
ಮುಧೋಳ, ಮಾರ್ಚ್ 4: ತಾಲ್ಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ಟ್ಯಾಂಕ್ ನ್ನು ಗ್ರಾಮದ ಮುಖಂಡರಾದ ಮಹಾದೇವ ಸಿ. ನಾವ್ವಿ ಇವರು ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದು ಟ್ಯಾಂಕ್ ಕಟ್ಟೆ ಕಟ್ಟುವ ಮತ್ತು ಅಳವಡಿಕೆ ಮಾಡುವ ಕೆಲಸವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಮೆಟಗುಡ್ಡದ ಸ್ವಯಂಸೇವಕರು ನಡೆಸಿದರು.
ಕುಡಿಯುವ ನೀರಿನ ಟ್ಯಾಂಕ್ ಸುತ್ತಮುತ್ತಲಿನ ಸುಮಾರು 20 ಕುಟುಂಬಗಳ ನೀರಿನ ಅಗತ್ಯತೆಯನ್ನು ಪೂರೈಸುತ್ತಿದೆ. ಅಲ್ಲದೇ ಈ ಪ್ರದೇಶವು ರುದ್ರಭೂಮಿ ಸಮೀಪದಲ್ಲಿ ಇದ್ದು ರುದ್ರಭೂಮಿಯ ಅಗತ್ಯ ಬಳಕೆಗೆ ನೀರು ಅನುಕೂಲವಾಗುತ್ತಿದೆ.

ಗ್ರಾಮದಲ್ಲಿ ಜಾತ್ರೆ ಇರುವ ಹಿನ್ನೆಲೆಯಲ್ಲಿ ಟ್ಯಾಂಕ್ ಗೆ ಬಣ್ಣ ಬಳಿಯಲು ನಿರ್ಧರಿಸಿದ ಸ್ವಯಂಸೇವಕರು ಕೆಲಸವನ್ನು ಪೂರೈಸಿದ್ದಾರೆ.
ಮೆಟಗುಡ್ಡ ಘಟಕದ ಸ್ವಯಂಸೇವಕರು ಕಳೆದ ಮೂರು ವರ್ಷಗಳಿಂದ ಒಂದಲ್ಲಾ ಒಂದು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಗಳು, ಕೊಳವೆ ಬಾವಿ, ನಲ್ಲಿಯ ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಶ್ರಮದಾನವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.

ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚಗೊಳಿಸುವುದರೊಂದಿಗೆ ಬಣ್ಣ ಬಳಿದು ಅಂದಗೊಳಿಸಿದ ಸ್ವಯಂಸೇವಕರ ಸೇವೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಸಂಯೋಜಕರಾದ ಪಾರ್ವತಿ, ಘಟಕ ಪ್ರತಿನಿಧಿ ಎಚ್.ಎಸ್ ತೆಳಗಡೆ, ಸ್ವಯಂಸೇವಕರಾದ ಮಾರುತಿ, ಯಮನವ್ವ, ಮಾಹಾದೇವಿ, ಹಣಮಂತ .ಸರಸ್ವತಿ, ಶ್ರೀಶೈಲ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
