
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಅತಿಯಾದ ಮಳೆಯಿಂದಾಗಿ ಕೃಷ್ಣಾ ನದಿ ತೀರದಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿ ದಡದಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ತೆರವುಗೊಳಿಸಲು ರೈತರಿಗೆ ಸಹಕಾರ ನೀಡುವ ಕೆಲಸವನ್ನು ಇಂಗಳಿಯ “ ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮಾಡಿದರು.

ಅತಿಯಾದ ಮಳೆಯ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ನೀರು ನುಗ್ಗುತ್ತಿದ್ದು, ನದಿ ದಡದಲ್ಲಿ ಅಳವಡಿಸಲಾದ ನೀರೆತ್ತುವ ಪಂಪ್ ಗಳನ್ನು ಮೇಲೆತ್ತದೇ ಇದ್ದಲ್ಲಿ ಕೊಚ್ಚಿಕೊಂಡು ಹೋಗುವ ಆತಂಕವಿತ್ತು. ಇಂಗಳಿ ಗ್ರಾಮದ ನದಿ ತೀರದಲ್ಲಿ ಕೃಷಿ ಬೆಳೆಗೆ ನೀರೆತ್ತಲು ಹತ್ತಾರು ರೈತರು ಮೋಟಾರ್ ಗಳನ್ನು ಅಳವಡಿಸಿದ್ದರು.

ಅನಿರೀಕ್ಷಿತವಾಗಿ ನೀರು ಅಪಾಯದ ಮಟ್ಟಕ್ಕೆ ಬರುತ್ತಿರುವುದನ್ನು ಗಮನಿಸಿದ ಸ್ವಯಂಸೇವಕರು ನದಿ ತೀರಕ್ಕೆ ಧಾವಿಸಿ ಪಂಪ್ ಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿರುತ್ತಾರೆ. ಒಟ್ಟು 11 ಪಂಪ್ಸೆಟ್ಟುಗಳನ್ನು ಮೇಲೆತ್ತಿದ್ದು ಸಂಭಾವ್ಯ ಅಪಾಯ ತಪ್ಪಿಸಲು ರೈತರಿಗೆ ಸಹಕಾರ ನೀಡಿರುತ್ತಾರೆ.

“ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಸೇವೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.