
ಕಾಪು, ಫೆಬ್ರವರಿ 04, 2025: ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧೀಕಾರದ ವತಿಯಿಂದ ಎನ್.ಡಿ.ಆರ್ . ಎಫ್ 10 ನೇ ಬೆಟಾಲಿಯನ್ ತಂಡದಿಂದ ಇಂದು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಕಡಪಾಡಿ ಗ್ರಾಮದ ಗಣಪತಿ ವಿಸರ್ಜನಾ ಪಾಂಯ್ಟ್ ನಲ್ಲಿ ಪ್ರವಾಹ ಕುರಿತು ಅಣಕು ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು.
ಎನ್.ಡಿ.ಆರ್ . ಎಫ್ ಕಮಾಡರ್ ಶ್ರೀ ಪಿಂಟೋ ನಂದಿ, ತರಬೇತಿದಾರರಾದ ಶ್ರೀ ಅರ್ಜುನ್ ಇವರು ತರಬೇತಿ ನಡೆಸಿಕೊಟ್ಟರು. ಪ್ರವಾಹ ಕಾರ್ಯಾಚರಣೆಯಲ್ಲಿ ಮುಳುಗುತ್ತಿರುವ ವ್ಯಕ್ತಿಯ ರಕ್ಷಣೆ, ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಉಂಟಾಗಬಹುದಾದ ಮುಳುಗುವಿಕೆ, ಬೋಟ್, ದೋಣಿ ಮುಳುಗಿದಾಗ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ, ಅಣಕು ಪ್ರದರ್ಶನ ನಡೆಸಿದರು.

ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮುಳುಗುವ ವ್ಯಕ್ತಿಯ ರಕ್ಷಣೆ, ಪ್ರವಾಹ ಸಂದರ್ಭದಲ್ಲಿ ಬಚಾವಾಗಲು ಬಳಸಿಕೊಳ್ಳುವ ವಸ್ತುಗಳ ಬಗ್ಗೆ ವಿವರಣೆಯನ್ನು ನೀಡಲಾಯಿತು.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಗೆ ಉಡುಪಿ ಜಿಲ್ಲಾಡಳಿತ ಆಹ್ವಾನವನ್ನು ನೀಡಿದ್ದು ಕಾಪು, ಉಡುಪಿ ಮತ್ತು ಬ್ರಹ್ಮಾವರ ತಾಲ್ಲೂಕಿನ 114 ಸ್ವಯಂಸೇವಕರು ತರಬೇತಿಯಲ್ಲಿ ಪಾಲ್ಗೊಂಡರು.
ಉಡುಪಿ ಜಿಲ್ಲಾಡಳಿತದಿಂದ ಉಪ ಜಿಲ್ಲಾಧಿಕಾರಿ ಶ್ರೀ ನಾಗರಾಜ್ ರವರು ಜನ ಸಮುದಾಯಕ್ಕೆ ಪ್ರಾಣ ರಕ್ಷಣೆಯ ಬಗ್ಗೆ ತಿಳಿದಿರಬೇಕಾದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ವಿಪತ್ತಿನ ಸಂದರ್ಭದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸುವ ಬಗ್ಗೆ ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧೀಕಾರದ ವಿಪತ್ತು ನಿರ್ವಹಣಾ ಅಧಿಕಾರಿ ಶ್ರೀ ರವಿ ಇವರು ಕಾರ್ಯಕ್ರಮ ನಿರೂಪಿಸಿದರು. ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ, ಮೇಲ್ವಿಚಾರಕ ನಿತೇಶ್, ವಿಪತ್ತು ನಿರ್ವಹಣಾ ಘಟಕಗಳ ಮಾಸ್ಟರ್, ಕ್ಯಾಪ್ಟನ್, ಸಂಯೋಜಕರು, ಘಟಕ ಪ್ರತಿನಿಧಿಗಳು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

ಎನ್.ಡಿ.ಆರ್.ಎಫ್ ಪಡೆಯು ಉಡುಪಿ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷದ ಹಿಂದೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ತರಬೇತಿಯನ್ನು ನೀಡಿದ್ದರು. ಆ ದಿನಗಳನ್ನು ನೆನಪಿಸಿಕೊಂಡ ಎನ್.ಡಿ.ಆರ್.ಎಫ್ ಪಡೆಯ ಯೋಧರು ಮೂರು ವರ್ಷದ ಬಳಿಕವೂ ಅದೇ ಉತ್ಸಾಹದಲ್ಲಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಗಮನಿಸಿ ಶ್ಲಾಘನೆ ವ್ಯಕ್ತಪಡಿಸಿದರು.
