ಹಾವೆಂದರೆ ಬೆಚ್ಚಿ ಬೀಳುವುದು ಸಾಮಾನ್ಯ. ಎಲ್ಲಿಯೋ ದೂರದಲ್ಲಿ ಮನೆಯೊಳಗೆ ಉರಗ ಸೇರಿಕೊಂಡರೆ ನಮ್ಮ ಮನೆಯೊಳಗೂ ಬಂದುಬಿಟ್ಟಿದೆಯೇನೋ ಎಂಬAತೆ ಭಯಭೀತಿಗೊಳ್ಳುವವರ ಸಂಖ್ಯೆ ಅಧಿಕವಿದೆ. ಅರಿತೋ ಅರಿಯದೆಯೋ ಮನೆಯ ಪರಿಸರದೊಳಗೆ ಸೇರಿಕೊಂಡ ಹಾವು ಕಡಿಯುತ್ತದೆಯೋ ಬಿಡುತ್ತದೆಯೋ ಗೊತ್ತಿಲ್ಲ. ಆ ಸ್ಥಳದ ಸುತ್ತಮುತ್ತಲಿನ ಜನರ ಎದೆ ಬಡಿತವಂತೂ ಜೋರಾಗುವುದು ಸಾಮಾನ್ಯ. ಒಟ್ಟಿನಲ್ಲಿ ಹಾವು, ‘ನಾವು‘ ಭೀತಿಗೊಳ್ಳುವಂತೆ ಮಾಡುತ್ತದೆ.
ಬೆಳ್ತಂಗಡಿ ತಾಲ್ಲೂಕಿನ ನಡ ಕನ್ಯಾಡಿಯ ಸುತ್ತಲಿನ ನಾಲ್ಕಾರು ಗ್ರಾಮಗಳ ಜನವಸತಿ ಸ್ಥಳಗಳಲ್ಲಿ ಹಾವು ಸಂಚರಿಸಿದರೆ ಮಂಜುನಾಥ್ ಅವರ ಫೋನ್ ರಿಂಗಣಿಸುತ್ತದೆ. ವೃತ್ತಿಯಲ್ಲಿ ವಾಹನ ಚಾಲಕರಾಗಿರುವ ಮಂಜುನಾಥ್ ಕ್ಷಣ ವ್ಯಯಿಸದೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಶುರು ಮಾಡುತ್ತಾರೆ.
ಉರಗ ಪ್ರೇಮಿಯಾದ ಇವರು ಒಂದು ದಶಕದಿಂದ ಹಾವಿನ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಇಪ್ಪತ್ತೊಂದನೇ ನೇ ವಯಸ್ಸಿನಲ್ಲಿ ಮೊದಲ ಹಾವು ಹಿಡಿದ ನೆನಪು ಇವರಿಗಿದೆ. ಇದುವರೆಗೆ ಐನೂರಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಹರಿಯ ಬಿಟ್ಟಿದ್ದಾರೆ. ಹೆಬ್ಬಾವು, ಕಾಳಿಂಗ ಸರ್ಪ, ನಾಗರ ಹಾವು ಹೀಗೆ ಯಾವುದೇ ವಿಷಕಾರಿ ಹಾವುಗಳಿರಲಿ, ಊರಿಗೆ ಬಂದ ಅವುಗಳನ್ನು ಕಾಡಿನ ದಾರಿ ತೋರುವ ಕೆಲಸವನ್ನು ಮಂಜುನಾಥ್ ಮಾಡುತ್ತಾರೆ. ತನ್ಮೂಲಕ ಜನರ ಭೀತಿಯನ್ನು ಹೋಗಲಾಡಿಸುತ್ತಾರೆ .
ಸಾಮಾಜಿಕ ಸೇವೆಯಲ್ಲಿ ಸದಾ ಸಕ್ರಿಯವಾಗಿರುವ ಇವರು ತಮ್ಮ ಗ್ರಾಮಗಳಲ್ಲಿ ಮಾತ್ರವಲ್ಲದೇ ತಾಲ್ಲೂಕಿನ ಯಾವುದೇ ಸ್ಥಳಗಳಲ್ಲಿ ವಿಪತ್ತಿನಲ್ಲಿರುವವರ ರಕ್ಷಣೆಗೆ ಮುಂದಾಗುತ್ತಾರೆ. ಆರೋಗ್ಯ ತಪ್ಪಿದವರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು, ಗ್ರಾಮದಲ್ಲಿ ನಡೆಯುವ ಸೇವಾ ಚಟುವಟಿಕೆಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಇವರು ರೂಢಿಸಿಕೊಂಡ ಅಭ್ಯಾಸ.
‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿ ಬೆಳ್ತಂಗಡಿಯ ನಡ/ಕನ್ಯಾಡಿ ಘಟಕದ ಸ್ವಯಂಸೇವಕರಾದ ಮಂಜುನಾಥ್ “ಶೌರ್ಯ” ತಂಡದ ಆಪತ್ಕಾಲದ ಬಾಂಧವರ ಪೈಕಿ ಒಬ್ಬರು…
ಸಂಪರ್ಕಿಸಲು: 9591335100