
ಧಾರವಾಡ, ಅಗಸ್ಟ್ 13: ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಧಾರವಾಡದ ತಾಲ್ಲೂಕಿನ ಹತ್ತಿಕೊಳ್ಳ ಬಳಿಯ ಮನೆಯೊಂದು ಕುಸಿದು ಬಿದ್ದಿದೆ. ಆಗ್ಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದ ಗೋಡೆಗಳು ಕುಸಿಯಲು ಕಾರಣ.ಪ್ರಭು ಅವರ ಮನೆ ಇದಾಗಿದ್ದು ಮನೆ ಕುಸಿದ ವಿಷಯ ತಿಳಿದ ‘ಧರ್ಮಸ್ಥಳ ಸೇವಾ’ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕಿ ವೇದಾ ಅವರು ಮನೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.ಹಳೆಯ ಮನೆ ಅದಾಗಿದ್ದು ನೀರಿನಿಂದ ನೆನೆದ ಕಾರಣಕ್ಕೆ ಒಂದು ಪಾರ್ಶ್ವದ ಗೋಡೆ ಕುಸಿದಿತ್ತು. ಪರಿಣಾಮ ಮನೆಯಲ್ಲಿ ಇಟ್ಟಿಗೆಗಳು, ಮಣ್ಣಿನ ರಾಶಿ ಬಿದ್ದು ಸಮಸ್ಯೆ ಆಗಿತ್ತು. ಇದನ್ನು ಗಮನಿಸಿದ ವಿಪತ್ತು ನಿರ್ವಹಣಾ ಸಂಯೋಜಕಿ ಸ್ವಚ್ಚತಾ ಕಾರ್ಯಕ್ಕೆ ಆ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಸ್ವಯಂಸೇವಕರಿಗೆ ದೂರವಾಣಿ ಕರೆ ಮಾಡಿದ್ದಾರೆ. ಕೂಡಲೇ ಸ್ಪಂದಿಸಿದ ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಯುವ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಂಡ ಸ್ವಯಂಸೇವಕರು ಮನೆಯೊಳಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವುದು, ಇಟ್ಟಿಗೆಗಳನ್ನು ಜೋಡಿಸಿಡುವುದು, ಕಟ್ಟಿಗೆಯ ಗಳಗಳನ್ನು ವರ್ಗಾಯಿಸುವ ಕೆಲಸ ಮಾಡಿರುತ್ತಾರೆ.ಸಂಯೋಜಕಿ ವೇದಾ ಅವರ ನೇತ್ರತ್ವದಲ್ಲಿ ಈ ಸೇವಾಕಾರ್ಯ ನಡೆಸಲಾಯಿತು. ಸ್ವಯಂಸೇವಕರಾದ ಹನುಮಂತ, ಗೌಡಪ್ಪ, ಮಂಜುನಾಥ್ ಬ್ಯಾಳಿ ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು.