ಇಂದಿನ ಉದ್ಯಮ ಯುಗದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಮರೀಚಿಕೆಯಾಗಿದೆ; ಶೌರ್ಯ ಸ್ವಯಂಸೇವಕರು ಪರಿವರ್ತನೆಯ ನಾಯಕತ್ವ ವಹಿಸಿಕೊಳ್ಳಬೇಕು.

ಹೊನ್ನಾವರ ವಿಪತ್ತಿಗೆ ಒಳಗಾಗುವ ಭೌಗೋಳಿಕ ಲಕ್ಷಣವನ್ನು ಹೊಂದಿರುವ ಪ್ರದೇಶವಾಗಿದೆ. ಹಾಗೆಯೇ ಈ ಸ್ಥಳ ಬಹಳ ಸುಂದರವಾಗಿದೆ. ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ. ರಾಣಿ ಚೆನ್ನಭೈರಾದೇವಿ ಹೊನ್ನಾವರ ಪ್ರಾಂತ್ಯದ ಗೇರುಸೊಪ್ಪೆಯನ್ನು ಆಳಿದ ಇತಿಹಾಸವಿದೆ. ಈ ಪ್ರದೇಶ ಅತ್ಯಂತ ಪ್ರಸಿದ್ಧ ವ್ಯಾಪಾರಿ ಕೇಂದ್ರವಾಗಿತ್ತು. ಬಂದರಿನ ಮೂಲಕ ನಡೆಯುವ ವ್ಯಾಪಾರ ವಹಿವಾಟುಗಳು ಪ್ರಸಿದ್ಧವಾಗಿದೆ. ಶರಾವತಿ ನದಿಯು ಸಮುದ್ರಕ್ಕೆ ಸೇರುವ ಪುಣ್ಯ ಸ್ಥಳ ಇದಾಗಿದೆ. ಶ್ರೀ ಕಾರಿಕಾನ ಪರಮೇಶ್ವರಿ ದೇವಸ್ಥಾನ, ಮಂಕಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಇಡಗುಂಜಿಯ ಮಹಾಗಣಪತಿ ದೇವಸ್ಥಾನಗಳನ್ನು ಹೊಂದಿರುವ ಹೊನ್ನಾವರ ವಿಶೇಷವಾದ ದೈವಿಕ ಸ್ಥಳವಾಗಿದೆ. ಪವಿತ್ರವಾದ ಈ ಸ್ಥಳದಲ್ಲಿ ಒಳ್ಳೆಯ ಜನರಿದ್ದಾರೆ. ಜನರಲ್ಲಿ ಸೇವಾ ಮನೋಭಾವನೆಯಿದೆ.

ನಮ್ಮ ಸ್ವಯಂಸೇವಕರ ಪೈಕಿ ಯಾರೂ ಕೋಟ್ಯಾಧೀಶರಿಲ್ಲ. ಈಗಿನ ದಿನಮಾನಗಳಲ್ಲಿ ಹಣ ಮಾಡುವುದು ಹೇಗೆ? ಉದ್ಯಮ ಮಾಡುವುದು ಹೇಗೆ? ಎಂದು ಯೋಚಿಸುವವರೇ ಜಾಸ್ತಿ. ಇದು ಬಹಳ ಸಂತೋಷದ ವಿಚಾರವೇ. ಆದರೆ ಹಣ ಮಾಡುವಾಗ ಯಾರಿಗೆ ಏನೂ ಆದರೂ ಪರವಾಗಿಲ್ಲ. ನಾವು ಮಾತ್ರ ಹಣ ಮಾಡಬೇಕು ಎನ್ನುವ ಮನೋಭಾವ ಒಳ್ಳೆಯದಲ್ಲ. ಬೆಳೆಯುವ ಮಕ್ಕಳಿಗೆ, ಶಾಲೆ, ಕಾಲೇಜಿಗೆ ಹೋಗುವ ಮಕ್ಕಳಿಗೆ ಪಾನ್ ಮಸಾಲಾ ಅಂಗಡಿಗಳಲ್ಲಿ ಡ್ರಗ್ಸ್ ಪೂರೈಸುವ ಕೆಟ್ಟ ಮನುಷ್ಯರಿದ್ದಾರೆ. ತಾವು ದುಡ್ಡು ಮಾಡುವ ಉದ್ದೇಶದಿಂದ ಯಾರಿಗೆ ಏನು ಆದರೂ ಪರವಾಗಿಲ್ಲ, ಎಷ್ಟು ಜನ ಕುಡಿದು ಅವರ ಸಂಸಾರ ಹಾಳಾದರೂ ಪರವಾಗಿಲ್ಲ ನಮಗೆ ಹಣ ಬೇಕು ಎನ್ನುವ ಮನೋಭಾವವಿರುವ ವ್ಯಕ್ತಿಗಳು ಸಮಾಜದಲ್ಲಿ ಹೇರಳವಾಗಿ ಇರುವಾಗ, ‘ನಾವು ಹೇಗೆ ಇದ್ದರೂ, ನಮ್ಮ ಕಷ್ಠಗಳು ಏನೇ ಇದ್ದರೂ, ಇನ್ನೊಬ್ಬರ ಕಷ್ಠಗಳಿಗೆ ಸ್ಪಂದಿಸುತ್ತೇವೆ’ ಎನ್ನುವ ಶೌರ್ಯ ಸ್ವಯಂಸೇವಕರ ಮನಸ್ಸು ಬಹಳ ಶ್ರೇಷ್ಠವಾಗಿ ನಿಲ್ಲುತ್ತದೆ.

ನಿಮ್ಮಲ್ಲಿ ಬಹಳಷ್ಟು ಜನ ಮೊದಲಿನಿಂದಲೂ ಸೇವೆ ಸಲ್ಲಿಸಿಕೊಳ್ಳುತ್ತಾ ಬಂದಿರಬಹುದು. ವೈಯಕ್ತಿಕವಾಗಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬಹುದು. ಆದರೆ ಯಾವತ್ತು ನಿಮಗೆ ಧರ್ಮಸ್ಥಳದಿಂದ ವೇದಿಕೆ ಸಿಕ್ಕಿತೋ ಈ ಅವಕಾಶ ನಿಮಗೆ ಒಳ್ಳೆಯ ಸ್ಥಾನಮಾನವನ್ನು ಕೊಟ್ಟಿದೆ. ಮೊದಲು ಸೇವೆ ಮಾಡುತ್ತಿದ್ದೀರಿ. ಗುಡ್ಡ ಕುಸಿದಾಗ ಧಾವಿಸಿ ಸಹಕಾರ ನೀಡುತ್ತಿದ್ದಿರಿ, ರಸ್ತೆ ಅಪಘಾತವಾದಾಗ ಧಾವಿಸಿ ಸ್ಪಂದಿಸುತ್ತಿದ್ದೀರಿ, ಸ್ಥಳೀಯವಾಗಿ ನೀವೆಲ್ಲ ಸೇವೆ ಮಾಡುತ್ತಿದ್ದೀರಿ. ಆದರೆ ಇವತ್ತು ನೀವು ಕರ್ನಾಟಕ ರಾಜ್ಯ ವ್ಯಾಪ್ತಿಯ ವೇದಿಕೆಯ ತಳಹದಿಯಲ್ಲಿದ್ದೀರಿ. ಅಧಿಕೃತವಾಗಿ ನೋಂದಾವಣೆಯಾಗಿರುವ ವ್ಯವಸ್ಥೆಯಲ್ಲಿದ್ದೀರಿ. ಎನ್.ಡಿ.ಆರ್.ಎಫ್, ಎಸ್.ಡಿ.ಆರ್,ಎಫ್, ಅಗ್ನಿಶಾಮಕದಳದಂತಹ ಸರ್ಕಾರದ ಪಡೆಗಳು ಹೇಗಿವೆಯೋ ಆ ವ್ಯವಸ್ಥೆಯ ಜೊತೆಯಾಗಿ ಕೆಲಸ ಮಾಡುವ ಸಂಘಟನೆಯಲ್ಲಿದ್ದೀರಿ. ಇಂದು ಶೌರ್ಯ ತಂಡಗಳ ಬಗ್ಗೆ ತಹಶೀಲ್ದಾರರಿಗೆ ಗೊತ್ತಿದೆ, ಜಿಲ್ಲಾಧಿಕಾರಿಗಳಿಗೆ ಗೊತ್ತಿದೆ. ಅನಾಹುತಗಳಾದಾಗ ಅವರ ಸೇವೆಯನ್ನೂ ಪಡೆಯಬಹುದಾಗಿದೆ.

ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಪೂಜ್ಯರು ಮಾತೃಶ್ರೀ ಅಮ್ಮನವರ ಆಶೀರ್ವಾದದಿಂದ ‘ಶೌರ್ಯ’ ಸಂಘಟನೆಯ ಮೂಲಕ ಸ್ವಯಂಸೇವಕರಿಗೆ ಒಂದು ಗುರುತರವಾದ ಸ್ಥಾನ ಸಿಕ್ಕಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಿಶಾಲವಾದ ಆಲದ ಮರವಾಗಿ ಈ ಕಾರ್ಯಕ್ರಮಕ್ಕೆ ವೇದಿಕೆಯನ್ನು ಕೊಟ್ಟಿದೆ. ನಿಮ್ಮ ಸೇವೆಗೆ ಮನ್ನಣೆಯಿದೆ. ಆಡಳಿತಾತ್ಮಕ ರೂಪುರೇಷೆಯಿರುತ್ತದೆ. ನಿಮ್ಮ ಸೇವೆ ಅಧಿಕೃತವಾಗಿ ದಾಖಲಾಗುತ್ತದೆ. ಸಂಘಟನಾ ಶಕ್ತಿಯಲ್ಲಿ ಸೇವೆ ಸಲ್ಲಿಸಲು ರಚಿಸಲಾದ ವ್ಯವಸ್ಥೆ ಇದಾಗಿದೆ.

ಧರ್ಮಸ್ಥಳ ಈ ಸಂಘಟನೆಯನ್ನು ವೈಯಕ್ತಿಕ ಕಾರ್ಯಾಚರಣೆಗಳಿಗೆ ಬಳಸಿಕೊಂಡಿಲ್ಲ. ಈ ಕಾರ್ಯಕ್ರಮಕ್ಕಾಗಿ ಪೂಜ್ಯರು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಮೊದಲ ವರ್ಷದಲ್ಲಿಯೇ ೫ ಕೋಟಿ ರೂಪಾಯಿಗಳನ್ನು ನೀಡಿದ್ದರು. ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಣೆ ಮಾಡಿದ ಒಂದು ಸಂಘಟನೆ ‘ಶೌರ್ಯ’ ವಾಗಿದೆ.

ಸಮಾಜಸೇವೆಗೆ ಯಾವುದೇ ರೀತಿಯ ಆಯಾಮಗಳಿರಬಹುದು. ಗ್ರಾಮದಲ್ಲಿರುವ ಶಾಲೆಗಳಿಗೆ ಅಗತ್ಯವಿರುವ ಸೇವೆಗಳು, ಬಡವರಿಗೆ ಮಾಡುವ ಸೇವೆಗಳು, ದೇವಸ್ಥಾನಕ್ಕೆ ಸಂಬAಧಿಸಿದ ಕೆಲಸಗಳು, ಸಮಾಜದ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವುದರ ಜೊತೆಗೆ ವಿಪತ್ತು ನಿರ್ವಹಣೆ ಸೇವೆಗಳನ್ನು ನೀವು ಮಾಡುತ್ತಿದ್ದೀರಿ. ಹೊನ್ನಾವರದ ಸ್ವಯಂಸೇವರು ನಡೆಸಿದ ಸೇವಾ ಚಟುವಟಿಕೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದುವರೆಗೆ ಪ್ರವಾಹ ಸಂದರ್ಭದಲ್ಲಿ ೮೬೦ ಚಟುವಟಿಕೆಗಳನ್ನು ನಡೆಸಿದ್ದೀರಿ. ಇದು ಸಣ್ಣ ಕಾರ್ಯವಲ್ಲ. ಈ ಸಂದರ್ಭದಲ್ಲಿ ನೀವು ಸ್ಪಂದನೆ ನೀಡದಿದ್ದರೆ ಇದರಲ್ಲಿ ಎಷ್ಟೋ ಜನ ಮನೆ ಕಳೆದುಕೊಳ್ಳುತ್ತಿದ್ದರು, ಆಸ್ತಿಪಾಸ್ತಿ ಕಳೆದುಕೊಳ್ಳುತ್ತಿದ್ದರು. ಪ್ರಾಣವನ್ನೂ ಕಳೆದುಕೊಳ್ಳುವ ಸಾಧ್ಯತೆಯೂ ಇರಬಹುದು. ಅವುಗಳನ್ನು ನೀವು ತಪ್ಪಿಸಿದ್ದೀರಿ. ೨೧೦ ಬಡ ಕುಟುಂಬಗಳಿಗೆ ಮನೆ ರಿಪೇರಿ ಮಾಡಿಕೊಟ್ಟಿದ್ದೀರಿ. ನದಿ, ಸಮುದ್ರ ತೀರಗಳು ಸೇರಿದಂತೆ ೮೦೦ ಕ್ಕೂ ಹೆಚ್ಚು ಸ್ವಚ್ಚತಾ ಶ್ರಮದಾನಗಳನ್ನು ನಡೆಸಿದ್ದೀರಿ. ೬೦ ಕ್ಕೂ ಹೆಚ್ಚು ರಸ್ತೆ ಅಪಘಾತಗಳಲ್ಲಿ ಕ್ಲಪ್ತ ಸಮಯಕ್ಕೆ ಧಾವಿಸಿ ಸಹಕಾರ ನೀಡಿದ್ದೀರಿ. ಇಂತಹ ಸೇವಾ ಕಾರ್ಯಗಳನ್ನು ನೀವು ಮಾಡದೇ ಇದ್ದರೆ ಆ ಸಂದರ್ಭದಲ್ಲಿ ಆಪತ್ತಿನ ಸಂಖ್ಯೆ ಜಾಸ್ತಿಯಾಗುತ್ತಿತ್ತು. ಎಷ್ಟೋ ಆಪತ್ತುಗಳನ್ನು ನೀವು ತಪ್ಪಿಸಿದ್ದೀರಿ. ಈ ಎಲ್ಲಾ ವಿಪತ್ತುಗಳನ್ನು ತಪ್ಪಿಸಿದ್ದರಿಂದ ಉಂಟಾದ ಮೌಲ್ಯ ವರ್ಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀವು ಮಾಡುತ್ತಿರುವ ಸೇವೆಗಳಿಂದ ಪ್ರೇರಣೆಗೊಂಡು ಯುವ ಸಮುದಾಯ ಇಂತಹ ಸೇವೆಗಳಿಗೆ ಮುಂದೆ ಬರಬೇಕೆನ್ನುವುದು ನಮ್ಮ ಆಶಯವೂ ಆಗಿದೆ. ಇದು ಸಹ ಪರಿವರ್ತನೆಯ ವಿಧಾನವಾಗಿದೆ.

‘ಶೌರ್ಯ’ ಸ್ವಯಂಸೇವಕರು ಸಮಾಜದ ಸ್ವಾಸ್ಥö್ಯವನ್ನು ಕಾಪಾಡುತ್ತಾರೆ. ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಆ ಪ್ರದೇಶದಲ್ಲಿ ಒಳ್ಳೆಯ ಚಟುವಟಿಕೆಗಳಾಗಬೇಕು. ಒಳ್ಳೆಯ ಕಾರ್ಯಗಳಾಗಬೇಕು. ಇವುಗಳಲ್ಲಿ ನೀವು ಬಹಳ ಪ್ರಮುಖವಾದ ಪಾತ್ರ ವಹಿಸಬೇಕು. ಇಂದು ಯುವಕರು ಯಾಕೆ ದಾರಿ ತಪ್ಪುತ್ತಿದ್ದಾರೆ ಎಂದರೆ. ಹಿಂದೆ ನಮ್ಮ ಜೀವನ ಶೈಲಿ ಒಳ್ಳೆಯದಿತ್ತು. ಮನೆಯಲ್ಲಿ ಎದ್ದ ಕೂಡಲೇ ಒಂದಿಷ್ಟು ಸಂಸ್ಕಾರಗಳಿದ್ದವು. ಪೂಜೆ ಪುನಸ್ಕಾರಗಳಿಂದ ದಿನ ಆರಂಭಿಸಬೇಕಾಗಿತ್ತು. ದಿನವೂ ಕೆಲಸ ಮಾಡಬೇಕು. ಹಿರಿಯರೊಂದಿಗೆ ಇರಬೇಕು, ಊಟ ತಿಂಡಿ, ಆಹಾರ, ಮಾತಿನ ಶೈಲಿ, ಹಬ್ಬ ಹರಿದಿನಗಳು, ಕ್ರೀಡೆಗಳು, ಸಾಮಾಜಿಕ ಕಾರ್ಯಕ್ರಮಗಳಿದ್ದವು. ವಿವಾಹ ಸಮಾರಂಭವಾಗಬೇಕಾದರೆ ಕುಟುಂಬದವರೆಲ್ಲಾ ಒಂದು ವಾರ ಮೊದಲೇ ಒಂದುಗೂಡಿಕೊAಡು ತಯಾರಿ ಕೆಲಸಗಳನ್ನು ಮಾಡುತ್ತಿದ್ದರು. ಈ ಎಲ್ಲಾ ವ್ಯವಸ್ಥೆಗಳು ಸಂಬAಧವನ್ನು ಗಟ್ಟಿಗೊಳಿಸುತ್ತಿತ್ತು. ಸಮಾಜವನ್ನು ಬಲಪಡಿಸುತ್ತಿತ್ತು. ಇಂದು ನಮ್ಮ ಬಾಂಧವ್ಯಗಳು ದೂರವಾಗಿವೆ. ಎಲ್ಲವನ್ನೂ ಹಣದಿಂದ ಅಳೆಯುವಂತಾಗಿದೆ. ಮನೆಗೆ ಆಹಾರ ಹೊರಗಿನಿಂದ ಬರುತ್ತದೆ. ಮೌಲ್ಯಗಳನ್ನು ತಂದುಕೊಡುವ ಮಾತುಕತೆ ಇಲ್ಲವಾಗಿದೆ. ಮನೆಯಲ್ಲಿ ನಾಲ್ಕು ಜನ ಇದ್ದರೆ ಮೊಬೈಲ್ ನಲ್ಲಿಯೇ ಸಮಯ ಕಳೆಯುತ್ತಾರೆ ವಿನಃ ಪರಸ್ಪರ ಮಾತನಾಡುವುದಿಲ್ಲ. ಹುಟ್ಟಿದ ಮಗುವಿನ ತೊಟ್ಟಿಲ ಶಾಸ್ತçವನ್ನೂ ಹೋಟೆಲ್ ಗಳಲ್ಲಿ ನಡೆಸುತ್ತಿದ್ದಾರೆ. ಇಂತಹ ಜೀವನ ಶೈಲಿಯಿಂದ ಆ ಮಗುವಿಗೆ ಎಂತಹ ಸಂಸ್ಕಾರ ಬರಬಹುದು. ಸಮಾಜದಲ್ಲಿ ಗೌರವ ಬರುವ ಜೀವನ ಶೈಲಿಯನ್ನು ಆ ಮಗು ಬೆಳೆಸಿಕೊಳ್ಳಲು ಹೇಗೆ ಸಾಧ್ಯ. ಮನೆಯಲ್ಲಿ ಒಳ್ಳೆಯ ಸಂಸ್ಕಾರ, ಒಳ್ಳೆಯ ಪಾಠ ಹೇಳಿಕೊಡುವುದು ಕಡಿಮೆಯಾಗಿದೆ. ಶಿಕ್ಷಣ ಉದ್ದಿಮೆಯಾಗಿದೆ. ಈ ಉದ್ಯಮ ಯುಗದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಮರೀಚಿಕೆಯಾಗಿದೆ.

ನಾವು ಬದಲಾವಣೆಯ ನಾಯಕತ್ವ ವಹಿಸಿಕೊಳ್ಳಬೇಕು. ನೂರರಿಂದ ನೂರೈವತ್ತು ಮಂದಿ ಹೊಂದಿರುವ ಶೌರ್ಯ ಸ್ವಯಂಸೇವಕರ ತಂಡ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು. ನಿಮ್ಮಲ್ಲಿರುವ ಪ್ರತಿಯೊಬ್ಬರು ಆದರ್ಶ ವ್ಯಕ್ತಿತ್ವ ಹೊಂದಬೇಕು. ನಿಮ್ಮನ್ನು ನೋಡಿ ಬೇರೆಯವರು ಕಲಿಯಬೇಕು. ಆಚಾರ ವಿಚಾರ, ಒಳ್ಳೆಯ ಹವ್ಯಾಸ, ಸೇವಾ ಮನೋಭಾವನೆ, ದುಡಿಮೆ ಮಾಡುವ ಛಲ ಇವುಗಳನ್ನು ನೋಡಿ ಇತರರು ಕಲಿಯಬೇಕು. ಇದು ವ್ಯಕ್ತಿಯಿಂದ ಶುರುವಾಗಿ ನಂತರ ಸಮೂಹಕ್ಕೆ ವ್ಯಾಪಿಸುತ್ತದೆ. ನೀವು ಮಾಡುತ್ತಿರುವ ಸಮಾಜ ಸೇವೆಗಳು ಇನ್ನೊಬ್ಬರಿಗೆ ಪ್ರೇರಣೆಯಾಗಿ ಅವರೂ ಭಾಗಿಯಾಗುವಂತಾಗುತ್ತದೆ.

ಹಳ್ಳಿಗಳಲ್ಲಿ ಅನೇಕ ಆಚರಣೆಗಳು ಇನ್ನೂ ಜೀವಂತವಾಗಿವೆ. ಯಕ್ಷಗಾನ, ತಾಳಮದ್ದಲೆ, ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಮನೆಯಲ್ಲಿ ನಡೆಸಬಹುದಾದ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ಮಾಡಿ. ಹೋಟೆಲ್ ಗಳಲ್ಲಿ ಮಾಡಲು ಹೋಗಬೇಡಿ. ಮನೆಯಲ್ಲಿಯೇ ಕಾರ್ಯಕ್ರಮಗಳನ್ನು ಮಾಡಿದರೆ ಬಾಂಧವ್ಯ ವೃದ್ದಿಸುತ್ತದೆ. ಸಂಬAಧ ಗಟ್ಟಿಯಾಗುತ್ತದೆ. ಮನೆಯಲ್ಲಿರುವ ಎಳೆ ಮಕ್ಕಳು ಅಜ್ಜ, ದೊಡ್ಡಪ್ಪ, ಚಿಕ್ಕಪ್ಪ, ಸಂಬAಧಿಗಳೊAದಿಗೆ ಬೆರೆಯುತ್ತಾರೆ. ಸಂಬAಧಗಳು ಅಂದರೆ ಏನು ಎನ್ನುವುದು ಅವರಿಗೆ ಗೊತ್ತಾಗುತ್ತದೆ. ಮುಂದಿನ ಪೀಳಿಗೆಯೂ ಇದೇ ದಾರಿಯನ್ನು ಅನುಸರಿಸುತ್ತಾರೆ. ಸಂಬAಧಗಳು, ಸಂಸ್ಕಾರಗಳು ಮುಂದುವರಿಯುತ್ತವೆ.

ಇAದು ಸಾಮಾಜಿಕ ಜಾಲತಾಣಗಳು ಸಂಬAಧಗಳಾಗಿವೆ. ಅದರಲ್ಲಿರುವವರು ಸಂಬAಧಿಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಬಹು ದೊಡ್ಡ ವಿಪತ್ತು. ಮನುಷ್ಯತ್ವ ಕಳೆದುಕೊಳ್ಳುವುದೇ ಒಂದು ಆಪತ್ತು. ಅದನ್ನು ಉಳಿಸುವುದು ಶೌರ್ಯ ಸ್ವಯಂಸೇವಕರ ಬೀಜಮಂತ್ರವಾಗಬೇಕು. ಇಂತಹ ಪ್ರಯತ್ನಗಳನ್ನು ಶೌರ್ಯದವರು ಶುರುಮಾಡಬೇಕು. ನಮಗೆ ನಾವೇ ಸಂಬAಧಿಕರು, ನಮಗೆ ನಾವೇ ಕುಟುಂಬದವರು. ನಾವುಗಳೇ ಸಾಮೂಹಿಕ ಕಾರ್ಯಕ್ರಮಗಳ ನೇತ್ರತ್ವವನ್ನು ವಹಿಸಿಕೊಳ್ಳಬೇಕು. ಇದರಿಂದ ಸಿಗುವ ಸಂತೋಷ ಬಾಂಧವ್ಯ, ಸಂಬAಧಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ಸಮಾಜದ ಸ್ವಾಸ್ಥö್ಯ ಕಾಪಾಡುತ್ತದೆ. ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ. ಇಂದು ತೊಟ್ಟಿಲು ಶಾಸ್ತç ಹೋಟೆಲ್ ನಲ್ಲಿ ಮಾಡುತ್ತಿದ್ದಾರೆ. ನಾಳೆ ಸತ್ಯನಾರಾಯಣ ಪೂಜೆಯೂ ಬರಬಹುದು. ಈ ವ್ಯವಸ್ಥೆಯನ್ನು ಬದಲಾವಣೆ ತರುವಲ್ಲಿ ನಾವು ಮುಂಚೂಣಿಯಲ್ಲಿರಬೇಕು. ಭಾರತ ದೇಶ ಜಗತ್ತಿನಲ್ಲಿ ಅತ್ಯಂತ ಶ್ರೀಮಂತವಾಗುವುದು ಸಂಸ್ಕಾರದಿAದ, ಅತ್ಯುತ್ತಮ ಜೀವನ ಶೈಲಿಯಿಂದ.

ನಿಜವಾದ ಸ್ವಯಂಸೇವಕನ ಮನಸ್ಸು ಮತ್ತು ಹೃದಯ ಬಹಳ ದೊಡ್ಡದು. ಆದರೆ ಅವರ ಜೇಬು ಬಹಳ ಚಿಕ್ಕದು. ಜೇಬು ದೊಡ್ಡದಿರುವವರ ಮನಸ್ಸು ಚಿಕ್ಕದಾಗಿರುತ್ತದೆ. ನೀವು ಇರುವುದನ್ನೆಲ್ಲವನ್ನೂ ಸಮಾಜಸೇವೆ ಎಂದು ಕಳೆದುಕೊಳ್ಳಬಾರದು. ನಿಮ್ಮ ಜೀವನೋಪಾಯ ಮೊದಲು. ನಿಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡಿ. ನಮ್ಮ ಸ್ವಯಂಸೇವಕರು ‘ಊರಿಗೆ ಉಪಕಾರಿ, ಮನೆಗೆ ಮಹಾ ಉಪಕಾರಿ’ಗಳಾಗಿರಬೇಕು.

(ದಿನಾಂಕ: ೭.೦೮.೨೦೨೬ ರಂದು ಹೊನ್ನಾವರ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಗೌರವಾನ್ವಿತ ಶ್ರೀ ಅನಿಲ್ ಕುಮಾರ್ ಎಸ್. ಎಸ್ ರವರು ನೀಡಿದ ಮಾರ್ಗದರ್ಶನದ ಸಾರಾಂಶ)

Share Article
Previous ಸುಳ್ಯ: ಸಂಪಾಜೆ ಘಟಕದಿಂದ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved