
ಪುತ್ತೂರು, ಮಾರ್ಚ್ 08, 2025: ಬೇಸಿಗೆಯ ಉರಿ ಬಿಸಿಲಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಕುಡಿಯುವ ನೀರಿನ ಬಾವಿಯಲ್ಲಿ ನೀರು ಬತ್ತುವುದನ್ನು ಕಾಣುತ್ತಿರುತ್ತೇವೆ. ವರ್ಷವಿಡೀ ನೀರನ್ನು ಪೂರೈಸುವ ಕುಡಿಯುವ ನೀರಿನ ಬಾವಿಗಳು ಎಪ್ರಿಲ್ ತಿಂಗಳ ವೇಳೆಗೆ ನೀರನ್ನು ಇಂಗಿಸಿಕೊಂಡು ಬಾವಿಯ ತಳ ಒಣಗಿರುವುದು ಅಲ್ಲಲ್ಲಿ ಕಂಡು ಬರುತ್ತದೆ.
ಪುತ್ತೂರು ತಾಲ್ಲೂಕಿನ ಬುಲೇರಿಕಟ್ಟೆ ಗ್ರಾಮದ ಸುಮಿತ್ರಾ ಇವರ ಮನೆಯ ಕುಡಿಯುವ ನೀರಿನ ಬಾವಿ ಇದೀಗ ನೀರು ಬತ್ತಿಸಿಕೊಂಡಿದೆ. ಕುಡಿಯುವ ನೀರಿಗಾಗಿ ಕಷ್ಠಪಟ್ಟು ಬಹಳ ದೂರ ಹೋಗಿ ತರಬೇಕಾದ ಅನಿವಾರ್ಯತೆ ಇವರಿಗಿದೆ. ಕಳೆದ ಮೂರು ತಿಂಗಳಿನಿಂದ ಬಾವಿಯ ನೀರು ಸಿಗದೇ ಬೇರೆಡೆಯಿಂದ ನೀರು ತರುತ್ತಿದ್ದಾರೆ.

ಬಾವಿಯಲ್ಲಿ ನೀರಿನ ಪಸೆ ಇರುವುದರಿಂದ ಇನ್ನಷ್ಟು ಆಳಗೊಳಿಸಿದರೆ ನೀರು ಸಿಗಬಹುದೆಂದು ಬಾವಿಯನ್ನು ಗಮನಿಸಿದ ಅನೇಕರು ಸಲಹೆ ನೀಡಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಬಾವಿಯ ಕೆಲಸ ಮಾಡಲು ಸಾಧ್ಯವಾಗದೇ ಇದ್ದರು.
ಇದೀಗ ನೀರಿನ ಸಮಸ್ಯೆ ಎಲ್ಲಾ ಕಡೆಗಳಲ್ಲಿ ಸಾಮಾನ್ಯವೆಂಬಂತೆ ಕೇಳಿಬರುತ್ತಿದೆ. ಎಲ್ಲರ ಮನೆಯಲ್ಲೂ ಬಾವಿ ನೀರನ್ನು ತಗ್ಗಿಸಿಕೊಂಡಿವೆ. ಉಳಿದವರಿಗೆ ನೀರು ಕೊಡುತ್ತಾ ಹೋದರೆ ತಮಗೆ ನೀರಿನ ಬರ ಎದುರಾಗಬಹುದು ಎಂದು ಹೆಚ್ಚಿನವರು ಬಾವಿಯ ನೀರನ್ನು ತೆಗೆಯಲು ಅವಕಾಶ ಮಾಡಿಕೊಡುವುದಿಲ್ಲ.

ಈ ಸಮಸ್ಯೆಯನ್ನು ಅರಿತ ಸುಮಿತ್ರಾ ಇವರು ತಮ್ಮ ಮನೆಯ ಬಾವಿಯ ಹೂಳನ್ನು ತೆಗೆಯಲು ನಿರ್ಧರಿಸಿದರು. ಶೌರ್ಯ ಶ್ರೀ ಧರ್ಮಸ್ಥಳದ ಬಲ್ನಾಡು ಘಟಕದ ಸ್ವಯಂಸೇವಕರಲ್ಲಿ ಕೇಳಿಕೊಂಡಿದ್ದರು.
ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಸುಮಿತ್ರಾ ಇವರ ಬಗ್ಗೆ ಅರಿತಿರುವ ಸ್ವಯಂಸೇವಕರು ಅವರ ಮನವಿಗೆ ಸ್ಪಂದಿಸಿ ಬಾವಿ ಸ್ವಚ್ಚತಾ ಶ್ರಮದಾನ ನಡೆಸಿದ್ದಾರೆ. ಸುಮಿತ್ರಾ ಇವರು ಘಟಕದ ಸದಸ್ಯೆಯಾಗಿ ಇರುವುದರಿಂದ ಗ್ರಾಮದಲ್ಲಿ ನಡೆಯುವ ಎಲ್ಲಾ ಸೇವಾ ಚಟುವಟಿಕೆಗಳಿಗೆ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಗ್ರಾಮದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಸ್ವಯಂಸೇವಕರು ತಮ್ಮದೇ ಘಟಕದ ಓರ್ವ ಸದಸ್ಯೆ ತೊಂದರೆಯಲ್ಲಿ ಇರುವಾಗ ಅ ವರ ಸಮಸ್ಯೆಗೆ ಸ್ಪಂದಿಸಬೇಕೆಂದು ನಿರ್ಧರಿಸಿದ ಘಟಕದ ಸದಸ್ಯರು ಶ್ರಮದಾನ ನಡೆಸಿದ್ದಾರೆ.

ಒಂದು ದಿನ ನಡೆದ ಸೇವೆಯಲ್ಲಿ ಬಾವಿಯಲ್ಲಿ ಇಳಿದು, ಕೆಸರು ಮಣ್ಣನ್ನು ತೆರವುಗೊಳಿಸಿ ಶುಭ್ರಗೊಳಿಸಿದ್ದಾರೆ. ಮೊದಲಿಗಿಂತಲೂ ಒಂಭತ್ತು ಅಡಿಗಳಷ್ಟು ಹೆಚ್ಚುವರಿ ಆಳ ಮಾಡಿದ್ದಾರೆ. ಪರಿಣಾಮ ನೀರಿನ ಸೆಲೆಗಳು ಬಾವಿಯಲ್ಲಿ ಕಾಣಿಸಿಕೊಂಡು ಕುಡಿಯಲು ಸಾಕಾಗುವಷ್ಟು ನೀರು ಸಿಗತೊಡಗಿದೆ.
“ಬಾವಿಯ ಕೆಲಸ ಮಾಡಬೇಕಾಗಿದ್ದಲ್ಲಿ 10,000 ಕ್ಕೂ ಹೆಚ್ಚು ಹಣ ಖರ್ಚು ಮಾಡಬೇಕಾಗಿತ್ತು. ಅಷ್ಟು ಹಣವನ್ನು ಸಾಲ ಮಾಡಿಯೇ ಪಾವತಿಸಬೇಕಾಗಿತ್ತು. ಆದರೆ ನಮ್ಮ ಊರಿನಲ್ಲಿ ಶೌರ್ಯ ತಂಡ ಇರುವುದರಿಂದ ಬಹಳ ಅನುಕೂಲವಾಯಿತು” ಎನ್ನುತ್ತಾರೆ ಸುಮಿತ್ರಾ.
ಬಾವಿ ಕೆಲಸ ಮಾಡಿಕೊಡಬೇಕೆಂದು ಸಂಯೋಜಕರು ಮತ್ತು ಘಟಕ ಪ್ರತಿನಿಧಿಗಳಲ್ಲಿ ಕೇಳಿಕೊಂಡಾಗ ಈ ವಿಷಯವನ್ನು ತಮ್ಮ ತಂಡದ ಸ್ವಯಂಸೇವಕರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ತಂಡದ ಸ್ವಯಂಸೇವಕರು ದಿನ ನಿಗದಿಪಡಿಸಿ ಬಾವಿಯ ಸ್ವಚ್ಚತಾ ಶ್ರಮದಾನ ನಡೆಸಿದ್ದಾರೆ. ಸ್ವಯಂಸೇವಕರಾದ ಕಾರ್ತಿಕ್,ರೋಷನ್, ಹರಿಪ್ರಸಾದ್, ಹರೀಶ್, ಸುಗಂಧಿ, ಇವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಸಂಯೋಜಕರಾದ ಆಶಾಲತಾ ಇದ್ದರು.