ನದಿಗೆ ಹಾರುವ ಮುನ್ನ ಆತ ಯೋಚಿಸುತ್ತಿದ್ದರೆ ಹೀಗಾಗುತ್ತಿರಲಿಲ್ಲ.

ಆರು ಯುವಕರು ನದಿಯ ದಡದಲ್ಲಿ ಕುಳಿತಿದ್ದರು. ಎಲ್ಲರ ಮುಖದಲ್ಲಿ ಭಯ, ಆತಂಕ, ಗೊಂದಲ. ತಪ್ಪು ಮಾಡಿಬಿಟ್ಟೆವು, ಎನ್ನುವ ಪಶ್ಚಾತಾಪ. ಯಾಕಾದರೂ ಬಂದೆವೋ, ದುಗುಡ, ಕಳವಳ ವ್ಯಕ್ತವಾಗುತ್ತಿತ್ತು. ಅಲ್ಲಿರುವ ಎಲ್ಲರೂ ಯುವಕರು. ಅದಮ್ಯ ಉತ್ಸಾಹವುಳ್ಳ ಹದಿಹರೆಯದವರು. ಆದರೆ ಆ ಕ್ಷಣ ಮಾತ್ರ ಅವರ ಝಲ್ಲೆಂದ ಎದೆಯಲ್ಲಿ ನಡುಕ. ಕಳೆದುಹೋದ ಆತ್ಮವಿಶ್ವಾಸ ಢಾಳಾಗಿ ಗೋಚರಿಸುತ್ತಿತ್ತು.


ಪ್ರಶಾಂತವಾಗಿ ಹರಿಯುತ್ತಿದ್ದ ನೇತ್ರಾವತಿ ನದಿಯಲ್ಲಿ ಅಗ್ನಿಶಾಮಕದಳದ ಬೋಟ್ ಅತ್ತಿಂದಿತ್ತ ಚಲಿಸುತ್ತಿತ್ತು. ನಾಲ್ವರು ಅಗ್ನಿಶಾಮಕ ಸಿಬ್ಬಂದಿಗಳು ಏನನ್ನೋ ಹುಡುಕುತ್ತಿದ್ದರು. ನದಿಯ ಮಧ್ಯದಲ್ಲಿರುವ ಕಲ್ಲು ಬಂಡೆ ಬೋಟಿಗೆ ಅತ್ತಿಂದಿತ್ತ ಚಲಿಸಲು ಸಣ್ಣ ತೊಡಕಾಗಿತ್ತು. ಲೈಫ್ ಜಾಕೆಟ್, ಹೆಲ್ಮೆಟ್ ಧರಿಸಿ ಅರಸುತ್ತಿದ್ದ ತಂಡವನ್ನು ನೋಡಿಯೇ ಸ್ಪಷ್ಟವಾಗಿ ಊಹಿಸಬಹುದಿತ್ತು. ಈಜಲು ತೆರಳಿದ ಯಾರೋ ಮುಳುಗಿರಬಹುದೆಂದು.
ನದಿಗೆ ಅಡ್ಡಲಾಗಿದ್ದ ಸೇತುವೆ ಮೇಲೆ ಚಲಿಸುತ್ತಿದ್ದ ವಾಹನವೆಲ್ಲ ಒಂದು ಕ್ಷಣ ನಿಲ್ಲಿಸಿ ಸೇತುವೆಗೆ ಆತುಕೊಂಡು ನಿಂತವರಲ್ಲಿ ಪ್ರಶ್ನಿಸುತ್ತಿದ್ದರು. “ಏನಾಯ್ತು?”. “ಯಾರೋ ಮುಳುಗಿದ್ದಾರಂತೆ”, ಉತ್ತರ ಬಂದೊಡನೆ ವಾಹನ ಮುಂದೆ ಸಾಗುತ್ತಿತ್ತು. ಬೈಕ್ ಸವಾರರು ಸೇತುವೆಯ ಬದಿಯಲ್ಲಿ ವಾಹನ ನಿಲ್ಲಿಸಿ ಕಾರ್ಯಾಚರಣೆ ವೀಕ್ಷಿಸುತ್ತಿದ್ದರು. ಪರಿಣಾಮ ಸೇತುವೆಯುದ್ದಕ್ಕೂ ವಾಹನ ಸಂದಣಿ.


ಸರಿ ಸುಮಾರು ಬೆಳಗ್ಗಿನ ಹತ್ತು ಹದಿನೈದರ ಸಮಯ. ಅದೇ ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ಪ್ರಾದೇಶಿಕ ಕಚೇರಿಯ ವಾಹನ ಸೇತುವೆಯ ಮೇಲೆ ಚಲಿಸುತ್ತಿತ್ತು. ನದಿಯಲ್ಲಿ ಓಡಾಡುತ್ತಿರುವ ಬೋಟ್, ದಡದಲ್ಲಿ ಆತಂಕದಲ್ಲಿ ನಿಂತಿರುವ ಜನ, ಸೇತುವೆಯ ಮೇಲೆ ಉಂಟಾದ ಜಂಗುಳಿಯ ನೋಟ ಅನಾಹುತವಾದುದನ್ನು ಸ್ಪಷ್ಟಪಡಿಸಿತ್ತು. ಸೇತುವೆಯನ್ನು ದಾಟಿ ವಾಹನ ನಿಲ್ಲಿಸಲಾಯಿತು.


ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾÊಸ್, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ ನದಿಯ ದಡಕ್ಕೆ ತಲುಪಲು ಕಿರಿದಾದ ಇಳುಕಲಿನ ದಾರಿಯಲ್ಲಿ ಲಘುಬಗೆಯಿಂದ ಇಳಿದು ಹೊರಟರು. ಒಡೆದ ಬಾಟಲಿಯ ತುಂಡುಗಳು, ಆಯ ತಪ್ಪಿಸಬಲ್ಲ ಕಲ್ಲುಗಳು ಅಲ್ಲಿದ್ದರೂ ಅತ್ತ ಲಕ್ಷö್ಯವಿಲ್ಲದೇ ಹೆಜ್ಜೆ ವೇಗವಾಗಿತ್ತು. ಅರೆಕ್ಷಣದಲ್ಲಿ ನದಿ ಪಾತ್ರ ತಲುಪಿಯಾಗಿತ್ತು.


ಆರು ಯುವಕರು ಅಲ್ಲಿದ್ದರು. ಬೆಂಗಳೂರಿನ ಕಂಪೆನಿಯೊAದರಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ಯುವಕರ ತಂಡ ರಾತ್ರಿ ಹೊರಟು ಬೆಳಿಗ್ಗಿನ ಜಾವ ನೇತ್ರಾವತಿ ನದಿಯ ದಡದಲ್ಲಿತ್ತು. ಹೊಸ ವರ್ಷವಾಗಿದ್ದರಿಂದ ಸ್ನಾನಘಟ್ಟದಲ್ಲಿ ಜನಸಂದಣಿ ಅಧಿಕವಿದೆ ಎಂದುಕೊAಡ ಯುವಕರ ಗುಂಪು ಸ್ವಚ್ಚಂದವಾಗಿ ನೀರಿನಲ್ಲಿ ಈಜಬೇಕೆಂದು ನಿರ್ಧರಿಸಿ ಸಮೀಪದ ಸೇತುವೆಯ ಕೆಳಗೆ ಈಜಲು ತೊಡಗಿತ್ತು.


೨೦೨೧ ರ ಹೊಸ ವರುಷದ ಮೊದಲ ದಿನ. ನವಚೈತನ್ಯದಿಂದ ಯುವಕರ ತಂಡವಿತ್ತು. ಪ್ರಶಾಂತವಾಗಿ ಹರಿಯುತ್ತಿದ್ದ ನದಿ. ನದಿಯ ಮಧ್ಯದಲ್ಲೊಂದು ಕಲ್ಲುಬಂಡೆ. ಬಂಡೆಯವರೆಗೆ ತಲುಪಲು ಮೊಣಕಾಲಿನಷ್ಟು ನೀರಿರುವುದರಿಂದ ಸುಲಭದಲ್ಲಿ ಯುವಕರ ತಂಡ ಬಂಡೆಯವರೆಗೆ ತಲುಪಿತ್ತು. ನದಿಯ ಆಳ, ಅಗಲ, ನೀರು ಹರಿವಿನ ಲಯದ ಪ್ರಜ್ಞೆ ಇಲ್ಲದ ಯುವಕರು ನೀರಾಟ ಆರಂಭಿಸಿದ್ದರು. ಬಂಡೆಯ ಮೇಲಿಂದ ಧೊಪ್ಪನೆ ಜಿಗಿಯುವುದು. ಈಜಿ ಪುನಃ ದಂಡೆಗೆ ಸೇರುವುದು ಖುಷಿ ನೀಡುತ್ತಿತ್ತು. ಸಮಯ ಸರಿಯುವುದನ್ನು ಮರೆಸುತ್ತಿತ್ತು.


ಗುಂಪಿನಲ್ಲಿನ ಓರ್ವ ಯುವಕ ಅತ್ಯುತ್ಸಾಹದಿಂದ ಈಜಲು ತೊಡಗಿದ್ದ. ಗೆಳೆಯರು ಭೇಷ್ ಎನ್ನುವ ರೀತಿಯಲ್ಲಿತ್ತು ಆತನ ಈಜುವಿಕೆ. ಮೇಲಕ್ಕೆ ಎರಗಿ ನೀರಿನಲ್ಲಿ ಹಾರುವುದು, ಒಂದಷ್ಟು ಸಮಯ ನೀರಾಟ, ಬಂಡೆಗೆ ಮರಳುವುದು ಗಂಟೆಯಿAದ ಪುನರಾವರ್ತನೆಯಾಗಿತ್ತು. ಅದೊಮ್ಮೆ ನೀರಿಗಿಳಿಯುವಾಗ ಆಯತಪ್ಪಿದ ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಭಾಸವಾಯಿತು. ಅರೆಕ್ಷಣದಲ್ಲಿ ಸ್ನೇಹಿತರಿಬ್ಬರು ನದಿಗೆ ಧುಮುಕಿದರು. ಹಿಡಿದು ಆತನನ್ನು ಬಂಡೆಯತ್ತ ಕರೆತಂದರು. ಆತನೇನೂ ಬೆದರಿದಂತಿರಲಿಲ್ಲ. “ನನಗೆ ಈಜು ಗೊತ್ತಿದೆ. ಸುಮ್ಮನೆ ನೀವು ಭಯ ಪಟ್ಟಿದ್ದು” ಸ್ನೇಹಿತರಿಗೆ ಆತ ಸಮಾಧಾನ ಹೇಳಿದ್ದ. ಮರಳಿ ಧುಮುಕಲು ಸಿದ್ಧಗೊಂಡಿದ್ದ. “ಬೇಡ ಕಣೋ ಆಳದ ಗುಂಡಿಯಿದೆ” ಎಚ್ಚರಿಸಿದರು ಗೆಳೆಯರು. ಸಲಹೆಯನ್ನು ನಿರ್ಲಕ್ಷಿಸಿದ ಆತ ಸಾಬೂನನ್ನು ತಲೆಗೆ ಹಚ್ಚಿಕೊಂಡ. ಮೈಯೆಲ್ಲ ಚೆನ್ನಾಗಿ ಉಜ್ಜಿಕೊಂಡು ಮೀನಿನಂತೆ ಪುಟಿದು ಶಾಂತ ಹರಿವಿನ ನೀರಿಗೆ ಜಿಗಿದ.
ಸಂಭ್ರಮದ ನಗು, ಸಲುಗೆಯ ಮಾತು ಕತೆಯಲ್ಲಿದ್ದ ಸ್ನೇಹಿತರು ಗಮನಿಸಿದರು. ಜಿಗಿದ ಆತನ ರಭಸ ನೋಡಿ ಅಚ್ಚರಿಯನ್ನೂ ಪಟ್ಟರು. ವೇಗವಾಗಿ ಜಿಗಿದ ಆತನ ಸುಳಿವು ಅರೆ ಕ್ಷಣದವರೆಗೆ ಸಿಗದಂತಾದಾಗ ಮಾತ್ರ ದಂಗಾಗಿದ್ದರು. ಆಳಕ್ಕೆ ಹೋದವನು ಮೇಲಕ್ಕೆ ಬರಲಿಲ್ಲ. ಕೆಲ ಕ್ಷಣ ಕಳೆಯಿತು. ಥಟ್ಟನೆ ಮೇಲೆದ್ದ ಆತ ಪುನಃ ಮುಳುಗಿದ್ದ. ಕಲ್ಲು ಬಂಡೆಯ ಮೇಲಿದ್ದ ಸ್ನೇಹಿತರÀ ಮುಖದಲ್ಲೀಗ ಮಂದಹಾಸ ಕರಗಿತ್ತು. ಸಂಭ್ರಮ ಮಾಯವಾಗಿತ್ತು. ಗೆಲುವು ಕುಂದಿತ್ತು. ಆತನ ಹೆಸರು ಹಿಡಿದು ಕೂಗÀತೊಡಗಿದರು. ಏರು ಧ್ವನಿಯಲ್ಲಿ ಬೊಬ್ಬಿರಿದರು. ಎರಡನೇ ಬಾರಿ ಮೇಲೆದ್ದು ಬಂದ ಆತ ಅರೆಕ್ಷಣದಲ್ಲಿ ಮರಳಿ ಮುಳುಗಿದ್ದ. ಸ್ನೇಹಿತನೊಬ್ಬ ರಕ್ಷಿಸಲೆಂದು ನೀರಿಗೆ ಧುಮುಕಿದ. ಸ್ಥಳೀಯರಿಬ್ಬರು ನದಿಗೆ ಧುಮುಕಿದರು. ಆಳನೀರಿನಲ್ಲಿ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ಮುಳುಗಿದ್ದ ಸ್ಥಳವನ್ನು ಅಂದಾಜಿಸಲು ಅವರು ಸೋತರು. ಕ್ಷಣ ಕಳೆದ ನಂತರ ಮೂರನೆಯ ಬಾರಿ ಮೇಲೆದ್ದ ಆ ವ್ಯಕ್ತಿ ಅಷ್ಟೇ ವೇಗದಲ್ಲಿ ಅಗೋಚರನಾಗಿದ್ದ. ಕದಡಿದ ನೀರಿನ ಕಂಪನ ಶಾಂತವಾಯಿತು. ಮುಳುಗಿದ ಆತ ಮೇಲೆ ಬರಲೇ ಇಲ್ಲ. ಮುಳುಗಿದ ಸ್ಥಳವೆಲ್ಲಿ? ಆತ ಹೋಗಿದ್ದೆಲ್ಲಿ? ಗುರುತಿಸಲು ಸೋಲುವಷ್ಟು ಪ್ರಶಾಂತವಾಗಿತ್ತು ನದಿಯ ನೀರು. ನಡುವಿನ ಬಂಡೆಗೇರಿದ್ದ ಏಳು ಯುವಕರಲ್ಲಿ ಆರು ಮಂದಿ ಭಯದಿಂದ ಮರಳಿ ದಡ ಸೇರಿದ್ದರು. ಯುವಕ ಕೆ. ರಾಜು ನೀರಿನೊಳಗಿದ್ದ.


ಅಗ್ನಿಶಾಮಕ ದಳಕ್ಕೆ ಕರೆ ಹೋಯಿತು. ಬೋಟ್ ಮೂಲಕ ಕಾರ್ಯಾಚರಣೆ ಆರಂಭವಾಯಿತು. ಎರಡು ಗಂಟೆ ಕಳೆದರೂ ಯುವಕನ ಪತ್ತೆಯಾಗಲಿಲ್ಲ. ನದಿಯ ದಡ ತಲುಪುತ್ತಿದ್ದಂತೆ ಪರಿಸ್ಥಿತಿ ಅರ್ಥೈಸಿಕೊಂಡ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರು ‘ಶೌರ್ಯ’ ವಿಪತ್ತು ನಿರ್ವಹಣೆಯ ತುರ್ತು ಸ್ಪಂದನಾ ತಂಡಕ್ಕೆ ಸಂದೇಶ ರವಾನಿಸಿದರು. ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ, ಮುಳುಗು ತಜ್ಞ ಹರೀಶ್ ಕೂಡಿಗೆ ಅವರಿಗೆ ಕರೆ ಹೋಯಿತು. ಅವರು ತೋಟದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಕೆಲಸ ಬದಿಗಿಟ್ಟು ಹೊರಟು ಬಂದರು. ಇನ್ನೋರ್ವ ಸ್ವಯಂಸೇವಕ ಸಂತೋಷ್ ಬೆಳಾಲು ತನ್ನ ಮಹಿಂದ್ರಾ ಪಿಕಪ್ ವಾಹನಕ್ಕೆ ಪೂಜೆ ಮಾಡಿಸಲೆಂದು ದೇವಸ್ಥಾನಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೂಜೆಗೂ ಕಾಯದೆ ಕಾಲ್ಕಿತ್ತರು. ಉಜಿರೆಯಲ್ಲಿ ಸ್ವಯಂಸೇವಕ ರವೀಂದ್ರ ಜೊತೆಯಾದರು. ಧರ್ಮಸ್ಥಳ ಘಟಕದ ಪ್ರಕಾಶ್ ಶೆಟ್ಟಿ ಆಗಲೇ ನದಿಯ ದಡ ತಲುಪಿಯಾಗಿತ್ತು. ನಿಡ್ಲೆ ಘಟಕದ ಗಿರೀಶ್ ಮತ್ತು ಕೊರಗಪ್ಪ ಕೆಲಸ ಬದಿಗಿಟ್ಟು ಓಡೋಡಿ ಬಂದರು.


ಅಗ್ನಿಶಾಮಕ ದಳದ ಸಿಬ್ಬಂದಿಗಳು ಅರಸಲು ತೊಡಗಿ ಅದಾಗಲೇ ಎರಡು ಗಂಟೆಯಾಗಿತ್ತು. ನದಿಯ ಮೂಲೆ ಮೂಲೆಯಲ್ಲಿ ಅರಸಿ ಕಾರ್ಯಾಚರಣೆ ಮುಂದುವರೆಸಿದ್ದರು. ಶೌರ್ಯ ತಂಡ ಹರೀಶ್ ಕೂಡಿಗೆಯವರ ನೇತ್ರತ್ವದಲ್ಲಿ ಪಡೆ ಮತ್ತೊಮ್ಮೆ ಅರಸಲು ಶುರುಮಾಡಿತ್ತು. ನದಿಯಲ್ಲಿ ಮರೆಯಾದ ಯುವಕನ ಜೊತೆಗಾರರಲ್ಲಿ ವ್ಯಕ್ತಿ ಮುಳುಗಿದ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡ ಹರೀಶ್ ಕೂಡಿಗೆ ನದಿಗೆ ತೆರಳಿ ಮೂಗು ಮುಚ್ಚಿ ನದಿಯ ತಳ ಸೇರಿದರು. ಒಂದೇ ಒಂದು ಮುಳುಗು. ಕಲ್ಲುಬಂಡೆಯ ತಳದಲ್ಲಿ ವ್ಯಕ್ತಿಯೋರ್ವ ಮಲಗಿದ್ದಂತೆ ಕಂಡುಬAತು. ಆತನ ಮುಖ ಕೆಳಮುಖವಾಗಿತ್ತು. ಕೈಗಳು ಬಲವಾಗಿ ಕಲ್ಲುಬಂಡೆಯನ್ನು ಹಿಡಿದಿತ್ತು. ಸಮೀಪಿಸಿದ ಹರೀಶ್ ಆತನ ಕಾಲನ್ನು ಹಿಡಿದೆಳೆದರು. ಮೃತ ಶರೀರ ನೀರಿನಿಂದ ಮೇಲೆದ್ದಿತು. ಅಲ್ಲಿಯೇ ಇದ್ದ ಶೌರ್ಯ ಸ್ವಯಂಸೇವಕರು ಶವವನ್ನು ನದಿಯ ದಡಕ್ಕೆ ತಲುಪಿಸಿದರು. ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹತ್ತು ನಿಮಿಷದಲ್ಲಿ ಕಾರ್ಯಾಚರಣೆ ಮುಕ್ತಾಯಗೊಳಿಸಿತ್ತು. ಪೊಲೀಸ್ ಇಲಾಖೆ ಅಗ್ನಿಶಾಮಕ ಅಧಿಕಾರಿಗಳು ತಂಡದ ಸ್ವಯಂಸೇವಕರಿಗೆ ಸಹಭಾಷ್ ಎಂದರು.


ನದಿಯ ಆಳ, ಅಗಲ ಗೊತ್ತಿಲ್ಲದವರು ಈಜುವ ಸಾಹಸಕ್ಕೆ ತೊಡಗುವ ಮುನ್ನ ಈ ಘಟನೆಯನ್ನು ನೆನೆದುಕೊಳ್ಳಬೇಕು. ತಮ್ಮ ಕುಟುಂಬದವರನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳಬೇಕು. ಈ ಕೆಲಸವನ್ನು ಕೆ. ರಾಜು ಮಾಡುತ್ತಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ.


ಮೃತ ರಾಜುವಿನ ವಯಸ್ಸು ಕೇವಲ ಮೂವತ್ತೊಂದು ವರ್ಷ. ಈತನ ಅಣ್ಣ ಆರು ತಿಂಗಳ ಹಿಂದೆ ಮರಣ ಹೊಂದಿದ್ದ. ಈ ಕಹಿ ಘಟನೆಯನ್ನು ಅವರ ಕುಟುಂಬ ಇನ್ನೂ ಮರೆತಿರಲಿಲ್ಲ. ಇದೀಗ ಮತ್ತೊಂದು ಸಾವು ಅವರನ್ನು ದಂಗು ಬಡಿಸಿದೆ. ವಿಷಯ ಇಷ್ಟೇ ಅಲ್ಲ. ಮುಳುಗಿ ಮರಣ ಹೊಂದಿದ ವ್ಯಕ್ತಿಯ ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಅವಳು ಈ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತಾಳೋ?

ಕೋಡಕಣಿ ಜೈವಂತ ಪಟಗಾರ

Share Article
Previous Brave adventurers find student who went swimming and disappeared in river

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved