಂಡು ನಾವು ಉದ್ದೇಶಿಸಿರುವ ಕಾರ್ಯಕ್ರಮ ಅವರದೇ ಕಾರ್ಯಕ್ರಮ ಎಂದು ಅವರು ತಿಳಿಯುವಂತಾಗಬೇಕು. ಅವರೊಂದಿಗೆ ಉತ್ತಮ ಸಮಯ ಕಳೆಯುವಂತಾಗಬೇಕು. ಸೇವಾಕಾರ್ಯಕ್ಕೆ ಸಂಯೋಜಕರಾದವರು ಮೊದಲು ಹೆಜ್ಜೆಯನ್ನಿಡಿ. ನಂತರ ಸ್ವಯಂಸೇವಕರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಸದ್ಯಕ್ಕೆ ಕೋವಿಡ್ ವಿಪತ್ತು ಬಗ್ಗೆ ತಮಗೆಲ್ಲಾ ಗೊತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸೇಶನ್, ಮಾಸ್ಕ್ ಧರಿಸುವುದು ಮರೆಯಬೇಡಿ ಎಂದರು.

ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಜಿಲ್ಲಾ ನಿರ್ದೇಶಕರಾದ ಶ್ರೀ ಸುರೇಶ್ ಮೊಯಿಲಿ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಒಂದು ಉತ್ತಮವಾದ ವಿಪತ್ತು ನಿರ್ವಹಣಾ ಘಟಕವನ್ನು ರಚಿಸಬೇಕು. ಸರ್ಕಾರದೊಂದಿಗೆ ಕೈಜೋಡಿಸಿ ವಿಪತ್ತು ಎದುರಿಸಲು ಸನ್ನದ್ಧತೆಯಿಂದ ಇರಬೇಕು ಎಂದರು.ಉದ್ಘಾಟನೆ ಕಾರ್ಯಕ್ರಮದ ನಂತರ ಸಂಯೋಜಕರನ್ನು ಉದ್ದೇಶಿಸಿ ಮಾತನಾಡಿದ ಜನಜಾಗೃತಿ ನಿರ್ದೇಶನಾಲಯದ ಮಾನ್ಯ ಪ್ರಾದೇಶಿಕ ನಿರ್ದೇಶಕರು ವಿಪತ್ತು ಎಲ್ಲರಿಗೂ ಬರುತ್ತದೆ. ಯಾವಾಗ ನಮಗೆ ವಿಪತ್ತು ಬರಬಹುದು ಎನ್ನುವ ಭಯ ನಮ್ಮೆಲ್ಲರಲ್ಲಿಯೂ ಇದೆ. ನಾನು ಬದುಕಬೇಕು ಎನ್ನುವುದು ಪ್ರಥಮ ಆದ್ಯತೆ. ಆದಾಗ್ಯೂ ನಾನು ಬದುಕಿ ಇನ್ನೊಬ್ಬರನ್ನೂ ಬದುಕಿಸಬೇಕು. ಎಲ್ಲರೂ ಚೆನ್ನಾಗಿರುವಂತೆ ನೋಡಿಕೊಳ್ಳಬೇಕೆನ್ನುವ ಹಂಬಲ ಇರಬೇಕು ಎಂದರು.ಕಾರ್ಯಕ್ರಮ ಅನುಷ್ಠಾನ ಮಾಡುವವರು ಮೂರು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಾಳಜಿ ವಹಿಸುವುದು, ಬದ್ಧತೆ ತೋರುವುದು, ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿರುವುದು ಬಹಳ ಅಗತ್ಯ ಎಂದರು.ಸಂಯೋಜಕರು ಉತ್ತಮ ಸಂವಹನ, ಸಹಯೋಗ, ಗುರಿ, ಸಂಘಟನೆ, ದೃಷ್ಟಿಕೋನ, ಮಾಹಿತಿ ಸಂಗ್ರಹ ಹೊಂದಿರಬೇಕು. ನಾಯಕತ್ವ ಗುಣ ಹೊಂದಿರಬೇಕು. ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು ಎಂದರು.ಧಾರವಾಡ ತಾಲ್ಲೂಕು ಯೋಜನಾಧಿಕಾರಿ ಶ್ರೀ ಉಲ್ಲಾಸ್ ಮೇಸ್ತ, ನವಲಗುಂದ ತಾಲ್ಲೂಕಿನ ಯೋಜನಾಧಿಕಾರಿ ಶ್ರೀ ಓಮು ಮರಾಠೆ, ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್ ಉಪಸ್ಥಿತರಿದ್ದರು.

ನವಲಗುಂದ ಹಾಗೂ ಧಾರವಾಡ ತಾಲ್ಲೂಕಿನ ಕೃಷಿ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಮತ್ತು ಸಂಯೋಜಕರುಗಳು ಹಾಜರಿದ್ದರು.