ಕಾಯಿಲೆಯಿಂದ ಹೈರಾಣಾದ ಕುಟುಂಬಕ್ಕೆ ಧರ್ಮಸ್ಥಳದ ಸಹಾಯಹಸ್ತ

ಬಂಟ್ವಾಳ, ಫೆಬ್ರವರಿ 08, 2025: ಎಂಟು ವರ್ಷಗಳಿಂದ ಒಂದಲ್ಲಾ ಒಂದು ರೀತಿಯ ಕಾಯಿಲೆಯಿಂದ ಬಳಲುತ್ತಾ ಅತಿ ನಿಕೃಷ್ಠ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ಉಮಾವತಿ. ಅದೇನಾಯಿತೋ ಗೊತ್ತಿಲ್ಲ. ಮೈಮೇಲೆ ಗುಳ್ಳೆಗಳು ಮೂಡಿ, ಅಸಹನೀಯ ನೋವು ಶುರುವಾಯಿತು. ಆಸ್ಪತ್ರೆಗೆ ಪದೇ ಪದೇ ಓಡಾಡಿದರು. ಹಣ ಖರ್ಚಾಗಿ ಕೈ ಬರಿದಾಯಿತೇ ವಿನಃ, ಮೈ ಮೇಲಿನ ಗುಳ್ಳೆಗಳು ಮಾಯವಾಗಲಿಲ್ಲ.  ಜನ ಹತ್ತಿರಕ್ಕೆ ಬರಲು ಅಂಜಿಕೆ ಪಡುವಷ್ಟರ ಮಟ್ಟಿಗೆ ಮುಖದಲ್ಲಿ ಅಸಂಖ್ಯಾತ ಹುಣ್ಣುಗಳು ಮೂಡಿದ್ದವು. ಚಿಕ್ಕ ಮಗುವಿನೊಂದಿಗೆ ಕಾಯಿಲೆಯನ್ನು ಜೊತೆಯಾಗಿಸಿಕೊಂಡು ವಯಸ್ಸಾದ ತಾಯಿ ವಸಂತಿ ಇವರೊಂದಿಗೆ ಜೀವನ ನಡೆಸುತ್ತಿದ್ದರು ಉಮಾವತಿ.

ವಯಸ್ಸಾದ ತಾಯಿಯನ್ನು ಮಗಳು ದುಡಿದು ಸಾಕಬೇಕಾಗಿತ್ತು. ಆದರೆ ಇವರ ಪರಿಸ್ಥಿತಿ ಹಾಗಿರಲಿಲ್ಲ. ಮಗಳನ್ನೇ ಸಾಕಿ ಸಲಹಬೇಕಾದ ಅನಿವಾರ್ಯತೆ ತಾಯಿ ವಸಂತಿಯವರಿಗಿತ್ತು. ಮಗಳಿಗೆ ಸ್ನಾನ ಮಾಡಿಸುವುದು, ಆಸ್ಪತ್ರೆಗೆ ಕರೆದೊಯ್ಯುವುದು, ಜೊತೆಗೆ ಹೊಟ್ಟೆಪಾಡಿಗಾಗಿ ದುಡಿಮೆ ಅನಿವಾರ್ಯವಾಗಿ ಮಾಡಬೇಕಾಗಿತ್ತು. ಕಷ್ಠದಲ್ಲಿದ್ದಾಗ ಸಾಂತ್ವಾನ ಹೇಳುವ ಮಂದಿ ಇರಲಿಲ್ಲ.  ಊಟ ಮಾಡಿದ್ದೀರಾ? ಕೇಳುವವರಿರಲಿಲ್ಲ.

ಧರ್ಮಸ್ಥಳದಿಂದ ಸಹಾಯ ಹಸ್ತ :

 ಕಷ್ಠದಲ್ಲಿರುವ ಕುಟುಂಬದ ಬಗ್ಗೆ ಕೇಳಿ ತಿಳಿದಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮನೆ ಬಾಗಿಲಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು. ಕುಟುಂಬ ಎದುರಿಸುತ್ತಿರುವ ಸಮಸ್ಯೆಯನ್ನು ಪೂಜ್ಯರ ಗಮನಕ್ಕೆ ತಂದರು. ಆ ಕುಟುಂಬಕ್ಕೆ ಮೊದಲು ಬೇಕಾಗಿದ್ದು ನಡೆದಾಡಲು ಕಷ್ಠ ಪಡುತ್ತಿದ್ದ ಉಮಾವತಿ ಇವರಿಗೆ ವ್ಹೀಲ್ ಚೇರ್. ಇದನ್ನು ಪೂಜ್ಯರು ತಕ್ಷಣ ಒದಗಿಸಿದರು. ವಯಸ್ಸಾದ ತಾಯಿ ದುಡಿಮೆಗೆ ಕಷ್ಠ ಪಡುತ್ತಿದ್ದರು ಇದನ್ನು ಗಮನಿಸಿ, ಏಳು ವರ್ಷಗಳ ಹಿಂದೆ ಮಾಶಾಸನ ಮಂಜೂರು ಮಾಡಿದರು. ಇಂದಿಗೂ ಮನೆ ಬಾಗಿಲಿಗೆ ಮಾಶಾಸನ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

ಜ್ಞಾನ ವಿಕಾಸದ ನೆರವು:

ಎರಡು ವರ್ಷದ ಹಿಂದೆ ವಯಸ್ಸಾಗಿರುವ ತಾಯಿ ವಸಂತಿ ಇವರು ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಕೋಣೆಯೊಳಗೆ ಮಲಗಿದಲ್ಲಿಯೇ ಇರಬೇಕಾದ ಅನಿವಾರ್ಯತೆ ಇವರಿಗಿದೆ. ಶೌಚಕ್ಕೆ ಹೋಗಲು ಸಹ ಕಷ್ಠ ಪಡುತ್ತಿರುವ ಅವರ ಪರಿಸ್ಥಿತಿಯನ್ನು ಕಂಡು ಮನೆಯ ಒಳಗೆ ಶೌಚಾಲಯವನ್ನು ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಿ ಕೊಡಲಾಗಿದೆ. ತಾಯಿ ಮತ್ತು ಮಗಳ ಆಸ್ಪತ್ರೆಯ ವೆಚ್ಚವನ್ನು ವಿಮೆ ಕಾರ್ಯಕ್ರಮದ ಅಡಿಯಲ್ಲಿ ನೀಡಿ ಸಾಂತ್ವಾನ ಹೇಳಲಾಗಿದೆ.

ಇಂದಿಗೂ ಕುಟುಂಬದ ಪರಿಸ್ಥಿತಿ ಅಯೋಮಯವಾಗಿಯೇ ಇದೆ. ದುಡಿಮೆ ಮಾಡುವುದು ಕಷ್ಠ. ಕಾಯಿಲೆ ಬೇರೆ. ಪೂಜ್ಯರು ನೀಡುತ್ತಿರುವ ಮಾಶಾಸನ ಇವರಿಗೆ ನೆರವಾಗುತ್ತಿದೆ. ಇತ್ತೀಚೆಗೆ ಮನೆ ಭೇಟಿ ಮಾಡಿದ ಯೋಜನೆಯ ಕಾರ್ಯಕರ್ತರು ಈ ಕುಟುಂಬಕ್ಕೆ ಮಾತೃಶ್ರೀ ಅಮ್ಮನವರಿಗೆ ಕುಟುಂಬದ ಪರಿಸ್ಥಿತಿಯನ್ನು ವಿವರಿಸಿ ಪ್ರತಿ ತಿಂಗಳು ಪೌಷ್ಠಿಕ ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.

ಶೌರ್ಯದ ತಂಡದ ಸ್ಪಂದನೆ:

ಉಮಾದೇವಿ ಇವರು ವಾಸ ಮಾಡುತ್ತಿರುವ ಮನೆ ತೀರಾ ಹಳೆಯದು. ಕಳೆದ ಮಳೆಗಾಲವನ್ನು ಕಳೆಯಲು ಪಟ್ಟ ಕಷ್ಠವನ್ನು ನೆನೆದು ಈಗಲೂ ಭೀತಿಗೊಳ್ಳುತ್ತಾರೆ ವಸಂತಿ. ಮಾಡು ಮುರಿದಿತ್ತು. ಹಂಚು ಒಡೆದಿದ್ದವು. ಹಾವು, ಕೀಟಗಳಿಗೆ ಆವಾಸ ಸ್ಥಾನದಂತೆ ಮೇಲ್ಚಾವಣಿಯಿತ್ತು. ನಡೆದಾಡಲೂ ಕಷ್ಠಪಡುತ್ತಿದ್ದ ಇವರಿಗೆ ಮನೆ ರಿಪೇರಿ ಮಾಡಿಕೊಳ್ಳುವುದು ಅಥವಾ ಹಣ ನೀಡಿ ಮಾಡಿಸಿಕೊಳ್ಳುವುದು ಕಷ್ಠದ ಮಾತಾಗಿತ್ತು. ಇವರ ಮನೆಯ ಪರಿಸ್ಥಿತಿಯನ್ನು ಗಮನಿಸಿದ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಮನೆ ರಿಪೇರಿ  ಮಾಡಿಕೊಡುವ ನಿರ್ಧಾರ ಮಾಡಿದರು. ಬಹಳ ಹಳೆಯ ಮನೆ. ಕೇವಲ ಶ್ರಮ ಸೇವೆಯ ಮೂಲಕ ಮನೆ ರಿಪೇರಿ ಸಾಧ್ಯವಿಲ್ಲ. ಹಣದ ಅಗತ್ಯ ಇತ್ತು. ಪುನಃ ಪೂಜ್ಯರ ಸನ್ನಿದಾನಕ್ಕೆ ಮನವಿ ಸಲ್ಲಿಸಲಾಯಿತು. ಪೂಜ್ಯರು ರೂ. 40,000 ಮಂಜೂರು ಮಾಡಿದರು. ಜ್ಞಾನ ವಿಕಾಸದ ವಾತ್ವಲ್ಯ ಕಾರ್ಯಕ್ರಮದ ಅಡಿಯಲ್ಲಿ  ಮನೆ ರಿಪೇರಿ ಕೆಲಸವನ್ನು ಆರಂಭಿಸಲಾಯಿತು. ಒಂದು ವಾರಗಳ ಕಾಲ ದುಡಿದು ‘ಶೌರ್ಯ’ ಸ್ವಯಂಸೇವಕರು ಮನೆ ರಿಪೇರಿ ಮಾಡಿ, ಸುಣ್ಣ ಬಣ್ಣ ಬಳಿದು ವಾಸಕ್ಕೆ ಯೋಗ್ಯವಾಗುವಂತೆ ಮಾಡಿಕೊಟ್ಟಿದ್ದಾರೆ.

ಈ ಕುಟುಂಬ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಂಧವ್ಯ ಸುಮಾರು ಎಂಟು  ವರ್ಷಗಳಿಂದ ಇದೆ. ಪ್ರತೀ ಕಷ್ಠದ ಸಮಯದಲ್ಲಿಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೊತೆಯಾಗಿದೆ. ಈಗಲೂ ಕುಟುಂಬದ ಪರಿಸ್ಥಿತಿ ಕಷ್ಠ ಕಷ್ಠ ಎನ್ನುವ ರೀತಿಯಲ್ಲಿಯೇ ಇದೆ. ಉಮಾವತಿ ಇವರ 12 ವರ್ಷದ ಮಗ ಕೀರ್ತನ್ ಮುಂದೆ  ಮನೆಗೆ ಬೆಳಕಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಕುಟುಂಬವಿದೆ.

Share Article
Previous ನಿರಾಶ್ರಿತರ ಮನೆಗೆ ಬಣ್ಣ, ಮಾನವೀಯತೆ ಮೆರೆದ ಮಡಿಕೇರಿಯ ನಾಪೋಕ್ಲು “ಶೌರ್ಯ” ಘಟಕ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved