ಧರ್ಮಸ್ಥಳ, ನ. 1: ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ‘ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ’ದ ಸಂಘಟನಾ ಕಾರ್ಯವೈಖರಿ ಮತ್ತು ಸೇವಾ ಬದ್ಧತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 10ನೇ ಬೆಟಾಲಿಯನ್ ಮೆಚ್ಚುಗೆ ವ್ಯಕ್ತಪಡಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ್ ಕುಮಾರ್ ಎಸ್.ಎಸ್. ರವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಸ್ವಯಂಸೇವಕರ ಪಡೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀ ವಿವೇಕ್ ವಿ. ಪಾಯ್ಸ್ ಹಾಗೂ 2019ರಿಂದ ವಿಪತ್ತು ನಿರ್ವಹಣಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್, ಕೋಡಕಣಿ ಇವರ ಸೇವೆಯನ್ನು ಗುರುತಿಸಿ ಎನ್ಡಿಆರ್ಎಫ್ 10ನೇ ಬೆಟಾಲಿಯನ್ ವತಿಯಿಂದ ಪ್ರಶಂಸನಾ ಪತ್ರ ನೀಡಲಾಗಿದೆ.
ಈ ಪ್ರಶಂಸನಾ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ್ ಕುಮಾರ್ ಎಸ್.ಎಸ್. ಅವರಿಗೆ ಕಳುಹಿಸಿಕೊಡಲಾಗಿದ್ದು, ದಿನಾಂಕ 2.11.2026ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ನಡೆದ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಶಂಸನಾ ಪತ್ರವನ್ನು ವಿತರಿಸಿ, ಇಬ್ಬರ ಕಾರ್ಯವನ್ನು ಅಭಿನಂದಿಸಿ ಆಶೀರ್ವದಿಸಿದರು.

90 ತಾಲ್ಲೂಕುಗಳಲ್ಲಿ 730 ಘಟಕಗಳು – 10,470 ಸ್ವಯಂಸೇವಕರ ಸೇವಾ ಪಡೆ
ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಪರಿಕಲ್ಪನೆಯಂತೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 2019ರಲ್ಲಿ ಆರಂಭಗೊಂಡ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮವು ಇಂದು ರಾಜ್ಯಾದ್ಯಂತ ವ್ಯಾಪಕವಾಗಿ ಬೆಳೆದಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆಯಿರುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಸ್ಥಳೀಯ ಮಟ್ಟದಲ್ಲಿಯೇ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಘಟಕಗಳನ್ನು ರಚಿಸಲಾಗಿದೆ.
ಪ್ರಸ್ತುತ ಕರ್ನಾಟಕದ 90 ತಾಲ್ಲೂಕುಗಳಲ್ಲಿ 730 ಶೌರ್ಯ ವಿಪತ್ತು ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 10,470 ಮಂದಿ ಸ್ವಯಂಸೇವಕರು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರವಾಹ, ಭೂಕುಸಿತ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನೆರವು ಒದಗಿಸುವುದರೊಂದಿಗೆ ಸಮಾಜದ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿಯಲ್ಲಿಯೂ ಈ ಘಟಕಗಳು ಮಹತ್ವದ ಪಾತ್ರ ವಹಿಸುತ್ತಿವೆ.
ಎನ್ಡಿಆರ್ಎಫ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವೈಜ್ಞಾನಿಕ ತರಬೇತಿ
ವಿಪತ್ತು ನಿರ್ವಹಣೆಯಲ್ಲಿ ಕೇವಲ ಸೇವಾ ಮನೋಭಾವವಷ್ಟೇ ಸಾಕಾಗುವುದಿಲ್ಲ; ಸೂಕ್ತ ಕೌಶಲ್ಯ, ತರಬೇತಿ ಮತ್ತು ಸಮಯಪ್ರಜ್ಞೆಯೂ ಅಗತ್ಯ ಎಂಬ ಆಶಯದೊಂದಿಗೆ ಸ್ವಯಂಸೇವಕರಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಫೈರ್ ಸೇಫ್ಟಿ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣತರಿಂದ ಪ್ರಾಯೋಗಿಕ ಮತ್ತು ವೈಜ್ಞಾನಿಕ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.

ಕಳೆದ ಆರು ವರ್ಷಗಳಲ್ಲಿ ಒಟ್ಟು 1,260 ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾವಿರಾರು ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆ, ತುರ್ತು ಸ್ಪಂದನೆ ಹಾಗೂ ರಕ್ಷಣಾ ಕಾರ್ಯಗಳ ಕುರಿತು ಅಗತ್ಯ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸಲಾಗಿದೆ. ಇದರಿಂದ ತರಬೇತಿ ಪಡೆದ ಸ್ವಯಂಸೇವಕರು ತಮ್ಮ ವ್ಯಾಪ್ತಿಯಲ್ಲಿ ವಿಪತ್ತು ಅಥವಾ ತುರ್ತು ಘಟನೆಗಳು ಸಂಭವಿಸಿದಾಗ ತಕ್ಷಣ ಸ್ಪಂದಿಸಿ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸಜ್ಜಾಗಿದ್ದಾರೆ.
ಸಂಘಟನಾ ಸಾಮರ್ಥ್ಯ ಮತ್ತು ಸಮರ್ಪಿತ ಸೇವೆಗೆ ದೊರೆತ ಗೌರವ
ರಾಜ್ಯದಾದ್ಯಂತ ಹರಡಿರುವ 730 ಘಟಕಗಳನ್ನು ನಿರಂತರವಾಗಿ ಸಂಘಟಿಸುವುದು, ಅವುಗಳ ಕಾರ್ಯಚಟುವಟಿಕೆಗಳ ಅನುಪಾಲನೆ, ತರಬೇತಿ ವ್ಯವಸ್ಥೆ, ಸ್ವಯಂಸೇವಕರಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವುದು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ. ಈ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಶ್ರೀ ವಿವೇಕ್ ವಿ. ಪಾಯ್ಸ್ ಮತ್ತು ಶ್ರೀ ಜೈವಂತ ಪಟಗಾರ್ ಅವರ ಸಂಘಟನಾ ಕೌಶಲ್ಯ ಹಾಗೂ ನಿರಂತರ ಪರಿಶ್ರಮ ಮಹತ್ವದ ಕೊಡುಗೆ ನೀಡಿದೆ.
ಶೌರ್ಯ ಕಾರ್ಯಕ್ರಮದ ಮೂಲಕ ವಿಪತ್ತು ನಿರ್ವಹಣಾ ಸೇವೆಯನ್ನು ಗ್ರಾಮಮಟ್ಟಕ್ಕೆ ತಲುಪಿಸುವುದು, ಸ್ವಯಂಸೇವಕರನ್ನು ಸನ್ನದ್ಧಗೊಳಿಸುವುದು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪರಿಣಾಮಕಾರಿ ಸೇವಾ ವ್ಯವಸ್ಥೆಯನ್ನು ರೂಪಿಸುವ ಕಾರ್ಯದಲ್ಲಿ ಇವರ ಪಾತ್ರವನ್ನು ಗುರುತಿಸಿ ಎನ್ಡಿಆರ್ಎಫ್ 10ನೇ ಬೆಟಾಲಿಯನ್ನ ಇನ್ಸ್ಪೆಕ್ಟರ್ ಶ್ರೀ ಶಾಂತಿಲಾಲ್ ಜಟಿಯಾ ಅವರು ಪ್ರಶಂಸನಾ ಪತ್ರವನ್ನು ಕಳುಹಿಸಿಕೊಟ್ಟಿರುವುದು ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಾ. ಹರೀಶ್ ಕೃಷ್ಣ ಸ್ವಾಮಿ, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕ ಶ್ರೀ ಡಿ. ಜಯರಾಮ್, ಸೋಶಿಯಲ್ ಮೀಡಿಯಾ ವಿಭಾಗದ ನಿರ್ದೇಶಕ ಶ್ರೀ ಪ್ರದೀಪ್ ಶೆಟ್ಟಿ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಕಿಶೋರ್ ಕುಮಾರ್ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 29 ಮಂದಿ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಉಪಸ್ಥಿತರಿದ್ದರು.
ವಿಪತ್ತಿನ ಸಂದರ್ಭದಲ್ಲಿ ಜೀವ ರಕ್ಷಣೆಯೇ ಪರಮ ಧ್ಯೇಯವೆಂದು ಭಾವಿಸಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಶೌರ್ಯ ಸ್ವಯಂಸೇವಕರ ಸಂಘಟಿತ ಸೇವೆಗೆ ದೊರೆತ ಈ ಮೆಚ್ಚುಗೆ, ಕಾರ್ಯಕ್ರಮದ ಮುಂದಿನ ಸೇವಾ ಪಯಣಕ್ಕೆ ಹೊಸ ಹುರುಪು ಮತ್ತು ಪ್ರೇರಣೆ ನೀಡಿದೆ.