
ಯಾವುದೇ ಅವಘಡ ಉಂಟಾದರೆ ನಮಗೆ ತಕ್ಷಣ ನೆನಪಾಗುವುದು ಶೌರ್ಯ ತಂಡ. ಸಮುದಾಯದ ಜನರಿಗೆ ಚಿರಪರಿಚಿತವಾಗಿರುವ ಶೌರ್ಯ ತಂಡದವರಿಗೆ ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಅರಿವು ಬಹಳ ಮುಖ್ಯ ಎಂದು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಹೇಳಿದರು.
ಜ್ಯೋತಿ ಆಸ್ಪತ್ರೆ ಬೆಳ್ತಂಗಡಿ, ಕೆ.ಎಮ್. ಸಿ ಆಸ್ಪತ್ರೆ ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ( ರಿ) ಧರ್ಮಸ್ಥಳ ಸಹಭಾಗಿತ್ವದಲ್ಲಿ ದಿನಾಂಕ: 22.09.2025 ರಂದು ನಡೆದ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಯ ತಜ್ಞರಾದ ಶ್ರೀ ಕಬಿಲನ್ ಇವರು ತರಬೇತಿ ನೀಡಿ ಪ್ರಥಮ ಚಿಕಿತ್ಸೆ ಎಂದರೆ ತೀವ್ರವಾದ ಅನಾರೋಗ್ಯ ಅಥವಾ ಗಾಯ ಸಂಭವಿಸಿದ ತಕ್ಷಣ, ತಜ್ಞ ವೈದ್ಯಕೀಯ ನೆರವು ಬರುವವರೆಗೆ ನೀಡಲಾಗುವ ತಕ್ಷಣದ ಮತ್ತು ಪ್ರಾಥಮಿಕ ವೈದ್ಯಕೀಯ ಆರೈಕೆ. ಇದರ ಮುಖ್ಯ ಉದ್ದೇಶ ಗಾಯ ಅಥವಾ ಅನಾರೋಗ್ಯದ ತೀವ್ರತೆಯನ್ನು ಕಡಿಮೆ ಮಾಡುವುದು, ಸಂಭಾವ್ಯ ದೀರ್ಘಕಾಲೀನ ಅಂಗವೈಕಲ್ಯವನ್ನು ತಡೆಯುವುದು ಮತ್ತು ತುರ್ತು ಪರಿಸ್ಥಿತಿಯಲ್ಲಿ ಬಲಿಪಶುವಿನ ಜೀವವನ್ನು ಉಳಿಸುವುದು. ಸಣ್ಣ ಗಾಯಗಳನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು, ಹೆಚ್ಚು ಗಂಭೀರ ಪರಿಸ್ಥಿತಿಗಳಲ್ಲಿ ವೈದ್ಯಕೀಯ ನೆರವು ಸಿಗುವವರೆಗೆ ವ್ಯಕ್ತಿಯನ್ನು ಸ್ಥಿರವಾಗಿರಿಸುವುದು ಇದರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
ಪ್ರಥಮ ಚಿಕಿತ್ಸೆಯ ಮುಖ್ಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿಜೀವ ಉಳಿಸುವುದು: ಉಸಿರಾಟ ನಿಲ್ಲುವುದು ಅಥವಾ ರಕ್ತಸ್ರಾವದಂತಹ ಮಾರಣಾಂತಿಕ ಪರಿಸ್ಥಿತಿಗಳಲ್ಲಿ ತಕ್ಷಣದ ಕ್ರಮ ತೆಗೆದುಕೊಳ್ಳುವ ಮೂಲಕ ಜೀವ ಉಳಿಸುವುದು.

ಗಾಯವನ್ನು ತಡೆಯುವುದು: ಗಾಯದ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಮುಂದಾಗಬಹುದಾದ ಹಾನಿಯನ್ನು ತಡೆಗಟ್ಟುವುದು.
ಚೇತರಿಕೆಯನ್ನು ಉತ್ತೇಜಿಸುವುದು: ಸಣ್ಣ ಗಾಯಗಳಿಗೆ ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದರಿಂದ ಪರಿಣಾಮಗಳನ್ನು ತಪ್ಪಿಸಬಹುದು ಮತ್ತು ಶೀಘ್ರ ಚೇತರಿಕೆಗೆ ಸಹಾಯ ಮಾಡಬಹುದು ವಿವರಣೆ ನೀಡಿದರು.
ಸಣ್ಣ ಕಡಿತಗಳು, ಗೀರುಗಳು ಮತ್ತು ಸುಟ್ಟಗಾಯಗಳನ್ನು ಸ್ವಚ್ಛಗೊಳಿಸಿ ಬ್ಯಾಂಡೇಜ್ ಮಾಡುವುದು.

ಕೃತಕ ಉಸಿರಾಟ (CPR) ನೀಡುವುದು. ರಕ್ತಸ್ರಾವವನ್ನು ನಿಯಂತ್ರಿಸುವುದು ಮತ್ತು ಗಾಯಗಳಿಗೆ ಡ್ರೆಸಿಂಗ್ ಅನ್ವಯಿಸುವುದು. ಶಾಖದ ಬಳಲಿಕೆ ಅಥವಾ ಶಾಖದ ಹೊಡೆತದ ಸಂದರ್ಭದಲ್ಲಿ ವ್ಯಕ್ತಿಯನ್ನು ತಂಪಾಗಿಸುವುದು. ಗಾಯಗೊಂಡ ವ್ಯಕ್ತಿಯನ್ನು ಸುರಕ್ಷಿತವಾಗಿರಿಸುವುದು ಮತ್ತು ಅವನನ್ನು ಹೆಚ್ಚು ಅಲುಗಾಡಿಸದೆ ಇರುವುದು. ಎದೆ ನೋವು, ಹೃದಯಾಘಾತದ ಲಕ್ಷಣಗಳು, ಪ್ರಯಾಣ ಮಾಡುವಾಗ, ಬಸ್ ನಿಲ್ದಾಣದಲ್ಲಿ, ರಿಕ್ಷಾ ನಿಲ್ದಾಣದಲ್ಲಿ, ಮನೆಯಲ್ಲಿ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ವ್ಯಕ್ತಿ ಎದೆನೋವು ಭಾಧಿಸಿದಾಗ ಮೊದಲ ಚಿಕಿತ್ಸೆ ಹೇಗಿರಬೇಕು. ಲಕ್ಷಣಗಳ ಆಧಾರದ ಮೇಲೆ ಪ್ರಥಮ ಚಿಕಿತ್ಸೆ ನಿರ್ಧರಿಸುವ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ಭಾಧಿತ ವ್ಯಕ್ತಿಗೆ ಪ್ರಾಥಮಿಕ ಪ್ರತಿಕ್ರಿಯೆ ನೀಡಿದರೆ ವ್ಯಕ್ತಿಯನ್ನು ಉಳಿಸಲು ಸಾಧ್ಯವಿದೆ. ತಲೆಸುತ್ತು ಬಂದು ಕುಸಿದು ಬಿದ್ದಾಗ ಪ್ರಥಮ ಚಿಕಿತ್ಸೆ, ಮಧುಮೇಹ ಇರುವವರಿಗೆ ಶುಗರ್ ಕಡಿಮೆ ಆದಾಗ ಉಂಟಾಗುವ ಲಕ್ಷಣಗಳು ಮತ್ತು ಅಂತಹ ವ್ಯಕ್ತಿಗಳಿಗೆ ಚಿಕಿತ್ಸೆ, ಪಾರ್ಶ್ವವಾಯು ಸಂದರ್ಭದಲ್ಲಿ ವ್ಯಕ್ತಿಯ ಲಕ್ಷಣಗಳು, ಬ್ಯಾಂಡೇಜ್ ವಿಧಾನಗಳು, ರಕ್ತಸ್ರಾವದ ಸಮಯದಲ್ಲಿ ಚಿಕಿತ್ಸೆ ಗಳ ಬಗ್ಗೆ ಮಾಹಿತಿ ನೀಡಿದರು.

ಸುಟ್ಟ ಗಾಯಗಳಿಗೆ ಚಿಕಿತ್ಸೆ, ಸುಟ್ಟ ಸಂದರ್ಭದಲ್ಲಿ ಸಾಂಪ್ರದಾಯಿಕ ವಿಧಾನಗಳಿಂದ ಚಿಕಿತ್ಸೆ ಮಾಡುವಾಗ ಉಂಟಾಗುವ ತೊಂದರೆಗಳು ಇತ್ಯಾದಿ ಬಗ್ಗೆ ಮಾಹಿತಿ ನೀಡಿದರು.
ಜೇನು ಕಡಿತ ಉಂಟಾದಾಗ ಲಕ್ಷಣಗಳು, ಹಾವು ಕಡಿತದ ಲಕ್ಷಣಗಳು, ನಾಯಿ ಕಡಿತ ಇತ್ಯಾದಿ ಬಗ್ಗೆ ಮಾಹಿತಿಯನ್ನು ನೀಡಿದರು. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆ ವಿಧಾನವನ್ನು ಮಾಹಿತಿ ನೀಡಿದರು.
ಸ್ಥಳೀಯವಾಗಿ ಎದುರಿಸುವ ಸಮಸ್ಯೆಗಳು, ಆಸ್ಪತ್ರೆ ಸಂಪರ್ಕ, ಸಹಾಯವಾಣಿಗೆ ಕರೆ ಮಾಡುವುದು ಇತ್ಯಾದಿ ಬಗ್ಗೆ ಚರ್ಚೆ ಮಾಡಲಾಯಿತು.
ಸ್ವಯಂಸೇವಕರು ಪ್ರಾಯೋಗಿಕ ಕಲಿಕಾ ವಿಧಾನದ ಮೂಲಕ ತರಬೇತಿ ನೀಡಲಾಯಿತು.

ಜ್ಯೋತಿ ಆಸ್ಪತ್ರೆ ಬೆಳ್ತಂಗಡಿಯ ತರಬೇತಿ ಆಯೋಜಕರಾದ ಕು. ಜೆನ್ನಿ , ಗುರುವಾಯನಕೆರೆ ಯೋಜನೆ ವ್ಯಾಪ್ತಿಯ ಕೃಷಿ ಮೇಲ್ವಿಚಾರಕರಾದ ಶ್ರೀ ಕೃಷ್ಣ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಉತ್ತರ ಕರ್ನಾಟಕ ಭಾಗದ ಯೋಜನಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಗುರುವಾಯನಕೆರೆ ವಿಪತ್ತು ನಿರ್ವಹಣಾ ಸಮಿತಿಯ ಸಂಯೋಜಕರು ಮತ್ತು ಸ್ವಯಂಸೇವಕರು ಒಟ್ಟು 35 ಮಂದಿ ತರಬೇತಿಯಲ್ಲಿ ಉಪಸ್ಥಿತರಿದ್ದರು.