
ಧಾರವಾಡ, ಅಗಸ್ಟ್ 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಅಡಿಯಲ್ಲಿ ಧಾರವಾಡ ತಾಲ್ಲೂಕಿನ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ಎನ್.ಡಿ.ಆರ್.ಎಫ್ ಮೂಲಕ ತರಬೇತಿ ಕಾರ್ಯಕ್ರಮ ಇಂದು ನಡೆಯಿತು.ಧಾರವಾಡ ತಾಲೂಕಿನ ದಂಡಾಧಿಕಾರಿ ಡಾ. ಸಂತೋಷ್ ಕುಮಾರ್ ಪಾಟೀಲ್ ರವರು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿ ವಿಪತ್ತು ನಿರ್ವಹಣೆಯಲ್ಲಿ ತಾಲ್ಲೂಕು ಪಂಚಾಯತ ಸಕ್ರಿಯವಾಗಿ ತೊಡಗಿಕೊಂಡಿದೆ. ನಮ್ಮ ಜೊತೆಗೆ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಸೇರಿಕೊಂಡು ಕೆಲಸ ಮಾಡಿದರೆ ವಿಪತ್ತು ನಿರ್ವಹಣೆ ಪರಿಣಾಮಕಾರಿಯಾಗಿ ಮಾಡಬಹುದು ಎಂದರು. ಧರ್ಮಸ್ಥಳ ಸೇವಾ ಘಟಕಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿಯವರು ವಿಪತ್ತು ನಿರ್ವಹಣಾ ಕಾರ್ಯಕ್ರಮ ಅತಿ ಅಗತ್ಯವಿರುವ ಕಾರ್ಯಕ್ರಮ. ಪೂಜ್ಯರು ಸಕಾಲದಲ್ಲಿ ಇದನ್ನು ಆರಂಭಿಸಿದ್ದಾರೆ. ಸೇವಾ ಘಟಕದ ಮೂಲಕ ಸ್ವಯಂ ಸೇವಕರಿಗೆ ನೈಜ ಜೀವನದಲ್ಲಿ ಹೀರೋ ಆಗಲು ಅವಕಾಶ ಲಭ್ಯವಾಗಿದೆ. ಎಲ್ಲರೂ ದೊರೆತಿರುವ ಅವಕಾಶ ಬಳಸಿಕೊಳ್ಳಿರಿ ಎಂದರು.ಜನಜಾಗೃತಿ ನಿರ್ದೆಶನಾಲಯದ ಪ್ರಾದೇಶಿಕ ನಿರ್ದೆಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್, ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೆಶಕರಾದ ಶ್ರೀ ದುಗ್ಗೇಗೌಡ, ತರಬೇತಿ ಕೇಂದ್ರದ ನಿರ್ದೆಶಕರು ಡಾ. ಪ್ರಕಾಶ್ ಭಟ್, ಧಾರವಾಡ ಜಿಲ್ಲಾ ನಿರ್ದೆಶಕರಾದ ಶ್ರೀ ಸುರೇಶ್ ಎಂ, ತಾಲ್ಲೂಕು ಯೋಜನಾಧಿಕಾರಿ ಶ್ರೀ ಉಲ್ಲಾಸ್ ಮೇಸ್ತ, ಶ್ರೀ ಜೈವಂತ ಪಟಗಾರ್, ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗೇಶ್ ಅವರು ಉಪಸ್ಥಿತರಿದ್ದರು.

110 ಸ್ವಯಂ ಸೇವಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಉದ್ಘಾಟನೆ ಕಾರ್ಯಕ್ರಮದ ನಂತರ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬೆಣ್ಣೆ ಹೊಳೆ ನದಿಪಾತ್ರದಲ್ಲಿ ಎನ್.ಡಿ.ಆರ್.ಎಫ್ ಪಡೆಯಿಂದ ಪ್ರಾತ್ಯಕ್ಷಿಕೆ ತರಬೇತಿ ನಡೆಸಲಾಯಿತು. ಹಗ್ಗದ ಮೂಲಕ ಕಾರ್ಯಾಚರಣೆ, ಲೈಫ್ ಬಾಯ್ ಮೂಲಕ ಅಪಾಯದಲ್ಲಿರುವವರ ರಕ್ಷಣೆ, ಪ್ರಥಮ ಚಿಕಿತ್ಸೆ ಹೀಗೆ ಹಲವು ವಿಷಯಗಳ ಬಗ್ಗೆ NDRF ತಂಡ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿತು.
ನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಡಾ. ಎಲ್.ಎಚ್ ಮಂಜುನಾಥ್ ಅವರು ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಂದು ಬಡವರು ಸಹ ದಾನಿಗಳಾಗಿ ಬದಲಾಗಿದ್ದಾರೆ. ಮನುಷ್ಯರಲ್ಲಿ ಸಹಜವಾಗಿಯೇ ಇನ್ನೊಬ್ಬರ ಬಗ್ಗೆ ಮಾನವೀಯತೆ ವ್ಯಕ್ತಪಡಿಸುವ ಗುಣ ಇದೆ. ಅವರಿಗೆ ಅದನ್ನು ತಿಳಿಸಿಕೊಡಬೇಕು. ಸೇವೆಗೆ ಪರಿಮಿತಿ ಎನ್ನುವುದು ಇಲ್ಲ. ಧಾರವಾಡದ ಜನತೆ ಸಹಜವಾಗಿಯೇ ಸೇವಾಪರರು. ಮಾನವೀಯತೆ, ಇನ್ನೊಬ್ಬರ ಬಗ್ಗೆ ಕಾಳಜಿ ತೋರುವ ಮನೋಭಾವ ಅವರಲ್ಲಿ ಇದೆ ಎಂದರು.

ಜನಜಾಗೃತಿ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಸ್ವಯಂಸೇವಕರಿಗೆ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಿದರು.ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ದುಗ್ಗೇಗೌಡ ಅವರು ಕಾರ್ಯಕ್ರಮದುದ್ದಕ್ಕೂ ಜೊತೆಯಲ್ಲಿ ಇದ್ದು ಮಾರ್ಗದರ್ಶನ ನೀಡಿದರು. ಜಿಲ್ಲೆಯ ನಿರ್ದೇಶಕರಾದ ಶ್ರೀ ಸುರೇಶ್ ಮೊಯ್ಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರೇರಣೆ ನೀಡಿದರು. ತಾಲ್ಲೂಕಿನ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಕೃಷಿ ಮೇಲ್ವಿಚಾರಕರು, ವಿಪತ್ತು ನಿರ್ವಹಣಾ ಸಂಯೋಜಕರು ಉಪಸ್ಥಿತರಿದ್ದರು.