ಶೌರ್ಯ ತುರ್ತು ಸ್ಪಂದನಾ ಸ್ವಯಂಸೇವಕರಿಂದ ಕಾರ್ಯಾಚರಣೆ
ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿ ಸಮೀಪದ ಕಕ್ಕೆಪದವು ಕುಂಡಡ್ಕ ಪ್ರದೇಶದಲ್ಲಿ ದಿನಾಂಕ ೧೯/೨೦/೨೦೨೨ ರಂದು ಸಂಜೆ ಭಾರೀ ಮಳೆಯ ಸಮಯದಲ್ಲಿ ಅಬ್ದುಲ್ ರಹಿಮಾನ್ ಎಂಬುವವರು ವೇಗವಾಗಿ ತೋಡಿನಲ್ಲಿ ಹರಿಯುತ್ತಿರುವ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ನೀರಿನಲ್ಲಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ತಡ ರಾತ್ರಿವರೆಗೂ ಸಿಗದೇ ಇರುವುದರಿಂದ ಸ್ಥಳೀಯರು ಈ ಕುರಿತು ಬೆಳಾಲು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಸುಲೈಮಾನ್ ರವರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಸ್ಪಂದಿಸಿದ ಇವರು ವಿಪತ್ತು ನಿರ್ವಹಣಾ ತುರ್ತು ಸ್ಪಂದನಾ ಘಟಕದ ಸ್ವಯಂಸೇವಕರಿಗೆ ಮಾಹಿತಿ ನೀಡಿದ್ದು ದಿನಾಂಕ ೨೦/೧೦/೨೦೨೨ ರಂದು ಬೆಳಿಗ್ಗೆ ಮುಳುಗು ತಜ್ಞ ಹರೀಶ ಕೂಡಿಗೆಯವರ ನೇತೃತ್ವದಲ್ಲಿ ಪತ್ತೆ ಕಾರ್ಯಾಚರಣೆ ನಡೆಯಿತು. ವ್ಯಕ್ತಿಯು ನಾಪತ್ತೆಯಾದ ಸ್ಥಳದಿಂದ ಶೋಧ ಕಾರ್ಯ ಪ್ರಾರಂಭ ಮಾಡಿದ್ದು, ಮೃತದೇಹ ೪ ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಥಳೀಯರು ಮೃತದೇಹ ಗುರುತಿಸಿದ್ದು ನದಿಯ ದಡಕ್ಕೆ ಮೃತದೇಹ ತಲುಪಿಸಿದ್ದರು. ಇಕ್ಕಟ್ಟಾದ ಸ್ಥಳದಿಂದ ಶೌರ್ಯ ಸ್ವಯಂಸೇವಕರು ಮೃತದೇಹವನ್ನು ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಮುಖ್ಯ ರಸ್ತೆಗೆ ತಲುಪಿಸಿ ಪೊಲೀಸರಿಗೆ ಒಪ್ಪಿಸಿರುತ್ತಾರೆ.
ಪುಂಜಾಲಕಟ್ಟೆ ಪೊಲೀಸರು ವಿಪತ್ತು ನಿರ್ವಹಣಾ ಸ್ವಯಂಸೇವಕರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ. ಸ್ವಯಂಸೇವಕರಾದ ಸುಲೈಮಾನ್ ಬೆಳಾಲು, ಸಂಜೀವ ಕೋಲ್ಪಾಡಿ, ಯಶೋಧರ ಮಂಡಾಲು, ಮಹಮ್ಮದ್ ಶರೀಫ್, ಪ್ರದೀಪ್ ಮೈರಾಜೆ, ಲೋಕೇಶ್, ಉಜಿರೆ ಘಟಕದ ರವೀಂದ್ರ, ಸುಧೀರ್, ನಡ ಕನ್ಯಾಡಿ ಘಟಕದ ಜಯರಾಮ್ ಶೋಧ ಕಾರ್ಯಾಚರಣೆ ನಡೆಸಿದರು.
ವರದಿ: ಆಶಾ, ಸಂಯೋಜಕರು, ಉಜಿರೆ– ಬೆಳಾಲು ಘಟಕ