ಶಾಲೆಯಲ್ಲಿ ಕೈತೋಟ ರಚಿಸಿದ ಶೌರ್ಯ ಶ್ರೀ ಧರ್ಮಸ್ಥಳ ಅಜೆಕಾರು ಘಟಕ

ಹೆಬ್ರಿ, ಮಾರ್ಚ್, 04, 2025: ಶಾಲೆಯಲ್ಲಿ ಕೈತೋಟ ರಚನೆ ಮಾಡಿ, ಸಂರ್ವಕ್ಷಣೆಗೂ ಗಮನ ನೀಡಿ ಹುಲುಸಾದ ತಾಜಾ ತರಕಾರಿಗಳು ಮಕ್ಕಳಿಗೆ ಮದ್ಯಾಹ್ನ ಊಟಕ್ಕೆ ದೊರೆಯುವಂತೆ ಮಾಡಿ ಗಮನ ಸೆಳೆದಿದ್ದಾರೆ ಅಜೆಕಾರುವಿನ ಶೌರ್ಯ ಶ್ರೀ ಧರ್ಮಸ್ಥಳ ಘಟಕ ಸ್ವಯಂಸೇವಕರು.
ಬೇಡಿಕೆಯ ಮೇರೆಗೆ ಶ್ರಮದಾನ: ಸದಾ ಒಂದಿಲ್ಲೊಂದು ಸಮಾಜಪರ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಅಜೆಕಾರು ಘಟಕ ಹೆಬ್ರಿ ತಾಲ್ಲೂಕಿನಲ್ಲಿ ಸೇವೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಸಾರ್ವಜನಿಕ ಸಮಾರಂಭ, ಚಟುವಟಿಕೆಗಳಿಗೆ ಈ ಘಟಕದ ಸ್ವಯಂಸೇವಕರಿಗೆ ವಿಶೇಷ ಆಹ್ವಾನ ವಿರುತ್ತದೆ. ಸದಾ ಚಟುವಟಿಕೆಗಳಲ್ಲಿ ನಿರತರಾಗಿರುವ ಶೌರ್ಯ ಶ್ರೀ ಧರ್ಮಸ್ಥಳ ತಂಡದ ಬಗ್ಗೆ ಮಾಹಿತಿ ಪಡೆದಿದ್ದ ದಾಸಗದ್ದೆ ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲಾ ಆವರಣದಲ್ಲಿ ತರಕಾರಿ ಕೈತೋಟವನ್ನು ರಚನೆ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಆ ಪ್ರಕಾರವಾಗಿ ಘಟಕದ ಸ್ವಯಂಸೇವಕರು ದಿನ ನಿಗದಿಪಡಿಸಿ ಕೈತೋಟ ರಚನೆ ಮಾಡಿರುತ್ತಾರೆ.

ನಿರ್ವಹಣೆಗೂ ಗಮನ: ಸ್ವಯಂಸೇವಕರು ಕೈತೋಟ ರಚನೆ ಮಾಡುವ ಕೆಲಸವನ್ನು ಮಾತ್ರ ಮಾಡಿ ಸುಮ್ಮನೇ ಇರಲಿಲ್ಲ. ಬದಲಿಗೆ ಕೈತೋಟದ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡರು. ಕೆಲವು ಸ್ವಯಂಸೇವಕರ ಮನೆಗಳು ಶಾಲೆಯ ಸಮೀಪವೇ ಇರುವುದರಿಂದ ಆಗಾಗ ಕೈತೋಟವನ್ನು ನೋಡಿ ಬರುತ್ತಿದ್ದರು. ನೀರುಣಿಸುವುದು, ಗೊಬ್ಬರ ಹಾಕುವುದು, ಕಳೆ ಬರದಂತೆ ನೋಡಿಕೊಳ್ಳುವುದು, ಪ್ರಾಣಿಗಳಿಗೆ ಆಹಾರವಾಗದಂತೆ ತಡೆಯುವ ಕೆಲಸ ಮಾಡುತ್ತಿದ್ದರು. ಪರಿಣಾಮವಾಗಿ ಕೈತೋಟ ಹುಲುಸಾಗಿ ಬೆಳೆದಿದ್ದು ತರಕಾರಿ ಅಡುಗೆಗೆ ಲಭ್ಯವಾಗುತ್ತಿವೆ.

ಬಗೆಬಗೆಯ ತರಕಾರಿ: ಕೈತೋಟ ರಚನೆಯ ಪೂರ್ವ ಸಾಕಷ್ಠು ಸಿದ್ದತೆಗಳನ್ನು ನಡೆಸಿಕೊಂಡ ಸ್ವಯಂಸೇವಕರು ಸೂಕ್ತವಾದ ಸ್ಥಳವನ್ನು ಗುರುತಿಸಿ ಭೂಮಿಯನ್ನು ಹಸನುಗೊಳಿಸಿ, ಕೈತೋಟದ ಸುತ್ತಲೂ ಭದ್ರತೆಯ ವ್ಯವಸ್ಥೆ ಮಾಡಿದ್ದಾರೆ. ಮಡಿ ತಯಾರಿಸಿ, ಸಾವಯವ ಗೊಬ್ಬರ ಬಳಸಿ ಭೂಮಿಯನ್ನು ಬೀಜ ಬಿತ್ತನೆಗೆ ಹದಗೊಳಿಸಿದ್ದಾರೆ. ಬಸಳೆ, ಬದನೆ, ಬೆಂಡೆ, ಹರಿವೆ, ಅಲಸಂಡೆ, ನೆಲಬಸಳೆ ಹೀಗೆ ವಿಧ ವಿಧದ ತರಕಾರಿ ಬೀಜಗಳನ್ನು ಬಿತ್ತಿದ್ದಾರೆ. ಸೊಪ್ಪುಗಳನ್ನು ಭೂಮಿಗೆ ಊರಿದ್ದಾರೆ.

ಘಟಕದ ಸ್ವಯಂಸೇವಕರಾದ ಶ್ರೀಮತಿ ಸುಲೋಚನಾ ಇವರು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕೈತೋಟವನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಸ್ವಯಂಸೇವಕರಾದ ಪ್ರವೀಣ ಇವರ ಮನೆಯು ಶಾಲೆಯ ಸಮೀಪವೇ ಇರುವುದರಿಂದ ಗಮನ ವಹಿಸುತ್ತಿದ್ದಾರೆ. ಬೇಲಿಯ ಭದ್ರತೆಯನ್ನು ಕೈತೋಟಕ್ಕೆ ಮಾಡಲಾಗಿರುವುದರಿಂದ ಗಿಡಗಳು ಹಾಳಾಗುವುದು ತಪ್ಪಿವೆ.

ಬಿಸಿ ಊಟಕ್ಕೆ ತರಕಾರಿ:
ಶಾಲೆಯ ಬಿಸಿ ಊಟದ ತಯಾರಿಗೆ ಶಾಲಾ ಕೈತೋಟದ ಬದನೆ, ಹರಿವೆ, ಬಸಳೆ ಮತ್ತಿತರ ತರಕಾರಿಗಳು ಬಳಕೆಯಾಗುತ್ತಿವೆ. ಶಾಲೆಯಲ್ಲಿಯೇ ಕಣ್ಣೆದುರಲ್ಲಿಯೇ ಬೆಳೆದ ತರಕಾರಿಗಳನ್ನು ಗಮನಿಸುತ್ತಿರುವ ಮಕ್ಕಳು ಕೈತೋಟದೆಡೆಗೆ ಕುತೂಹಲ ಹೊಂದಿದ್ದಾರೆ. ಘಟಕದ ಸಂಯೋಜಕಿ ವಿಜಯ, ಸ್ವಯಂಸೇವಕರಾದ ಪ್ರವೀಣ್, ರಾಜೇಶ್, ಸುಶ್ಮಿತಾ, ರೇಷ್ಮಾ, ಪ್ರದೀಪ, ಅಶೋಕ, ಲಲಿತ, ಸುಲೋಚನಾ ಇವರು ಶ್ರಮದಾನವನ್ನು ನಡೆಸಿರುತ್ತಾರೆ.

ವಿಪತ್ತು ನಿರ್ವಹಣಾ ಘಟಕಗಳು ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಸಮುದಾಯದ ಗಮನ ಸೆಳೆಯಬಹುದು ಎನ್ನುವುದಕ್ಕೆ ಅಜೆಕಾರು ಘಟಕ ಉದಾಹರಣೆಯಾಗಿದೆ. ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸ್ವಯಂಸೇವಕರು ಈ ಘಟಕದಲ್ಲಿರುವುದು ಯಶಸ್ಸಿಗೆ ಕಾರಣವಾಗಿದೆ. ಘಟಕದ ಸ್ವಯಂಸೇವಕರ ಈ ಸೇವೆಗೆ ಶಾಲಾ ಶಿಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ