ಬಡ ಕುಟುಂಬಕ್ಕೆ ಹೊಸ ಮನೆ; ಶ್ರಮದಾನ ನಡೆಸಿದ ಶಿರಸಿ ಘಟಕದ ಸ್ವಯಂಸೇವಕರು

ಮಳೆಯ ತೀರ್ವತೆಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿತ್ತು. ಮನೆಯೊಳಗೆಲ್ಲ ನೀರೇ ನೀರು. ಹಳೆಯ ಮನೆ. ರಿಪೇರಿಗೆ ಕಾಸಿಲ್ಲವೆಂದು ಹಂಚಿನ ಮೇಲೆ ಪ್ಲಾಸ್ಟಿಕ್ ಹೊದಿಕೆ ಮಾಡಿದ್ದರು. ಬಿರುಗಾಳಿಗೆ ತೂರಿದ ಅವು ನೀರು ಸೋರುವಿಕೆ ತಡೆಯಲಿಲ್ಲ. ಗುಡುಗು ಸಿಡಿಲಿನ ಸದ್ದು. ‘ಎಲ್ಲಿ ಮಾಡು ಕಳಚಿ ಬಿದ್ದೀತೋ’ ಜೀವ ಭಯದಿಂದ ಬಡ ಕುಟುಂಬವಿತ್ತು. ಹಿಂದಿನ ಮಳೆಗಾಲವನ್ನು ಹೀಗೆ ಜೀವ ಭಯದಿಂದ ದೂಡಿದ್ದರು. ಅದೃಷ್ಠವಶಾತ್ ಏನೂ ಆಗಿರಲಿಲ್ಲ. ಆದರೆ ಈ ಬಾರಿ ಮಳೆಗಾಲದಲ್ಲಿ ಮನೆ ಕಂಪಿಸಿತ್ತು. ಹಂಚು ಹಾರಿತ್ತು. ಮನೆಯೊಳಗೆ ನೀರು ನುಗ್ಗಿತ್ತು. ಯಾವ ಕ್ಷಣದಲ್ಲಿಯೂ ಆಸರೆಯಾಗಬೇಕಾದ ಮನೆ ನೆಲಸಮವಾಗುವ ಭೀತಿಯಿತ್ತು.

ಶಿರಸಿ ತಾಲ್ಲೂಕಿನ ಕುಳವೆ ಗ್ರಾಮದ ಕಲಗದ್ದೆ ಎಂಬಲ್ಲಿನ ೫೫ ವರ್ಷದ ಮಹೇಶ್ ಜಟ್ಟಿ ನಾಯ್ಕ್ ಎನ್ನುವವರ ಮನೆಯ ಸ್ಥಿತಿಯಿದು. ಐದು ದಶಕವನ್ನು ಪೂರೈಸಿದ ಹಳೆಯ ಮನೆಯದು. ಬಡತನ ಮತ್ತು ಅನಾರೋಗ್ಯ ಕಾರಣಗಳಿಂದಾಗಿ ಮನೆ ರಿಪೇರಿ ಮಾಡಿಕೊಳ್ಳಲಾಗದೇ ಕುಟುಂಬವಿತ್ತು. ಪರಿಸ್ಥಿತಿಯನ್ನು ಅರಿತ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಶಿರಸಿಯ ಸ್ವಯಂಸೇವಕರು ದಾನಿಗಳ ನೆರವಿನೊಂದಿಗೆ ಮಳೆಗಾಲದಲ್ಲಿ ತಾತ್ಕಾಲಿಕ ಮನೆ ಕಟ್ಟುವುದಲ್ಲದೇ ಮಳೆಗಾಲದ ನಂತರ ದಾನಿಗಳ ಸಹಕಾರದೊಂದಿಗೆ ಸ್ಥಳೀಯರು, ಗ್ರಾಮ ಪಂಚಾಯತಿಯವರು, ಗಣ್ಯರು ಸೇರಿಕೊಂಡು ರಚಿಸಿದ ಹೊಸ ಮನೆಯ ಶ್ರಮದಾನಕ್ಕೆ ಸಹಕಾರ ನೀಡಿದ್ದಾರೆ.

ಹೈರಾಣಾಗಿಸಿದ ಕಾಯಿಲೆ:
ಮಹೇಶ್ ಜಟ್ಟಿ ನಾಯ್ಕ್ ಪ್ಯಾರಾಲಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದು ಆರ್ಥಿಕವಾಗಿ ಕಷ್ಟದಲ್ಲಿರುವುದರಿಂದ ಮನೆ ರಿಪೇರಿ ಸಾಧ್ಯವಾಗಿರಲಿಲ್ಲ. ಕಾಯಿಲೆಯಿಂದಾಗಿ ನಡೆಯಲು ಸಾಧ್ಯವಾಗದೇ ಮನೆಯಲ್ಲಿದ್ದಾರೆ. ಪತ್ನಿ ಪ್ರೇಮಾ ಇವರ ದುಡಿಮೆ ಮನೆಗೆ ಆಸರೆಯಾಗಿದೆ. ಕಷ್ಟದಲ್ಲಿರುವ ಇವರಿಗೆ ನೆರವಿನ ಅಗತ್ಯತೆ ಇದ್ದು ‘ಶೌರ್ಯ’ ಸ್ವಯಂಸೇವಕರು ಸೇರಿದಂತೆ ಅನೇಕರು ಮಾಡಿದ್ದಾರೆ.

ಹಳೆಯ ಮನೆ:
ಇವರ ಮನೆ ಹಳೆಯದಾದ ಹಂಚಿನ ಮನೆ. ರಿಪೇರಿಗೆ ಬಂದು ಅದೆಷ್ಟೋ ವರ್ಷವಾಗಿತ್ತು. ಆರ್ಥಿಕ ಸಮಸ್ಯೆಯ ನಡುವೆ ಮನೆ ರಿಪೇರಿ ನೆನೆಗುದಿಗೆ ಬಿದ್ದಿತ್ತು. ಭಯ, ಆತಂಕದಿAದ ಮೂರ್ನಾಲ್ಕು ಮಳೆಗಾಲವನ್ನೂ ಕಳೆದಾಗಿತ್ತು. ಸೋರುವ ಮನೆಯಲ್ಲಿ ಕ್ರಿಮಿ ಕೀಟಗಳು, ಹುಳು ಹುಪ್ಪಡಿಗಳು, ವಿಷ ಜಂತುಗಳು ಉಪದ್ರ ಕೊಡುತ್ತಿದ್ದವು. ಈ ಬಾರಿಯ ಮಳೆಗಾಲ ಮನೆಯನ್ನು ಕಂಪಿಸಿತ್ತು. ಹಂಚು ಹಾರಿ ಹೋಗಿತ್ತು. ಹೊದಿಕೆ ಛಿದ್ರವಾಗಿತ್ತು. ಮನೆಯನ್ನು ಬಿಡಲೇ ಬೇಕಾದ ಸ್ಥಿತಿ ಎದುರಾಗಿತ್ತು.

ಮನೆ ತೊರೆದ ದಂಪತಿ:
ಮನೆ ಬೀಳುವ ಸ್ಥಿತಿ ಇರುವುದರಿಂದ ಮನೆಯಲ್ಲಿರುವುದು ಅಪಾಯವೆಂದರಿತ ಮಹೇಶ್ ದಂಪತಿ ಮನೆ ತೊರೆಯಲು ನಿರ್ಧರಿಸಿದರು. ಮಳೆಗಾಲದ ಮೂರ್ನಾಲ್ಕು ತಿಂಗಳು ಹೋಗುವುದಾದರೂ ಎಲ್ಲಿಗೆ? ಯೋಚಿಸಿ ಚಿಂತಾಕ್ರಾAತರಾಗಿದ್ದರು. ಅಕ್ಕಪಕ್ಕದವರು ಉಳಿದುಕೊಳ್ಳಲು ಅವಕಾಶ ನೀಡಿದರಾದರೂ ಎಷ್ಟು ದಿನ ಅಂತ ಬೇರೆಯವರ ಮನೆಯಲ್ಲಿ ಉಳಿಯುವುದು? ಪ್ರಶ್ನೆ ಕಾಡಿತ್ತು.


ಸ್ವಯಂಸೇವಕರು ಕಟ್ಟಿಕೊಟ್ಟರು ತಾತ್ಕಾಲಿಕ ಮನೆ:
ಸಮಸ್ಯೆಯಲ್ಲಿರುವ ಕುಟುಂಬದ ಬಗ್ಗೆ ಮಾಹಿತಿ ತಿಳಿದ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮನೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದರು. ಮನೆಯ ಪಕ್ಕದಲ್ಲಿರುವ ಬಯಲು ಜಾಗದಲ್ಲಿ ಮಳೆಗಾಲ ಕಳೆಯಲು ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಮನೆ ನಿರ್ಮಾಣ ಮಾಡಿಕೊಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ್ ರವರು ಸ್ಥಳಕ್ಕೆ ಭೇಟಿ ನೀಡಿ ಮನೆ ರಚನೆಗೆ ಅಗತ್ಯವಿರುವ ಸಹಕಾರ ಒದಗಿಸಿದರು. ಶಿರಸಿ ತಾಲ್ಲೂಕು ಯೋಜನಾಧಿಕಾರಿ ಶ್ರೀ ರಾಘವೇಂದ್ರ ಇವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ತಾತ್ಕಾಲಿಕ ಮನೆ ನಿರ್ಮಾಣ ಮಾಡಿ ಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾದರು. ಮನೆ ರಚನೆಗೆ ಅಗತ್ಯವಿರುವ ಆರ್ಥಿಕ ಸಹಕಾರವನ್ನು ಸ್ಥಳೀಯರಾದ ಪ್ರಭಾಕರ್ ಇವರು ನೀಡಿದರು.


ಹೊಸ ಮನೆ ನಿರ್ಮಾಣ:
ಮಳೆಗಾಲ ಕಳೆದ ನಂತರ ಹಳೆಯದಾದ ಮನೆಯನ್ನು ತೆರವುಗೊಳಿಸಿ ಹೊಸ ಮನೆಯನ್ನು ಕಟ್ಟಿಕೊಡುವ ನಿರ್ಧಾರವನ್ನು ಸ್ಥಳೀಯರು, ಗ್ರಾಮಪಂಚಾಯತ್, ಅನೇಕ ದಾನಿಗಳು ಮಾಡಿದರು. ಉಡುಪಿ ಮೂಲದ ಪ್ರಭಾಕರ್ ಇವರು ಮನೆ ರಚನೆಯ ಸಂಪೂರ್ಣ ಉಸ್ತುವಾರಿ ನೋಡಿಕೊಂಡರು. ‘ಶೌರ್ಯ’ ಘಟಕದ ಸ್ವಯಂಸೇವಕರು ಮನೆಯ ಅಂಗಳ ರಚನೆ, ಮನೆಯ ಸುತ್ತಮುತ್ತಲಿನ ಸ್ವಚ್ಚತೆ ಸೇರಿದಂತೆ ಅನೇಕ ಕೆಲಸವನ್ನು ಮಾಡಿಕೊಟ್ಟು ಸಾಮಾಜಿಕ ಪ್ರಜ್ಞೆ ಮೆರೆದರು. ಸಂಘಟಿತ ಪ್ರಯತ್ನದಿಂದ ಬಡ ಕುಟುಂಬಕ್ಕೆ ಮನೆ ಸಿದ್ಧಗೊಂಡಿತು.

ವೈಯಕ್ತಿಕ ಕೆಲಸ ಬದಿಗಿಟ್ಟ ಸ್ವಯಂಸೇವಕರು:
ಶಿರಸಿ ತಾಲ್ಲೂಕಿನ ‘ಶಿರಸಿ ಏ’ ಘಟಕದಲ್ಲಿ ೨೩ ಸ್ವಯಂಸೇವಕರಿದ್ದು ತಮ್ಮ ವೈಯಕ್ತಿಕ ಕೆಲಸವನ್ನು ಬದಿಗಿಟ್ಟು ಮನೆ ರಚನೆ ಕೆಲಸದಲ್ಲಿ ಪಾಲ್ಗೊಂಡಿದ್ದರು. ಮನೆಯ ಸುತ್ತಲಿನ ಸ್ಥಳದಲ್ಲಿ ಸ್ವಚ್ಚತೆ, ಅಂಗಳ ರಚನೆ, ತಾತ್ಕಾಲಿಕ ಮನೆಗೆ ಸಾಗಿಸಿದ್ದ ವಸ್ತುಗಳನ್ನು ಮರು ಸಾಗಿಸಲು ಸಹಕಾರ ಹೀಗೆ ಹೆಚ್ಚಿನ ಕೆಲಸಗಳನ್ನು ‘ಶೌರ್ಯ’ ಸ್ವಯಂಸೇವಕರು ಮಾಡಿರುತ್ತಾರೆ. ಕಳೆದ ಎರಡು ವರ್ಷದ ಹಿಂದೆ ರಚನೆಯಾದ ಈ ಘಟಕ ಸಂಯೋಜಕರಾದ ರೋಹಿಣಿ ಕಾರಳ್ಳಿ, ಘಟಕ ಪ್ರತಿನಿಧಿ ಶಿಲ್ಪಾ ಭಾಸ್ಕರ್ ನಾಯ್ಕ್ ಇವರ ನೇತ್ರತ್ವದಲ್ಲಿ ಯಶಸ್ವಿಯಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಇದುವರೆಗೆ ೧೩೦ ಕ್ಕೂ ಹೆಚ್ಚು ಸಾಮಾಜಿಕ ಸೇವೆಗಳನ್ನು, ೬೦ ಕ್ಕೂ ಹೆಚ್ಚು ವಿಪತ್ತು ನಿರ್ವಹಣಾ ಸೇವೆಗಳನ್ನು ಮಾಡಿದೆ. ಈ ಘಟಕದ ಘಟಕ ಪ್ರತಿನಿಧಿ ಶಿಲ್ಪಾ ನಾಯ್ಕ್ ಇವರು ಶಿರಸಿ ವಿಪತ್ತು ನಿರ್ವಹಣಾ ಸಮಿತಿಯ ಕ್ಯಾಪ್ಟನ್ ಆಗಿ ಆಯ್ಕೆಗೊಂಡಿದ್ದು ತಾಲ್ಲೂಕಿನ ಎಲ್ಲಾ ಘಟಕಗಳ ನಿರ್ವಹಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ತಮ್ಮ ಸಾಮಾಜಿಕ ಸೇವೆಯಿಂದ ಚಿರಪರಿಚಿತರಾಗಿರುವ ಶಿರಸಿ ಏ ಘಟಕದ ಸ್ವಯಂಸೇವಕರು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Share Article
Previous ಶೌರ್ಯ ವಿಪತ್ತು ಘಟಕಗಳ ಸಮಾಲೋಚನಾ ಸಭೆ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved