ಭಕ್ತರಿಗೆ ಪಾನೀಯ, ಕುಡಿಯುವ ನೀರು, ವಿಶ್ರಾಂತಿ, ಸ್ವಚ್ಚತೆ, ಅನ್ನಸಂತರ್ಪಣೆಗೆ ವ್ಯವಸ್ಥೆ

ಬೆಳ್ತಂಗಡಿ, ಫೆಬ್ರವರಿ, 26,2025: ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಪಾದಯಾತ್ರಿಗಳಿಗಾಗಿ ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಮೂರು ದಿನಗಳ ಕಾಲ ವಿವಿಧ ಸೇವೆ ಸಲ್ಲಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಡೆಗೆ ಭಕ್ತರ ಭಕ್ತಿಯ ನಡಿಗೆ ಯಶಸ್ವಿಗೊಳ್ಳುವಂತೆ ಮಾಡಿದ್ದಾರೆ.
ಕುಡಿಯುವ ನೀರಿನ ವ್ಯವಸ್ಥೆ: ಪಾದಯಾತ್ರಿಗಳು ಸಾಗಿಬರುವ ಚಾರ್ಮಾಡಿ ಘಟ್ಟದ ರಸ್ತೆಯಲ್ಲಿ ಆಯಾಸಗೊಂಡ ಯಾತ್ರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಶೌರ್ಯ ಘಟಕದಿಂದ ಮಾಡಲಾಗಿದೆ. ಸಾಮಾನ್ಯವಾಗಿ ಘಟ್ಟದ ಕೆಳಗಿನ ಪ್ರದೇಶದಲ್ಲಿ ಯಾತ್ರಿಕರಿಗೆ ಕುಡಿಯಲು ನೀರು, ಮಜ್ಜಿಗೆ ಮತ್ತಿತರ ಪಾನೀಯಗಳು ಯತೇಚ್ಚವಾಗಿ ಸಿಗುತ್ತದೆ. ಆದರೆ ಘಟ್ಟದ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಬಿಸಿಲಿನಲ್ಲಿ ನಡೆಯುವ ಯಾತ್ರಿಕರಿಗೆ ಇದರಿಂದ ತೊಂದರೆ ಉಂಟಾಗುತ್ತದೆ. ಇದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಇದರ ಅಡಿಯಲ್ಲಿ ರಚಿಸಲಾದ ‘ಶೌರ್ಯ’ ಘಟಕವು ಯೋಜನೆಯ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್,ಎಸ್ ರವರ ನಿರ್ದೇಶನದಂತೆ, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರ ಮಾರ್ಗದರ್ಶನದಲ್ಲಿ ಚಾರ್ಮಾಡಿ ಘಟ್ಟದಲ್ಲಿ ಮೂರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಘಟ್ಟದ 11 ನೇ ತಿರುವು, 9 ನೇ ತಿರುವು ಹಾಗೂ 7 ನೇ ತಿರುವಿನಲ್ಲಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡ ಸ್ವಯಂಸೇವಕರು ಶುದ್ಧ ಕುಡಿಯುವ ನೀರಿನ ಜೊತೆಗೆ ಬೆಲ್ಲ, ಮಜ್ಜಿಗೆ ಹಾಗೂ ಪಾನಕದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಮುಂಡಾಜೆಯಿಂದ ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಭಕ್ತರಿಗೆ ಮುಂಡಾಜೆಯಲ್ಲಿ ಒಂದು ಕೇಂದ್ರ ಆರಂಭಿಸಿ ಕುಡಿಯುವ ನೀರಿನ ವಿತರಣೆ ಮಾಡಲಾಗಿದೆ. ಅಲ್ಲದೇ ಆಯಾಸಗೊಂಡು ಬಂದ ಯಾತ್ರಿಕರಿಗೆ ವಿಶ್ರಾಂತಿ ಪಡೆಯಲು ಚೇರ್ ಗಳನ್ನು ಇಟ್ಟಿದ್ದು ಯಾತ್ರಿಕರು ಪ್ರಯೋಜನ ಪಡೆದಿರುತ್ತಾರೆ.

ಅಂದಿನ ಕಸ ಅಂದೇ ಸ್ವಚ್ಚತೆ: ಕುಡಿಯುವ ನೀರಿನ ವಿತರಣಾ ಸ್ಥಳದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ ಸ್ವಯಂಸೇವಕರು ಸಂಜೆಯ ವೇಳೆಗೆ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ವಸ್ತುಗಳು, ನೀರಿನ ಬಾಟಲ್ ಗಳನ್ನು ತೆರವುಗೊಳಿಸುವ ಕೆಲಸವನ್ನು ಮಾಡಿರುತ್ತಾರೆ. ಕಾಡಿನ ಮಧ್ಯೆ ಅಲ್ಲಲ್ಲಿ ಅಂಗಡಿಗಳನ್ನು ಇಟ್ಟಿರುವ ಸ್ಥಳದಲ್ಲಿ ವಿಪರೀತ ಪ್ಲಾಸ್ಟಿಕ್ ಬಾಟಲ್ ಗಳು, ತಟ್ಟೆಗಳು ಬಿದ್ದಿದ್ದು ಇವುಗಳನ್ನು ತೆರವುಗೊಳಿಸುವ ಕೆಲಸವನ್ನು ನಿತ್ಯವೂ ಮಾಡಿರುತ್ತಾರೆ. ಮುಂಡಾಜೆ ಪರಶುರಾಮ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಸ್ವಚ್ಚತಾ ಶ್ರಮದಾನವನ್ನು ನಡೆಸಿದ್ದು ಅಲ್ಲಿ ರಾತ್ರಿಯ ವೇಳೆ ವಿಶ್ರಾಂತಿ ಪಡೆಯುವ ಭಕ್ತರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.

ವಾಹನ ಸಂದಣಿ ನಿಯಂತ್ರಣೆ: ಸಾಮಾನ್ಯವಾಗಿ ಬೆಳಗ್ಗಿನ ಜಾವ ಹಾಗೂ ಸಾಯಂಕಾಲದ ವೇಳೆಗೆ ಭಕ್ತರು ಕಾಲ್ನಡಿಗೆಯಲ್ಲಿ ಬರುವುದು ಜಾಸ್ತಿ. ಬಿಸಿಲಿನ ಪ್ರಖರತೆ ಇಲ್ಲದೇ ಇರುವುದರಿಂದ ಈ ಸಂದರ್ಭದಲ್ಲಿ ಭಕ್ತರು ವೇಗವಾಗಿ ಹೆಜ್ಜೆಹಾಕುತ್ತಾರೆ. ಸಾಮಾನ್ಯವಾಗಿ ಸಂಜೆ ಮತ್ತು ಬೆಳಿಗ್ಗಿನ ವೇಳೆಗೆ ವಾಹನ ಸಂಚಾರವೂ ಅಧಿಕವಿರುತ್ತದೆ. ಇದನ್ನು ಅರಿತ ಸ್ವಯಂಸೇವಕರು ಚಾರ್ಮಾಡಿ ಘಟ್ಟದಿಂದ ಮುಂಡಾಜೆ ಪರಶುರಾಮ ದೇವಸ್ಥಾನದ ವರೆಗೆ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಪಾದಯಾತ್ರಿಕರಿಗೆ ಜಾಗೃತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿರುತ್ತಾರೆ. ಮುಂಡಾಜೆಯಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ವಾಹನ ವೇಗವಾಗಿ ಸಾಗದಂತೆ ನೋಡಿಕೊಂಡು ರಸ್ತೆ ದಾಟುವಾಗ ಭಕ್ತರಿಗೆ ಸಹಕಾರ ನೀಡಿರುತ್ತಾರೆ.
ಮಾಸ್ಕ್, ಔಷಧಿಗಳ ವಿತರಣೆ: ಯಾತ್ರಿಕರು ರಸ್ತೆಯಲ್ಲಿ ನಡೆಯುವಾಗ ಧೂಳಿನ ಸಮಸ್ಯೆ ಎದುರಿಸುತ್ತಿದ್ದುದನ್ನು ಗಮನಿಸಿದ ನೆರಿಯ ಘಟಕದ ಸ್ವಯಂಸೇವಕರು ಆರೋಗ್ಯ ಇಲಾಖೆಯಿಂದ ಮಾಸ್ಕ್ ಗಳನ್ನು ತಂದು ಪಾದಯಾತ್ರಿಕರಿಗೆ ಹಂಚುವ ಕೆಲಸ ಮಾಡಿರುತ್ತಾರೆ. ಪಾದದ ಉರಿ, ನೋವು ಎಂದು ಹೇಳುವ ಭಕ್ತರಿಗೆ ಅಗತ್ಯ ಔಷಧಿಗಳನ್ನು ಆರೋಗ್ಯ ಇಲಾಖೆಯಿಂದ ಕೊಡಿಸಿದ್ದಾರೆ. ಮುಂಡಾಜೆಯ ಪರಶುರಾಮ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳು ವಿಶ್ರಾಂತಿ ಪಡೆಯುತ್ತಿದ್ದು ಅಲ್ಲಿಗೆ ಧಾವಿಸಿ ಸ್ಥಳದಲ್ಲಿಯೇ ಭಕ್ತರಿಗೆ ಕುಡಿಯುವ ನೀರು, ಪಾನಕ ವಿತರಣೆಯ ಕೆಲಸ ಮಾಡಿದ್ದಾರೆ.
ಅನ್ನಸಂತರ್ಪಣೆಗೆ ಸಹಕಾರ: ಚಾರ್ಮಾಡಿಯ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವಾಲಯದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಇದ್ದು ಅಲ್ಲಿ ಅಡುಗೆ ತಯಾರಿಗೆ ಶೌರ್ಯ ಸ್ವಯಂಸೇವಕರು ಸಹಕಾರ ನೀಡಿರುತ್ತಾರೆ. ಅನ್ನಸಂತರ್ಪಣೆಗೆ ಸಹಕಾರ ನೀಡಿರುತ್ತಾರೆ. ಊಟ ಮಾಡಿದ ತಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಯದಂತೆ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಚತೆಯ ಕೆಲಸಗಳನ್ನು ಮಾಡಿರುತ್ತಾರೆ.

ಪಾದಯಾತ್ರಿಕರಿಗೆ ಯಾವುದೇ ತೊಂದರೆಗಳು ಉಂಟಾಗಬಾರದೆನ್ನುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಶ್ರಮವಹಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರ ಸೇವೆ ಭಕ್ತಾದಿಗಳ ಗಮನ ಸೆಳೆದಿದೆ. ಬೆಳ್ತಂಗಡಿ ವಿಪತ್ತು ನಿರ್ವಹಣಾ ಸಮಿತಿಯ ಘಟಕಗಳಾದ ಕುಕ್ಕಾವು ಘಟಕ, ನೆರಿಯ ಎ ಮತ್ತು ನೆರಿಯ ಬಿ. ಘಟಕ, ಧರ್ಮಸ್ಥಳ ಘಟಕ, ನಡ ಕನ್ಯಾಡಿ ಘಟಕ, ಉಜಿರೆ ಎ ಮತ್ತು ಉಜಿರೆ ಬಿ ಘಟಕ, ಇಂದಬೆಟ್ಟು ಘಟಕ, ಅರಿಶಿನಮಕ್ಕಿ ಘಟಕ, ನಿಡ್ಲೆ ಕಳೆಂಜ ಘಟಕ, ಪುದುವೆಟ್ಟು ಘಟಕ ಹೀಗೆ ಬೆಳ್ತಂಗಡಿ ತಾಲ್ಲೂಕಿನ 11 ಘಟಕಗಳ 130 ಸ್ವಯಂಸೇವಕರು ಮೂರು ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಪ್ರಕಾಶ್ ಶೆಟ್ಟಿ, ತುರ್ತು ಸ್ಪಂದನಾ ತಂಡದ ಸದಸ್ಯರಾದ ರವೀಂದ್ರ, ರಾಘವೇಂದ್ರ, ಅವಿನಾಶ್, ಅನಿಲ್, ನವೀನ್ ಮತ್ತಿತರರು ಸಹಕಾರ ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್, ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಶ್ರೀ ಸುರೇಂದ್ರ ಕುಮಾರ್, ಮುಂಡಾಜೆ ವಲಯದ ಮೇಲ್ವಿಚಾರಕರಾದ ಶ್ರೀ ಜನಾರ್ಧನ ಇವರು ಉಪಸ್ಥಿತರಿದ್ದು ಶೌರ್ಯ ಘಟಕಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ