
ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮದಲ್ಲಿ ಕೃಷಿ ಭೂಮಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರ ಸಕಾಲದ ಸ್ಪಂದನೆಯಿಂದ ಸುಮಾರು 50 ಎಕರೆ ಜೋಳ, ತರಕಾರಿ, ಹೂವಿನ ಬೆಳೆ ಉಳಿದಿದೆ.
ಬಿರು ಬಿಸಿಲಿನಲ್ಲಿ ಹೊತ್ತಿಕೊಂಡ ಬೆಂಕಿ:
ದಿನಾಂಕ: 23.03.2025 ರ ಮಧ್ಯಾಹ್ನ ಕೃಷಿ ಭೂಮಿಯ ಬದಿಯಲ್ಲಿರುವ ಬಯಲು ಪ್ರದೇಶದಲ್ಲಿ ಒಣಗಿಕೊಂಡಿದ್ದು ಹರಡಿರುವ ಹುಲ್ಲಿಗೆ ಬೆಂಕಿ ತಗುಲಿದೆ. ಬಿರು ಬಿಸಿಲು, ಅಲ್ಲದೇ ಗಾಳಿ ಇರುವುದರಿಂದ ಸಣ್ಣದಾಗಿ ಕಾಣಿಸಿದ ಬೆಂಕಿಜ್ವಾಲೆಯಾಗಿ ಹರಡತೊಡಗಿದ್ದವು. ಇದನ್ನು ದೂರದಿಂದಲೇ ಗಮನಿಸಿದ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕ ಯಶವಂತ್ ಕಾಂಬಳೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ ಸ್ವಯಂಸೇವಕರು:
ಸ್ಥಳೀಯವಾಗಿ ಯಾರೂ ಇಲ್ಲದೇ ಇದ್ದು ಬೆಂಕಿ ತಕ್ಷಣ ಹತ್ತಿರದಲ್ಲಿಯೇ ಇರುವ ಕೃಷಿ ಬೆಳೆಗೆ ವ್ಯಾಪಿಸುವ ಅಪಾಯ ಇರುವುದರಿಂದ ಘಟಕದ ಪ್ರತಿನಿಧಿ ಬಾಬಾಸು ಪವಾರ್ ಇವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಲಯದ ಮೇಲ್ವಿಚಾರಕರಾದ ರಾಮದಾಸ್ ಗೌಡ ಇವರು ಅಗ್ನಿಶಾಮಕ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ತಂದಿದ್ದಾರೆ.

ಎರಡು ಗಂಟೆಗಳ ಕಾಲ ಕಾರ್ಯಾಚರಣೆ:
ಅಗ್ನಿಶಾಮಕ ವಾಹನ ಬರುವ ಮೊದಲೇ ಸ್ಥಳದಲ್ಲಿ ಸೇರಿದ ಸ್ವಯಂಸೇವಕರು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಬೆಂಕಿ ನಂದಿಸಲು ತೊಡಗಿದ್ದರು. ಸ್ಥಳೀಯರು ಮಾಹಿತಿ ಇಲ್ಲದೇ ಇರುವ ಕಾರಣಕ್ಕೆ ಬಂದಿರದೇ ಇರುವುದರಿಂದ 7 ಮಂದಿ ಸ್ವಯಂಸೇವಕರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ವಲಯ ಮೇಲ್ವಿಚಾರಕರ ಸಮಯಪ್ರಜ್ಞೆ:
ಸ್ವಯಂಸೇವಕರಿಂದ ದೂರವಾಣಿ ಕರೆ ಬರುತ್ತಿದ್ದಂತೆಯೇ ನಿಪ್ಪಾಣಿ ಪಟ್ಟಣದಲ್ಲಿಯೇ ಇದ್ದ ವಲಯದ ಮೇಲ್ವಿಚಾರಕರಾದ ರಾಮದಾಸ್ ಗೌಡ ಇವರು ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ತುರ್ತಾಗಿ ಅಗ್ನಿಶಾಮಕ ವಾಹನ ಕೃಷಿ ಭೂಮಿಗೆ ತೆರಳಲು ಇರುವ ಸುಲಭದ ಮತ್ತು ಸಮೀಪದ ರಸ್ತೆಯ ಮೂಲಕ ಕರೆದುಕೊಂಡು ಹೋಗಿದ್ದು ಅಗ್ನಿಶಾಮಕ ದಳ ಕನಿಷ್ಠ ಅವಧಿಯಲ್ಲಿ ಸ್ಥಳಕ್ಕೆ ತಲುಪಲು ಸಹಾಯಕವಾಗಿದೆ.

ಸತತವಾಗಿ 2 ಗಂಟೆ ನಡೆದ ಕಾರ್ಯಾಚರಣೆ:
ಕೃಷಿ ಬೆಳೆಗೆ ಬೆಂಕಿ ತಗಲುವ ಸಾಧ್ಯತೆ ಇರುವುದರಿಂದ ತಕ್ಷಣ ಬೆಂಕಿ ನಂದಿಸುವ ಅನಿವಾರ್ಯತೆ ಇತ್ತು. ಶೀಘ್ರ ವ್ಯಾಪಿಸುತ್ತಿರುವ ಬೆಂಕಿಯನ್ನು ನಂದಿಸತೊಡಗಿದ ಅಗ್ನಿಶಾಮಕ ದಳ ಹಾಗೂ ಶೌರ್ಯ ಸ್ವಯಂಸೇವಕರು ಸತತವಾಗಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲು ಯಶಸ್ವೀಯಾಗಿದ್ದಾರೆ.
ಮೆಚ್ಚುಗೆಗೆ ಪಾತ್ರವಾದ ತುರ್ತು ಸ್ಪಂದನೆ:
ಸ್ವಯಂಸೇವಕರ ತಕ್ಷಣದ ಸ್ಪಂದನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಕಾಲದ ಸ್ಪಂದನೆಯಿಂದ ಸುಮಾರು 50 ಎಕರೆ ಪ್ರದೇಶದಲ್ಲಿನ ಜೋಳ, ತರಕಾರಿ, ಹೂವಿನ ಬೆಳೆ ಉಳಿದಿದೆ. ಸ್ವಯಂಸೇವಕರ ಸ್ಪಂದನೆಗೆ ಶ್ಲಾಘನೆ ವ್ಯಕ್ತಪಡಿಸಿದ ಅಗ್ನಿಶಾಮಕ ಇಲಾಖೆ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಬೆಂಕಿ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿಯನ್ನು ಸ್ವಯಂಸೇವಕರಿಗೆ ನೀಡುವ ಭರವಸೆಯನ್ನು ನೀಡಿದ್ದಾರೆ.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ