ರಕ್ಷಣೆ ಮಾಡಿದ ಸ್ವಯಂಸೇವಕರು
ಶಿರಸಿ ತಾಲ್ಲೂಕಿನ ಗಣೇಶನಗರದ ಮನೆಯೊಂದರ ತೆರೆದ ಬಾವಿಯಲ್ಲಿ ಆಕಳು ಬಿದ್ದ ಘಟನೆ ನಡೆದಿದೆ. ನವೆಂಬರ್ 1, 2023 ರ ಸಾಯಂಕಾಲ ಕಾಡು ಸುತ್ತಿ ಮೇಯ್ದು ಕೊಟ್ಟಿಗೆಗೆ ಹೋಗಬೇಕಿದ್ದ ಶಿವರಾಮ್ ಎನ್ನುವವರಿಗೆ ಸೇರಿದ ಆಕಳು ಕಂಪೌಂಡ್ ಇಲ್ಲದ ಖಾಲಿ ಸ್ಥಳದಲ್ಲಿ ಹೊಸದಾಗಿ ತೆಗೆಯುತ್ತಿದ್ದ ಬಾವಿಯಲ್ಲಿ ಆಯತಪ್ಪಿ ಬಿದ್ದಿದೆ.
ಸುಮಾರು ಇಪ್ಪತ್ತು ಅಡಿ ತೆಗೆದಿದ್ದ ಬಾವಿಯಲ್ಲಿ ನೀರು ಇರಲಿಲ್ಲ. ಸಂಜೆ ಬಿದ್ದ ಆಕಳನ್ನು ಯಾರೂ ಗಮನಿಸಿರಲಿಲ್ಲ. ಬೆಳಿಗ್ಗೆ ದಾರಿಹೋಕರು ಆಕಳು ಕೂಗುವುದನ್ನು ಕೇಳಿ ಬಾವಿಯ ಹತ್ತಿರ ತೆರಳಿ ಗಮನಿಸಿದಾಗ ಆಕಳು ಬಿದ್ದಿರುವುದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಸ್ಥಳೀಯರು ಬಾವಿಯಲ್ಲಿ ಬಿದ್ದ ಆಕಳನ್ನು ಮೇಲೆತ್ತಲು ಸಹಾಯ ಮಾಡುವಂತೆ ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ವಿನಂತಿಸಿಕೊಂಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಶಿರಸಿ ‘ಎ’ ಘಟಕದ ಸ್ವಯಂಸೇವಕರಾದ ಜಗದೀಶ್ ಗೌಡ ಹಾಗೂ ಇನ್ನಿತರ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿದ್ದರು.
ಇಪ್ಪತ್ತು ಅಡಿಯ ಬಾವಿಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಭಯಭೀತಿಯಿಂದಿದ್ದ ಆಕಳನ್ನು ಮೇಲಕ್ಕೆತ್ತುವುದು ಸವಾಲಿನ ಸಂಗತಿಯಾಗಿತ್ತು. ಸ್ವಯಂಸೇವಕರಾದ ಜಗದೀಶ್, ವಿನಾಯಕ ಹಾಗೂ ಶ್ರೀಕಾಂತ್ ಇವರು ಬಾವಿಯಲ್ಲಿ ಇಳಿದು ಆಕಳಿಗೆ ಹಗ್ಗವನ್ನು ಕಟ್ಟಿ ಮೇಲಕ್ಕೆ ಎಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಬಾವಿಯ ಮೇಲೆ ನಿಂತಿದ್ದಂತಹ ಸ್ವಯಂಸೇವಕರಾದ ನಾಗರಾಜ್, ಸಂತೋಷ್, ಶಿವು, ರವಿಲಾ ಮತ್ತು ಸ್ಥಳೀಯರು ಸೇರಿಕೊಂಡು ಮೆಲ್ಲನೆ ಆಕಳನ್ನು ಮೇಲಕ್ಕೆ ಎತ್ತಿದ್ದಾರೆ.
ಮೇಲಕ್ಕೆ ಬರುತ್ತಿದ್ದಂತೆಯೇ ಆಕಳಿಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿದ್ದು ತಕ್ಷಣ ಆಕಳು ಓಡುತ್ತಾ ಕಣ್ಮರೆಯಾಗಿದೆ. ಆಕಳ ವಾರಸುದಾರರಾದ ಶಿವರಾಮ್ ಇವರು ತಮ್ಮ ಕೊಟ್ಟಿಗೆಗೆ ತಲುಪಿದ ಬಗ್ಗೆ ಮಾಹಿತಿ ನಿಡಿದ್ದಾರೆ.
ಸ್ವಯಂಸೇವಕರ ಈ ರಕ್ಷಣಾ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳೀಯರು ಸ್ವಯಂಸೇವಕರ ಸೇವೆಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
ವರದಿ: ರೋಹಿಣಿ, ಸಂಯೋಜಕರು