
ಇಂದಿನ ಸ್ವಾರ್ಥದ ಪ್ರಪಂಚದಲ್ಲಿ ತಾನು ಮಾಡುತ್ತಿರುವ ಕೆಲಸದಲ್ಲಿ ನನಗೆಷ್ಟು ಲಾಭ ಬರುತ್ತದೆ ಎಂಬ ದುರಾಲೋಚನೆ ಮಾಡುವವರ ಸಂಖ್ಯೆಯೇ ಜಾಸ್ತಿ. ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು, ಶ್ರಮ ವಹಿಸಿ ಇನ್ನೊಬ್ಬರಿಗೆ ಒಳಿತಾಗುವ ಕೆಲಸವನ್ನು ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಇದಕ್ಕೆ ಅಪವಾದವೆಂಬಂತೆ ಮೂಡಿಗೆರೆ ತಾಲ್ಲೂಕಿನ ಖಾಂಡ್ಯ ಹೋಬಳಿಯ ಯುವಕರು ಕಳೆದ ಐದು ವರ್ಷಗಳಿಂದ ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕವನ್ನು ರಚಿಸಿಕೊಂಡು ಈ ಸಂಘಟನೆಯ ಮೂಲಕ ಸಮಾಜದಲ್ಲಿ ಮಾದರಿಯಾಗಿದ್ದಾರೆ.
ಬಡ ಕುಟುಂಬಕ್ಕೆ ಮನೆ:
ದೇವದಾನ ಗ್ರಾಮದ ಮಲಮಕ್ಕಿಯ ನಾಗರಾಜು ಇವರು ಹೆಂಡತಿ ಮಕ್ಕಳು ಇಲ್ಲದೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕಾಡುತ್ತಿರುವ ಅನಾರೋಗ್ಯ ಇವರಿಗೆ ಕೂಲಿ ಕೆಲಸ ಮಾಡಲು ಸಾಧ್ಯವಿಲ್ಲವಾಗಿಸಿದೆ. ಮನೆಯ ಅಗತ್ಯ ಖರ್ಚುಗಳನ್ನು ನೋಡಿಕೊಳ್ಳಲೂ ಅಸಾಧ್ಯವಾದ ಪರಿಸ್ತಿತಿಯಲ್ಲಿ ಇವರಿದ್ದಾರೆ. ಔಷಧಿ ಖರೀದಿಗೂ ಕಷ್ಟಪಡಬೇಕಾದ ದೈನ್ಯತೆ ಇವರದು.

ಮಾಶಾಸನ ನೀಡುತ್ತಿರುವ ಧರ್ಮಸ್ಥಳ:
ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿಯಲ್ಲಿರುವ ಇವರ ಸಮಸ್ಯೆಯನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತೀ ತಿಂಗಳು ರೂ. 1000 ದಂತೆ ಮಾಶಾಸನ ನೀಡುತ್ತಾ ಬಂದಿದೆ. ಮನೆ ಬಾಗಿಲಿಗೆ ಹಣವನ್ನು ತಲುಪಿಸುವ ಕೆಲಸವನ್ನು ಯೋಜನೆಯ ಕಾರ್ಯಕರ್ತರು ಮಾಡುತ್ತಿದ್ದಾರೆ. ಇದು ಜೀವನ ನಿರ್ವಹಣೆಗೆ ಒಂದಿಷ್ಟು ಸಹಕಾರಿಯಾಗಿದೆ.
ಮನೆ ರಿಪೇರಿಗೆ ಶೌರ್ಯ ತಂಡದ ಸಹಾಯಹಸ್ತ:
ಇವರ ವಾಸದ ಮನೆ ದುರಸ್ತಿಯಲ್ಲಿದ್ದು. ಯಾವುದೇ ಸಂದರ್ಭದಲ್ಲಿ ಮನೆಯ ಮಾಡು ಕುಸಿಯುವ ಹಂತದಲ್ಲಿ ಇತ್ತು. ಮಳೆಗಾಲ ಸಮೀಪಿಸುತ್ತಿರುವುದರಿಂದ ಜೀವಭಯದಲ್ಲಿ ಇವರು ವಾಸ್ತವ್ಯವಿದ್ದರು. ಮನೆ ರಿಪೇರಿ ಮಾಡುವಷ್ಟು ಸಾಮರ್ಥ್ಯ ಇವರಿಗಿಲ್ಲ. ಹಣವೂ ಕೈಯಲ್ಲಿ ಇರಲಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಶಾಸನ ಪಡೆಯುತ್ತಿರುವ ಇವರ ಪರಿಚಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಇದೆ. ಅವರ ಕಷ್ಟದ ಬಗ್ಗೆ ಅರಿವಿದೆ. ಕಾರ್ಯಕರ್ತರ ಮೂಲಕ ಮನೆಯ ಸಮಸ್ಯೆಯನ್ನು ಅರಿತ ಶೌರ್ಯ ವಿಪತ್ತು ನಿರ್ವಹಣಾ ಘಟಕ ಖಾಂಡ್ಯಾ ದ 25 ಮಂದಿ ಸ್ವಯಂ ಸೇವಕರು ಸಂಯೋಜಕರಾದ ಚಂದ್ರಶೇಖರ್ ಇವರ ನಾಯಕತ್ವದಲ್ಲಿ ಮನೆ ರಿಪೇರಿ ಮಾಡಿಕೊಡಲು ನಿರ್ಧರಿಸಿ ಶ್ರಮದಾನ ನಡೆಸಿದ್ದಾರೆ.
ಒಂದೇ ದಿನದಲ್ಲಿ ಪೂರ್ಣ:
ಮನೆಯ ಗೋಡೆಗಳು ಗಟ್ಟಿಯಾಗಿ ಇದ್ದು ಮೇಲ್ಚಾವಣಿ ಬೀಳುವ ಸ್ಥಿತಿಯಲ್ಲಿತ್ತು. ಮೇಲ್ಚಾವಣಿಗೆ ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡ ಸ್ವಯಂಸೇವಕರು ಹಳೆಯ ಹಂಚುಗಳನ್ನು ಜಾಗರೂಕತೆಯಿಂದ ಇಳಿಸಿ ರೀಪು, ಪಕಾಸುಗಳನ್ನು ಜೋಡಿಸಿ ಹಂಚಿನ ಹೊದಿಕೆ ಮಾಡಿಕೊಟ್ಟಿದ್ದಾರೆ. 25 ಮಂದಿ ಸ್ವಯಂಸೇವಕರ ದಿನವಿಡೀ ಶ್ರಮದಿಂದ ಕೇವಲ ಒಂದೇ ದಿನದಲ್ಲಿ ಮನೆಯ ರಿಪೇರಿ ಮಾಡಲು ಸಾಧ್ಯವಾಗಿದೆ.

ಕೈಜೋಡಿಸಿದವರು:
ಮನೆ ರಿಪೇರಿ ಶ್ರಮದಾನದಲ್ಲಿ ಮೇಲ್ವಿಚಾರರಾದ ಸುರೇಶ್, ಸೇವಾಪ್ರತಿನಿಧಿಯಾದ ನಂದಿನಿ, ನಂದಿತಾ, ಷಾಜಿಯಾ, ಸುಧಾಕರ್. ರೂಪ, ಸುರೇಶ್ ಕೋಟಿಯಾನ್, ಅವಿನಾಶ್ ಟೆಲಿಸ್, ಮಂಜುನಾಥ್, ಮಹೇಶ್, ರಚಿತ್ ಕುಮಾರ್, ಪ್ರಮೋದ್, ಯೋಗೇಶ್, ಸಂಜಿತ್, ರಘುಪತಿ, ಸಂಪತ್, ಕೃಷ್ಣ, ಹನೀಫ್, ರಂಜಿತ್, ಕಳಸ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಚಂದ್ರಶೇಖರ್ ರೈ ಕೈಜೋಡಿಸಿದ್ದಾರೆ.
ವಸ್ತುಗಳನ್ನು ಸಾಗಿಸಲು ಉಚಿತ ಟ್ರ್ಯಾಕ್ಟರ್ ವ್ಯವಸ್ಥೆಯನ್ನು ರವಿ ಮಸೀಗದ್ದೆ ಇವರು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಉಳಿದಂತೆ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ಸ್ಥಳೀಯರಾದ ಸತೀಶ್, ರೇಣುಕ. ಯೋಗೀಶ್, ಪ್ರಮೋದ್ ಇವರು ಸಹಕಾರ ನೀಡಿದ್ದಾರೆ.
ಮನೆ ರಿಪೇರಿಯ ನಂತರ ನಾಗರಾಜು ಇವರು ನಿರಾತಂಕದಿಂದ ಇದ್ದಾರೆ. ಈ ವರ್ಷದ ಮಳೆಗಾಲದಲ್ಲಿ ಯಾವುದೇ ಭಯವಿಲ್ಲದೇ ಇರಬಹುದು ಎನ್ನುವ ಭರವಸೆ ಅವರಲ್ಲಿ ಮೂಡಿದೆ. ಇವರ ಮುಗುಳ್ನಗು, ವ್ಯಕ್ತಪಡಿಸಿದ ಸಂತೋಷ ಸ್ವಯಂಸೇವಕರಿಗೆ ತಮ್ಮ ಕೆಲಸದ ಬಗ್ಗೆ ಧನ್ಯತೆ ಮೂಡಿಸಿದೆ. ‘ಒಬ್ಬ ಬಡವನಿಗೆ ಮನೆ ನಿರ್ಮಿಸಿ ಕೊಟ್ಟರೆ. ಒಂದು ದೇವಾಲಯ ನಿರ್ಮಿಸಿದಂತೆ’ ಎನ್ನುವ ಅಭಿಪ್ರಾಯವನ್ನು ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಚಂದ್ರಶೇರ್ ರೈ ವ್ಯಕ್ತಪಡಿಸಿದರು.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ