ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಬೇಕಾದ ಅಗತ್ಯವಿದೆ: ಸಂದೀಪ್ ಜಿ. ಎಸ್

ಸೈಬರ್ ಅಪರಾಧಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕಂಪ್ಯೂಟರ್, ಮೊಬೈಲ್ ಅಥವಾ ಇಂಟರ್ನೆಟ್ ನೆಟ್ವರ್ಕ್ ಬಳಸಿ ಡಿಜಿಟಲ್  ಸಾಧನಗಳ ಮೂಲಕ ನಡೆಸುವ ಕಾನೂನು ಬಾಹೀರ ಕೃತ್ಯ ಇದಾಗಿದೆ. ಹಣಕಾಸಿನ ವಂಚನೆ ಸಹಿತವಾಗಿ ಅನೇಕ ಅಪರಾಧಿಕ ಕೃತ್ಯವನ್ನು ಇದರ ಮೂಲಕ ಮಾಡಲಾಗುತ್ತಿದೆ. ಇವುಗಳಿಗೆ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಿತ್ತಿದೆ. ಸೈಬರ್ ಅಪರಾಧದ ವಶಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಇವುಗಳಿಂದ ಅತ್ಯಂತ ಜಾಗರೂಕರಾಗಿರಬೇಕಾದ ಅಗತ್ಯವಿದೆ ಎಂದು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೀಪ್ ಜಿ. ಎಸ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವತಿಯಿಂದ ಜೂನ್.14 ರಂದು ಕಾರ್ಕಳದ ಶ್ರೀ ದುರ್ಗಾ ಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರಿಗೆ ಎನ್.ಡಿ.ಆರ್.ಎಫ್ ಯೋಧರಿಂದ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಮ್ಮ ಮೊಬೈಲ್ ಗಳಿಗೆ ಲಿಂಕ್ ಕಳುಹಿಸಿ, ಕರೆ ಮಾಡುವ ಅಪರಿಚಿತರು ಯಾವುದೇ ಆಮೀಷವನ್ನು ಒಡ್ಡಿ ಲಿಂಕ್ ತೆರೆಯುವಂತೆ ಪ್ರೇರೇಪಣೆ ಮಾಡುತ್ತಾರೆ. ಬ್ಯಾಂಕ್ ರವರ ಹೆಸರಿನಲ್ಲಿ, ಪೊಲೀಸರ ಹೆಸರಿನಲ್ಲಿ ಫೋನ್ ಕರೆ ಮಾಡುವ ಇವರು ತಾವು ಕಳುಹಿಸಿದ ಲಿಂಕ್ ಓಪನ್ ಮಾಡುವಂತೆ ಮಾಹಿತಿ ನೀಡುತ್ತಾರೆ. ಒಂದು ವೇಳೆ ಅವರು ಹೇಳಿದಂತೆ ಲಿಂಕ್ ತೆರೆದರೆ  ಬ್ಯಾಂಕ್ ಖಾತೆಯಲ್ಲಿನ ಎಲ್ಲಾ ಹಣ ಅಪರಿಚಿತರ ಖಾತೆಗೆ ವರ್ಗಾವಣೆಯಾಗುತ್ತದೆ. ಕಾರ್ಕಳದಲ್ಲಿ ಇಂತಹ ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ನಾವೆಲ್ಲರೂ ಜಾಗೃತರಾಗಿರಬೇಕಾದ ಅಗತ್ಯವಿದೆ ಎಂದರು.

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಆನ್ ಲೈನ್ ಮೂಲಕ ಸಾಲ ಪಡೆದುಕೊಳ್ಳಿ ಎನ್ನುವ ಫೋನ್ ಕರೆಗಳು ಬಂದಲ್ಲಿ ಅವುಗಳಿಗೆ ಮೋಸ ಹೋಗಬೇಡಿ. ಮೊಬೈಲ್ ಆಪ್ ಮೂಲಕ ನೀಡುವ ಸಾಲಗಳು ನಮ್ಮ ಜೀವನವನ್ನೇ ಹಾಳು ಮಾಡಿಬಿಡಬಹುದು ಅತ್ಯಂತ ಜಾಗರೂಕರಾಗಿದ್ದು ಇಂತಹವುಗಳಿಂದ ದೂರವಿರಬೇಕು.

ಒಂದು ವೇಳೆ ಇಂತಹವುಗಳಿಂದ ನೀವು ಅಥವಾ ಯಾರೇ ಆಗಲಿ ಮೋಸ ಹೋದರೆ ಅದನ್ನು ಮುಚ್ಚಿಡದೇ ಘಟನೆ ಸಂಭವಿಸಿದ ಒಂದು ಗಂಟೆಯ ಒಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಂಡು ಅಪರಾಧಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ತಡವಾದಲ್ಲಿ ಯಾವುದೇ ಕುರುಹು ಸಿಗದಂತೆ ಸೈಬರ್ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ಪೊಲೀಸರಿಗೆ ಮಾಹಿತಿ ನೀಡಲು 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದರು.

ವಾಹನ ಚಾಲನೆ ಮಾಡುವಾಗ ವಾಹನ ಚಾಲನೆ ಪರವಾನಗಿ ಹೊಂದಿರಬೇಕು. ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ವಿಮೆ ಇಲ್ಲದೇ ವಾಹನವನ್ನು ಓಡಿಸಬಾರದು. ಅಪ್ರಾಪ್ತರಿಗೆ ವಾಹನವನ್ನು ನೀಡಬಾರದು. ಒಂದು ವೇಳೆ ಅಪ್ರಾಪ್ತರಿಗೆ ವಾಹನ ನೀಡಿದಲ್ಲಿ ರೂ.25,000 ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರು ವಾಹನ ಓಡಿಸುವಾಗ ದುರ್ಘಟನೆಗಳಾದರೆ ವಿಮೆ ಕ್ಲೈಮ್ ಆಗುವುದಿಲ್ಲ. ಅಪಘಾತದಲ್ಲಿ ತೊಂದರೆಗೆ ಒಳಗಾದವರಿಗೆ ಸಂಪೂರ್ಣ ಹಣವನ್ನು ವಾಹನದ ಮಾಲಕರು ಸ್ವಂತವಾಗಿ ಭರಿಸಬೇಕಾಗುತ್ತದೆ ಎಂದರು.

ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಬಾರದು. ಸಿಗರೇಟ್, ಗಾಂಜಾ, ಆಫೀಮು ಮುಂತಾದ ವ್ಯಸನಗಳಿಗೆ ಬಲಿಯಾಗಬಾರದು. ವಿಪತ್ತು ನಿರ್ವಹಣೆಯಂತಹ ಕೆಲಸ ಮಾಡುವವರು ಇಂತಹವುಗಳಿಂದ ದೂರವಿರಬೇಕು.

ಯಾವುದೇ ಪ್ರದೇಶದಲ್ಲಿ ಜಗಳ, ಗಲಭೆ, ಗಲಾಟೆ, ಅಪರಿಚಿತ ವ್ಯಕ್ತಿಯ ಸಂಶಯಾಸ್ಪದ ಓಡಾಟ, ಅಪಘಾತ ಮತ್ತಿತರ ಘಟನೆಗಳು ನಡೆದಾಗ ತಕ್ಷಣ ಪೊಲೀಸ್ ಇಲಾಖೆಯ 112 ಹೆಲ್ಪ್ ಲೈನ್ ನಂಬರ್ ಗೆ ಫೋನ್ ಮಾಡಿ ತಿಳಿಸಬೇಕು. 24/7 ಪೊಲೀಸರು ಸಹಕಾರ ನೀಡಲು ಸಿದ್ದರಿರುತ್ತಾರೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜನಸಮುದಾಯದ ಅಭಿವೃದ್ದಿಗೆ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿಪತ್ತು ನಿರ್ವಹಣಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಗೆ ತರಬೇತಿಯನ್ನು ನೀಡಿ ವಿಪತ್ತು ನಿರ್ವಹಣಾ ಕೌಶಲ್ಯಗಳನ್ನು ಕಲಿಸಿಕೊಡುತ್ತಿರುವುದು ಅತ್ಯಂತ ಸೂಕ್ತವಾದ ಕೆಲಸವಾಗಿದೆ ಎಂದರು.

ಎನ್.ಡಿ.ಆರ್.ಎಫ್ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯ ರವರ ನೇತ್ರತ್ವದಲ್ಲಿ ಎನ್.ಡಿ.ಆರ್.ಎಫ್ ಯೋಧರು 85 ಮಂದಿ ಸ್ವಯಂಸೇವಕರಿಗೆ ವಿಪತ್ತು ನಿರ್ವಹಣಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು.

ಜನಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ವೃಷಭರಾಜ್ ಕಡಂಬ, ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಶ್ವರರಾದ ಗಿರೀಶ್ ರಾವ್, ಕಾರ್ಕಳ ತಾಲ್ಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಜನಜಾಗೃತಿ ಮೇಲ್ವಿಚಾರಕ ನಿತೇಶ್, ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಸದಾನಂದ, ಕ್ಯಾಪ್ಟನ್ ಮಾಧವ ಭಂಡಾರ್ಕರ್ ಉಪಸ್ಥಿತರಿದ್ದರು.

Share Article
Previous ವಿಟ್ಲ: ಅತಿಯಾದ ಮಳೆಯಿಂದ ಹಾನಿಯಾದ ಮನೆ, ರಿಪೇರಿಗೆ ಸಹಕಾರ ನೀಡಿದ ಕೇಪು ಶೌರ್ಯ ತಂಡ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved