
ಬೆಳ್ತಂಗಡಿ, ಅಕ್ಟೋಬರ್ 04,2020: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಾದ ಶ್ರೀ ವಿನಯಚಂದ್ರ ಹಾಗೂ ಶ್ರೀ ರತನ್ ಅವರು ಅಪರೂಪದಲ್ಲಿ ಅಪರೂಪದ ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡು ಮಾನವೀಯತೆ ಮೆರೆದಿದ್ದಾರೆ. ಕೊಲ್ಲಿ ಗ್ರಾಮದ ಶಾಂತಿಗುಡ್ಡೆ ಎಂಬಲ್ಲಿನ ಎಂಭತ್ತೈದು ವರ್ಷ ವಯಸ್ಸಿನ ಅಣು ಪೂಜಾರಿ ಎನ್ನುವವರು ನಾಲ್ಕು ದಿನದ ಹಿಂದೆ ಕಾಣೆಗಿದ್ದರು.ಸಂಜೆಯಾದರೂ ಮನೆಗೆ ಬಾರದೇ ಇರುವ ಸುದ್ದಿ ಊರು ತುಂಬಾ ಹರಡಿದಾಗ ಅಜ್ಜ ಎಲ್ಲಿ ಹೋಗಿದ್ದಾರೆ ಎಂದು ತಿಳಿದಿರಲಿಲ್ಲ. ಹಸುವನ್ನು ಮೇಯಿಸಲು ಕಾಡಿನ ಮಾರ್ಗವಾಗಿ ಹೋಗಿದ್ದಾರೆ. ಅದನ್ನು ನಾನು ನೋಡಿದ್ದೇನೆ’ ಎಂದು ಸ್ಥಳೀಯರೊಬ್ಬರು ಮೂರು ದಿನದ ಹಿಂದೆ ಹೇಳಿದಾಗ, ಸ್ಥಳೀಯ ಯುವಕರ ಗುಂಪೊಂದು ಕಾಡಿಗೆ ತೆರಳಿ ಹುಡುಕಿ ಬಂದಿತ್ತು. ಆದರೆ ಸುಳಿವು ಮಾತ್ರ ಸಿಕ್ಕಿರಲಿಲ್ಲ. |

ನಿನ್ನೆಯ ದಿನ ಕಾಡಿಗೆ ತೆರಳಿದ ಕೆಲವರಿಗೆ ಅಜ್ಜ ನಡೆದಾಡಲು ಬಳಸುತ್ತಿದ್ದ ಕೋಲು ಗುಡ್ಡದ ಬದಿಯಲ್ಲಿ ಕಂಡುಬಂದಿತ್ತು. ಇಲ್ಲಿಯೇ ಸುತ್ತಮುತ್ತಲಿನಲ್ಲಿ ಅಜ್ಜ ಇರಬಹುದೆಂದು ಹುಡುಕಿದಾಗ ಎಲೆ ಅಡಿಕೆಯ ಸಣ್ಣ ಚೀಲ ದೊರೆತಿತ್ತು. ಅಜ್ಜ ಧರಿಸಿದ್ದ ಬಟ್ಟೆಯ ತುಂಡೊಂದು ಕಣ್ಣಿಗೆ ನಿಲುಕಿತ್ತು. ಸುಳಿವು ಆಧರಿಸಿ ಸುತ್ತಮುತ್ತಲಿನ ಪರಿಸರದಲ್ಲಿ ಎಷ್ಟು ಅರಸಿದರೂ ಅಜ್ಜ ಮಾತ್ರ ಪತ್ತೆ ಆಗಿರಲಿಲ್ಲ. ಅಜ್ಜ ಕಳೆದು ಹೋಗಿ ನಿನ್ನೆಗೆ ಮೂರು ದಿನ. ಅಜ್ಜನ ಕವಳದ ಚೀಲ, ಕೋಲು, ಬಟ್ಟೆ ಅಲ್ಲಲ್ಲಿ ಬಿದ್ದಿರುವುದನ್ನು ಕಂಡು ಕೆಲವು ಸ್ಥಳೀಯರು ಕಾಡು ಪ್ರಾಣಿಗೆ ಬಲಿಯಾಗಿರಬೇಕೆಂದು ನಿರ್ಧರಿಸಿದ್ದರು.

ಹುಲಿ, ಕರಡಿ, ಚಿರತೆಯಂತಹ ಪ್ರಾಣಿಗಳು ಆ ಸ್ಥಳದಲ್ಲಿ ಆಗಾಗ್ಗೆ ಓಡಾಡುತ್ತಿರುವುದನ್ನು ಗಮನಿಸಿದ್ದ ಅವರಿಗೆ ಈ ಆತಂಕ ಸಹಜವಾಗಿಯೇ ಉದ್ಭವವಾಗಿತ್ತು. ಆದರೆ ಇನ್ನು ಕೆಲವು ಯುವಕರಿಗೆ ಅಜ್ಜ ಸುರಕ್ಷಿತ ವಾಗಿದ್ದಾರೆ ಎನ್ನುವ ಭರವಸೆಯೂ ಇತ್ತು. ಎರಡು ನಿರ್ಧಾರದ ಹೋಯ್ದಾಟದ ನಡುವೆ ಅಜ್ಜ ಕಾಣೆಯಾದ ವಿಷಯ ಗ್ರಾಮದಲ್ಲಿ ಸಣ್ಣ ಆತಂಕವನ್ನು ಸೃಷ್ಟಿಸಿತ್ತು. |

ಈ ವಿಷಯ ತಿಳಿದ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಾದ ಶ್ರೀ ವಿನಯಚಂದ್ರ ಹಾಗೂ ಶ್ರೀ ರತನ್ ಅವರು ತಮ್ಮ ಸ್ನೇಹಿತರನ್ನು ಒಳಗೊಂಡಂತೆ ಸಣ್ಣ ಗುಂಪು ಕೂಡಿಕೊಂಡು ಅಜ್ಜನನ್ನು ಹುಡುಕಲು ಹೊರಟಿದ್ದರು. ವಿಶ್ವ ಹಿಂದು ಪರಿಷದ್ ಹಾಗೂ ಯುವ ಕೆಸರಿ ಗೆಳೆಯರ ಬಳಗ ಕಿಲ್ಲೂರು ಇದರ ಯುವಕರೂ ಜೊತೆಯಾಗಿದ್ದರು. ಕಿಲ್ಲೂರಿನ ಕಾಡುಮನೆ ಮಾರ್ಗವಾಗಿ ತೆರಳಿದ ಯುವಕರ ತಂಡ ಬೆಳಿಗ್ಗೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಮಧ್ಯಾಹ್ನದ ವೇಳೆಗೆ ನಾಲ್ಕು ಕಿಲೋಮೀಟರ್ ದೂರದ ಎತ್ತರದ ಕಾಡಿನ ಗುಡ್ಡ ಏರಿತ್ತು. ಬಳಲಿಕೆ ಕಾಡಿದರೂ ಅಜ್ಜ ಸಿಕ್ಕೇ ಸಿಗುತ್ತಾನೆ ಎನ್ನುವ ಭರವಸೆ ಇವರನ್ನು ದಟ್ಟ ಕಾಡಿನ ದೊಡ್ಡ ಗುಡ್ಡ ಏರುವಂತೆ ಮಾಡಿತ್ತು. ಗುಡ್ಡದಲ್ಲಿ ಇರುವ ಒಂದು ಕಲ್ಲಿನ ಬಂಡೆಯ ಹತ್ತಿರ ತೆರಳಿದಾಗ ಸ್ವಯಂಸೇವಕರಿಗೆ ಅಚ್ಚರಿ ಕಾದಿತ್ತು.

ನಾಲ್ಕು ದಿನದಿಂದ ಕಾಣೆಯಾಗಿದ್ದ ಅಜ್ಜ ಕಲ್ಲಿನ ಬಂಡೆಯ ಮೇಲೆ ನಿತ್ರಾಣನಾಗಿ ಕುಳಿತುಕೊಂಡಿದ್ದ. ಲಘುಬಗೆಯಿಂದ ಅಜ್ಜ ನನ್ನು ಸಮೀಪಿಸಿದ ಸ್ವಯಂಸೇವಕರು ಕುಶಲೋಪಚರಿ ವಿಚಾರಿಸಿ, ಸಾಂತ್ವಾನ ನುಡಿದು ಸುರಕ್ಷಿತವಾಗಿ ಎತ್ತಿಕೊಂಡು ಊರಿಗೆ ತಂದು ಅವರ ಮನೆಗೆ ತಲುಪಿಸಿದ್ದಾರೆ. ದಾರಿ ತಪ್ಪಿ ಅಲ್ಲಿಗೆ ತೆರಳಿದ್ದ ಅಜ್ಜ ಮೊದಲ ದಿನ ಗುಡ್ಡದಲ್ಲಿ ಇರುವ ಗುಹೆಯಂತಹ ಸ್ಥಳದಲ್ಲಿ ಮಲಗಿಕೊಂಡಿದ್ದ. ಊಟ, ನೀರು ಇಲ್ಲದೇ ನಿತ್ರಾಣನಾಗಿ ಎರಡನೇ ದಿನ ಅಲ್ಲಿಯೇ ಇರುವ ಕಲ್ಲಿನ ಬಂಡೆಯ ಮೇಲೆ ಒರಗಿದ್ದ. ಅಜ್ಜನಿಗೆ ಕದಲಲು, ಎದ್ದೇಳಲು ಸಾಧ್ಯವಾಗದೇ ಆತನ ಸ್ಥಿತಿ ಅರಣ್ಯ ರೋದನವಾಗಿತ್ತು. ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ರತನ್ ಹಾಗೂ ವಿನಯಚಂದ್ರ ಅವರ ಸೇವಾಕಾರ್ಯ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಇವರೊಂದಿಗೆ ಜೊತೆಯಾದ ವಿವಿಧ ಕಿಲ್ಲೂರಿನ ಯುವಕರ ಕಾರ್ಯವೂ ಮೆಚ್ಚುಗೆಗೆ ಪಾತ್ರವಾಗಿದೆ.
