7 ಬಡ ಕುಟುಂಬಗಳ ಮನೆ ರಿಪೇರಿ; ಮಳೆಯಲ್ಲಿ ಕಾಡಿದ ಸಮಸ್ಯೆಗೆ ಕಾಡಬೆಟ್ಟು ಶೌರ್ಯ ಘಟಕದ ಸ್ಪಂದನೆ

ಬಡತನ. ಕಷ್ಠದಲ್ಲಿ ದಿನದೂಡಬೇಕಾದ ಅನಿವಾರ್ಯತೆ. ದೈನಂದಿನ ಖರ್ಚುಗಳನ್ನು ನಿಭಾಯಿಸಲು ಹರಸಾಹಸ ಪಡಬೇಕು. ಪರಿಸ್ಥಿತಿ ಹೀಗಿರುವಾಗ ಮಳೆಗಾಲದಲ್ಲಿ ವಾಸದ ಮನೆ ಹಾನಿಯಾಗಿ ಖರ್ಚಿನ ದಾರಿ ತೆರೆದುಕೊಂಡರೆ ನಿಭಾಯಿಸುವುದು ಹೇಗೆ? ಈ ಪ್ರಶ್ನೆ ಬಡವರಿಗೆ ಕಾಡುತ್ತದೆ. ಹಳೆಯ ಮನೆಯಲ್ಲಿ ವಾಸವಾಗಿರುವ ಅವರಿಗೆ ಹಾನಿಯಾದ ಸೂರಿನ ರಿಪೇರಿ ಕಠಿಣವೆನ್ನಿಸುತ್ತದೆ. ಇಂತಹ ಸಂದರ್ಭದಲ್ಲಿ ಆ ಕುಟುಂಬಗಳ ನೆರವಿಗೆ ಧಾವಿಸಿ ಸಹಕಾರ ನೀಡಿದರೆ ಅಂತಹವರು ಆಪತ್ ಬಾಂಧವರಾಗುತ್ತಾರೆ. ಬಂಟ್ವಾಳ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಘಟಕದ ಸದಸ್ಯರು ಇಂತಹ ಏಳು ಕುಟುಂಬಗಳ ಪಾಲಿಗೆ ಆಪತ್ಬಾಂಧವರಾಗಿದ್ದಾರೆ.

ಸಂಭಾವ್ಯ ವಿಪತ್ತು ತಡೆ:

ಮಳೆ ಬಂದು ವಾಸದ ಮನೆ ಹಾನಿಯಾದ ನಂತರ ನಾವು ರಿಪೇರಿ ಮಾಡಿಕೊಡೋಣ ಎಂದು ಕಾಯುವವರಲ್ಲ ‘ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರು. ಬಂಭವನೀಯ ವಿಪತ್ತುಗಳನ್ನು ಗುರುತಿಸಿ ಮುನ್ನೆಚ್ಚರಿಕೆಯ ಭಾಗವಾಗಿ ಅಗತ್ಯ ಕಾರ್ಯಗಳನ್ನು ಇವರು ಮಾಡುತ್ತಾರೆ. ವಾಸದ ಮನೆಯ ಮೇಲೆಯಾಗಲಿ, ವಿದ್ಯುತ್ ತಂತಿಯ ಮೇಲೆಯಾಗಲಿ, ಮರ ಬೀಳುವ ಸಂಭವನೀಯತೆಯಿದ್ದರೆ ತೆರವುಗೊಳಿಸಿ ಅಪಾಯವನ್ನು ತಪ್ಪಿಸುತ್ತಾರೆ. ಪ್ರವಾಹದ ಸಮಸ್ಯೆಗೆ ಸೇತುವೆ ಅಥವಾ ಕಿಂಡಿ ಆಣೆಕಟ್ಟುಗಳಲ್ಲಿ ಸಿಲುಕಿದ ಮರಮಟ್ಟುಗಳು ಕಾರಣವಾಗಬಾರದೆಂದು ತೆರವುಗೊಳಿಸುತ್ತಾರೆ. ಸಂಭವನೀಯ ವಿಪತ್ತುಗಳು ಏನೇ ಇರಲಿ ಅದರ ಬಗ್ಗೆ ಮುಂಚೆಯೇ ಯೋಚಿಸಿ ಹಾನಿಯನ್ನು ಕಡಿತಗೊಳಿಸಲು ಅಥವಾ ವಿಪತ್ತುಗಳಾಗದಂತೆ ತಡೆಯಲು ಯೋಜನೆ ರೂಪಿಸುತ್ತಾರೆ.

ಮಳೆ ಬಂದ ನಂತರ ಎದುರಾಗುವ ಸಮಸ್ಯೆಗಳಿಗೆ ಕೈಜೋಡಿಸುವುದು ಉತ್ತಮ ಕಾರ್ಯವಾದರೆ ಮಳೆಗಾಲ ಬರುವ ಮುನ್ನವೇ ಎಚ್ಚೆತ್ತುಕೊಂಡು ಸಂಭಾವ್ಯ ವಿಪತ್ತುಗಳ ತಡೆಗೆ ಪ್ರಯತ್ನಿಸುವುದು ಅತ್ಯುತ್ತಮ ಕಾರ್ಯವಾಗಿದೆ. ಇಂತಹ ಅತ್ಯುತ್ತಮ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ “ಶೌರ್ಯ” ಶ್ರೀ ಧರ್ಮಸ್ಥಳ ತಂಡದ ಸ್ವಯಂಸೇವಕರು ಮಾಡಿದ್ದಾರೆ.

ಬಡವರ ಮನೆಗಳ ರಿಪೇರಿ:

          ಮಳೆಗಾಲಕ್ಕೆ ಮುಂಚಿತವಾಗಿ ಮನೆಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಎಲ್ಲರೂ ಯೋಚಿಸುತ್ತಾರೆ. ಎಲ್ಲಿ ಸೋರಬಹುದು. ಹೊಸ ಹಂಚುಗಳನ್ನು ಎಲ್ಲಿ ಹಾಕಬೇಕು? ಶೀಟು ಹೊದಿಸಬೇಕೆ? ಹಳೆಯ ಮೇಲ್ಚಾವಣಿ ಬದಲಿಸಬೇಕೆ? ಹೀಗೆ ಯೋಚನೆಗಳನ್ನು ಮಳೆಗಾಲಕ್ಕೂ ಮೊದಲೇ ಮಾಡಿಕೊಂಡು ಸರಿಪಡಿಸಿಕೊಳ್ಳುವ ಕೆಲಸವನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಕಷ್ಠದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ತಮ್ಮ ವಾಸದ ಮನೆಗಳು ಸೋರುತ್ತಿದ್ದರೆ, ಮೇಲ್ಚಾವಣಿ ಕುಸಿಯುವ ಭೀತಿಯಲ್ಲಿದ್ದರೆ ಸರಿಪಡಿಸುವ ಕೆಲಸವನ್ನು ಮಾಡಿಕೊಳ್ಳುವುದು ಕಷ್ಠವಾಗುತ್ತದೆ. ಇದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡಗಳು ಬಡವರು, ನಿರ್ಗತಿಕರು, ತೊಂದರೆಯಲ್ಲಿರುವವರನ್ನು ಗುರುತಿಸಿ, ಅವರ ವಾಸದ ಮನೆಗಳನ್ನು ರಿಪೇರಿ ಮಾಡಿಕೊಡುವ ಕೆಲಸವನ್ನು ಮಾಡುತ್ತಿದೆ.

 ಬಂಟ್ವಾಳ ತಾಲ್ಲೂಕಿನ ಕಾಡಬೆಟ್ಟು ವಗ್ಗ ‘ಶೌರ್ಯ’ ಘಟಕ ಇಂತಹ ಕಾರ್ಯವನ್ನು ಮಾಡುವುದರಲ್ಲಿ ಸದಾ ಮುಂದಿಗೆ. 2026 ರ ಜೂನ್ ತಿಂಗಳಲ್ಲಿ ಒಟ್ಟು ಏಳು ಬಡ ಕುಂಟುಬಗಳ ವಾಸದ ಮನೆಗಳನ್ನು ರಿಪೇರಿ ಮಾಡಿಕೊಟ್ಟು ಆ ಕುಟುಂಬಗಳು ಎದುರಿಸಬಹುದಾದ ಸಂಭಾವ್ಯ ವಿಪತ್ತುಗಳನ್ನು ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ.

1 ನೇ ಮನೆ:

ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದ ಕೊಪ್ಪಳ ಮನೆ ನಿವಾಸಿ ಸುಂದರಿ{53) ಎನ್ನುವವರು ತೀರಾ ಬಡತನದಲ್ಲಿದ್ದಾರೆ. ಒಂಟಿಯಾಗಿರುವ ಇವರು ಸೋರುತ್ತಿದ್ದ ತಮ್ಮ ಮನೆಯನ್ನು ರಿಪೇರಿ ಮಾಡಿಕೊಳ್ಳಲೂ ಹಣವಿಲ್ಲದೇ ಕಷ್ಠದಲ್ಲಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಶಾಸನ ಪಡೆಯುತ್ತಿರುವ ಇವರು ಮಳೆಯಲ್ಲಿ ಸೋರುತ್ತಿರುವ ಮನೆಯಲ್ಲಿಯೇ ಕಷ್ಠಪಟ್ಟು ವಾಸವಾಗಿದ್ದರು. ಇದನ್ನು ಗುರುತಿಸಿದ ಯೋಜನೆಯ ಕಾರ್ಯಕರ್ತರು ಶೌರ್ಯ ತಂಡದವರಿಗೆ ಮಾಹಿತಿ ನೀಡಿದ್ದರು.   ಸ್ಥಳಕ್ಕೆ ತೆರಳಿದ ಸ್ವಯಂಸೇವಕರು ಮನೆ ರಿಪೇರಿ ಕೆಲಸವನ್ನು ಮಾಡಿಕೊಟ್ಟಿದ್ದಾರೆ.

ಮನೆಗೆ ಹೊದಿಸಿದ್ದ ರೀಪು ಪಕ್ಕಾಸುಗಳು ಹಾಳಾಗಿದ್ದು ಬದಲಿಸಬೇಕಾದ ಅಗತ್ಯತೆಯಿತ್ತು. ಒಡೆದ ಹಂಚುಗಳನ್ನಷ್ಟೇ ಬದಲಿಸಿದರೆ ಮನೆಯ ಸೋರುವ ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಅದು ತಾತ್ಕಾಲಿಕ ಪರಿಹಾರವಷ್ಟೇ ಆಗುತ್ತಿತ್ತು. ಮೇಲ್ಚಾವಣಿಯ ರೀಪು, ಪಕ್ಕಾಸುಗಳು ಗಟ್ಟಿಯಿಲ್ಲದೇ ಇರುವುದರಿಂದ ಅವುಗಳನ್ನು ಬದಲಿಸಬೇಕಾಗಿತ್ತು. ಇದನ್ನು ಅರಿತ ಸ್ವಯಂಸೇವಕರು ಹಂಚುಗಳನ್ನು  ತೆಗೆದು ರೀಪು ಮತ್ತು ಪಕ್ಕಸುಗಳನ್ನು ಬದಲಿಸಿ, ಹೊಸದಾಗಿ ಹಾಕಿದ್ದಾರೆ. ಮಳೆಗಾಲದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ರಿಪೇರಿ ಕೆಲಸವನ್ನು ಪೂರೈಸಿದ್ದಾರೆ.  ಸುಂದರಿಯವರ ಮನೆಯೀಗ ಸುಂದರವಾಗಿದ್ದು ಮಳೆಗಾಳಿಗೆ ಗಟ್ಟಿ ನಿಲ್ಲುವಂತಾಗಿದೆ.

2ನೇ ಮನೆ:

ಕಾಡೆಬೆಟ್ಟು ಗ್ರಾಮದ ಗುತ್ತಿನ ಬಳಿಯ ರಮಣಿ(55) ಎನ್ನುವವರು ತನ್ನ ಮಗನೊಂದಿಗೆ ವಾಸವಿದ್ದಾರೆ. ಮಗ  ಬುದ್ಧಿಮಾಂದ್ಯನಾಗಿರುವುದರಿಂದ ಜೀವನ ಕಷ್ಠವಾಗಿದೆ. ಮಳೆಗಾಲದಲ್ಲಿ ಮನೆಯ ಮೇಲ್ಚಾವಣಿ ಕುಸಿಯುವ ಭೀತಿಯಿತ್ತು. ಭಯದಲ್ಲಿ ವಾಸವಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಶಾಸನ ಪಡೆಯುತ್ತಿರುವ ಇವರ ಕಷ್ಠವನ್ನು ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರು ತಿಳಿದು ಶೌರ್ಯ ತಂಡದವರಿಗೆ ಮಾಹಿತಿ ನೀಡಿದ್ದಾರೆ. ಮನೆಗೆ ತೆರಳಿದ ಸ್ವಯಂಸೇವಕರು ಸೋರುತ್ತಿರುವ ಮನೆಯನ್ನು ಸರಿಪಡಿಕೊಟ್ಟಿದ್ದಾರೆ.

3ನೇ ಮನೆ:

ಕಾಡಬೆಟ್ಟು ಗ್ರಾಮದ ಬೈರ್ಲ್ಚಿಲ್ ಮನೆ ಎಂಬಲ್ಲಿನ ರಾಮಕ್ಕು(70) ಅವರ ಮನೆ ಬಹಳ ಸೋರುತ್ತಿತ್ತು. ಮಗ ಬುದ್ಧಿಮಾಂದ್ಯನಾಗಿದ್ದು ಕುಟುಂಬ ಕಷ್ಠದಲ್ಲಿದೆ. ಮಳೆಯಿಂದ ಮನೆ ಬಹಳವಾಗಿ ಸೋರುತ್ತಿತ್ತು. ವಿಷಯ ತಿಳಿದ ಶೌರ್ಯ ತಂಡದವರು ರೀಪು ಮತ್ತು ಪಕ್ಕಾಸುಗಳನ್ನು ಹೊಸತು ಹಾಕಿ ಶೀಟು ಹೊದಿಸಿ ಸರಿಪಡಿಸಿಕೊಟ್ಟಿದ್ದಾರೆ.

4ನೇ ಮನೆ:

ಕಾಡಬೆಟ್ಟು ಗ್ರಾಮದ ಕೆರೆ ಕೋಡಿ ಮನೆ ಎಂಬಲ್ಲಿ ರುಕ್ಮಿಣಿ(56) ಎನ್ನುವವರ ಮನೆಯನ್ನು ಶೌರ್ಯ ತಂಡದ ಸದಸ್ಯರು ರಿಪೇರಿ ಮಾಡಿಕೊಟ್ಟಿದ್ದಾರೆ. ತೀರ ಬಡತನದಲ್ಲಿರುವ ಇವರ ಮಗ ಬುದ್ಧಿಮಾಂದ್ಯನಾಗಿದ್ದು, ಒಬ್ಬರ ದುಡಿತದಿಂದ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಮಳೆಯಿಂದ ಇವರ ಮನೆ ಸೋರುತಿದ್ದು ರಿಪೇರಿ ಮಾಢಿಕೊಡಲು ಸಹಾಯ ಮಾಡುವಂತೆ ಶೌರ್ಯ ಘಟಕಕ್ಕೆ ಮನವಿ ಮಾಡಿಕೊಂಢಿದ್ದರು. ಇದಕ್ಕೆ ಸ್ಪಂದಿಸಿದ ಧರ್ಮಸ್ಥಳ ಶೌರ್ಯ ಘಟಕದ ಸದಸ್ಯರು ಮನೆಯ ಹಂಚು ತೆಗೆದು ರೀಪು ಪಕ್ಜಾಸ್ ಜೋಡಿಸಿ, ಹೊಸದಾಗಿ ಸೀಟುಗಳನ್ನು ಅಳವಡಿಸಿಕೊಟ್ಟಿದ್ದಾರೆ.

5ನೇ ಮನೆ:

ಕಾವಳಪಡೂರು ಗ್ರಾಮದ ಮದ್ವ ಮನೆ ಎಂಬಲ್ಲಿ ಬೇಬಿ(61) ಎನ್ನುವವರು ಮನೆ ಮಳೆಯಿಂಧ ಸೋರುತ್ತಿರುವ ಹಿನ್ನೆಲೆಯಲ್ಲಿ ಮನೆ ರಿಪೇರಿ ಮಾಡಿಕೊಡುವಂತೆ ಶೌರ್ಯ ಘಟಕದವರಲ್ಲಿ ವಿನಂತಿ ಮಾಡಿಕೊಂಡಿದ್ದರು.  ಇದಕ್ಕೆ ಸ್ಪಂದಿಸಿದ ಶೌರ್ಯ ತಂಡದ ಸದಸ್ಯರು ಮನೆ ರಿಪೇರಿ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಮನೆಗೆ ಬೇಕಾದ ರೀಪು ಪಕ್ಕಾಸು ಮತ್ತು ಸೀಟು ಹಾಕಿ ಮನೆಯನ್ನು ಸರಿಪಡಿಸಿಕೊಟ್ಟಿದ್ದಾರೆ.

6ನೇ ಮನೆ:

ಕಾಳಪಡೂರು ಗ್ರಾಮದ ಮದ್ವ ಮನೆ ಎಂಬಲ್ಲಿ ಕಮಲ(63) ರವರ ಮನೆಯು ಮಳೆಗಾಲದಲ್ಲಿ ಸೋರುತ್ತಿದ್ದು ಅತಿಯಾದ ಮಳೆಗೆ ಯಾವುದೇ ಸಂದರ್ಭದಲ್ಲಿ ಹಾನಿಗೊಳಗಾಗುವ ಸ್ಥಿತಿಯಲ್ಲಿತ್ತು. ಒಂಟಿಯಾಗಿ ವಾಸವಿರುವ ಇವರಿಗೆ ಮನೆ ರಿಪೇರಿ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಬಡತನದ ಕಾರಣದಿಂಧ ಖರ್ಚು ಭರಿಸಲು ಕಷ್ಠವಾಗಿ ಮನೆ ರಿಪೇರಿ ಮಾಡದೇ ಕಷ್ಠದಲ್ಲಿ ಅದೇ ಮನೆಯಲ್ಲಿ ವಾಸವಿದ್ದರು. ಇದನ್ನು ತಿಳಿದ ಶ್ರೀ  ಧರ್ಮಸ್ಥಳ ಶೌರ್ಯ ಘಟಕದ ಸದಸ್ಯರು ಮನೆಗೆ ರೀಪು ಪಕ್ಕಸ್ ಹೊಸತು ಹಾಕಿ ಸರಿಪಡಿಸಿ ಕೊಟ್ಟಿದ್ದಾರೆ.

7ನೇ ಮನೆ:

ಚೆನ್ನೈ ತೋಡಿ ಎಂಬಲ್ಲಿ ವಾಸವಿರುವ ಮಂಜುಳಾ(23)ರವರು ವಿಕಲಚೇತನರಾಗಿರುವ ಅಕ್ಕಳೊಂದಿಗೆ ವಾಸವಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಶಾಸನ ಪಡೆಯುತ್ತಿರುವ ಇವರು ಬಹಳ ಕಷ್ಠದಲ್ಲಿ ಜೀವನ ನಡೆಸುತ್ತಿದ್ದಾರೆ. ವಾಸದ ಮನೆ ಸೋರುತ್ತಿದ್ದು ಅತಿಯಾದ ಮಳೆಯಾದರೆ ಕುಸಿಯುವ ಭೀತಿಯೂ ಇತ್ತು. ಆರ್ಥಿಕ ಸಮಸ್ಯೆಯಲ್ಲಿ ಇರುವ ಇವರಿಗೆ ಮನೆ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.  ಮಳೆಯಲ್ಲಿ ಸೋರುತ್ತಿರುವ ಮನೆಯಲ್ಲಿಯೇ ವಾಸವಿದ್ದರು. ಈ ವಿಷಯವನ್ನು ತಿಳಿದು ಸ್ವಯಂಸೇವಕರು ಮನೆಗೆ ಸಿಮೆಂಟ್ ಶೀಟ್ ಹಾಕಿ ಸರಿಪಡಿಸಿಕೊಟ್ಟಿದ್ದಾರೆ.

         ಮಾನವೀಯ ಕಾರ್ಯ ಮಾಡಿದ ‘ಶೌರ್ಯ’ ತಂಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಜಯಾನಂದ ರವರು ಮಾರ್ಗದರ್ಶನ ನೀಡಿದ್ದಾರೆ. ಮೇಲ್ವಿಚಾರಕರಾದ ಸುರೇಶ್ ರವರು ಪ್ರೇರಣೆ ನೀಡಿದ್ದಾರೆ. ಘಟಕದಲ್ಲಿರುವ ಸ್ವಯಂಸೇವಕರಲ್ಲಿ ಕಟ್ಟಡ ಕೆಲಸಗಾರರು, ಇಲೆಕ್ಟ್ರಿಷಿಯನ್, ಕಾರ್ಪೆಂಟರ್, ಫ್ಲಂಬರ್ ಹೀಗೆ ವಿವಿಧ ಕೌಶಲ್ಯ ಹೊಂದಿರುವ ಸದಸ್ಯರಿರುವುದರಿಂದ ಮನೆ ರಿಪೇರಿ ಕೆಲಸ ಸುಲಭವಾಗಿದೆ. ಮಳೆಗಾಲದಲ್ಲಿ ಬಡ ಕುಟುಂಬಗಳಿಗೆ ಮಳೆಯಲ್ಲಿ ಕಾಡಿದ ಸಮಸ್ಯೆಗೆ ಧರ್ಮಸ್ಥಳದ ಕಾಡಬೆಟ್ಟು ಶೌರ್ಯ ಘಟಕದಿಂದ ಪರಿಹಾರ ಸಿಕ್ಕಿದೆ.

Share Article
Previous ಹೆಬ್ರಿ: ಕೈಕಂಬದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ವಾಹನ ಸಂಚಾರಕ್ಕೆ ತೊಡಕು. ಶೌರ್ಯ ತಂಡದಿಂದ ಮರ ತೆರವು ಕಾರ್ಯಕ್ರಮ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved