
ಬೈಂದೂರು, ಫೆಬ್ರವರಿ 19, 2025: ನಿರ್ಗತಿಕ ಕುಟುಂಬವೊಂದಕ್ಕೆ ಶೌಚಾಲಯ ಕಟ್ಟಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಬೈಂದೂರು ತಾಲ್ಲೂಕಿನ ಮಿಕ್ಕೆ ದುಡ್ಡಿನಗುಳಿ ಗ್ರಾಮದ ರಾಧಾ ಎನ್ನುವ ಮಹಿಳೆ ತನ್ನ ಎರಡು ಮಕ್ಕಳೊಂದಿಗೆ ವಾಸವಾಗಿದ್ದು ಆರ್ಥಿಕವಾಗಿ ಕಷ್ಠದಲ್ಲಿದ್ದಾರೆ. ಹಳೆಯ ಗುಡಿಸಲು ಮನೆ. ಗೋಡೆಗಳಿಲ್ಲದ ಮನೆಗೆ ಶೇಡ್ ನೆಟ್ ನ್ನೇ ಸುತ್ತಿಕೊಂಡು ವಾಸವಿದ್ದಾರೆ. ಮೇಲು ಹೊದಿಕೆ ಗಟ್ಟಿಯಿಲ್ಲದೇ ಬೀಳುವ ಸ್ಥಿತಿಯಲ್ಲಿದೆ. ವಾಸವಿರುವ ಸ್ಥಳವು ಸ್ವಂತ ಹೆಸರಿಗೆ ಇಲ್ಲದೇ ಇರುವುದರಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.
ಕಳೆದ 6 ವರ್ಷದ ಹಿಂದೆ ಗ್ರಾಮ ಪಂಚಾಯತಿಯಿಂದ ಮನೆ ಮಂಜೂರಾತಿ ಆಗಿತ್ತು. ಕಟ್ಟಿಕೊಳ್ಳಲು ಆರ್ಥಿಕ ಸಂಕಷ್ಠದಿಂದ ಮನೆ ನೆನೆಗುದಿಗೆ ಬಿದ್ದಿತ್ತು. ಪಂಚಾಯತಿ ನೀಡಿದ ಸಮಯಾವಕಾಶದೊಳಗೆ ಮನೆ ನಿರ್ಮಾಣ ಮಾಡಿಕೊಳ್ಳದೇ ಇರುವುದರಿಂದ ಮನೆಗೆ ಮಂಜೂರಾಗಿದ್ದ ಹಣ ರದ್ದಾಗಿತ್ತು. ಮನೆಯ ಕನಸು ಕನಸಾಗಿಯೇ ಉಳಿದಿತ್ತು.

ಮಳೆ, ಗಾಳಿಗೆ ತಡೆದುಕೊಳ್ಳದ ಗುಡಿಸಲಿನೊಳಗೆ ಆತಂಕದಿಂದಲೇ ರಾಧಾ ಇವರು ಕಷ್ಠದ ಜೀವನ ನಡೆಸುತ್ತಿದ್ದಾರೆ. ಪತಿ ಅನಾರೋಗ್ಯದಿಂದ ಮರಣ ಹೊಂದಿದ್ದು ಎರಡು ಮಕ್ಕಳನ್ನು ಸಾಕುವ ಜವಾಬ್ದಾರಿ ಇವರಿಗಿದೆ. ಕೂಲಿ ಕೆಲಸ ಆಶ್ರಯಿಸಿದ್ದಾರೆ.
ಮಾನವೀಯ ಕಳಕಳಿ ಹೊಂದಿರುವ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ಈ ಕುಟುಂಬದ ಬಗ್ಗೆ ಸ್ಥಳೀಯರಿಂದ ತಿಳಿದು ಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರ ತಂಡ ಮನೆಯನ್ನು ವೀಕ್ಷಿಸಿ ಸಹಾಯ ಮಾಡಲು ಮುಂದಾಗಿದ್ದಾರೆ. ಎರಡು ಮಕ್ಕಳೊಂದಿಗೆ ವಾಸವಿರುವ ಇವರಿಗೆ ತುರ್ತು ಅಗತ್ಯವಿರುವುದು ಶೌಚಾಲಯ ಮತ್ತು ಸ್ನಾನಗ್ರಹ ಎನ್ನುವುದು ಸ್ವಯಂಸೇವಕರಿಗೆ ಅರಿವಾಗಿದೆ. ಈ ವಿಷಯವಾಗಿ ಸ್ವಯಂಸೇವಕರು ತಮ್ಮ ಘಟಕದ ಸಭೆಯಲ್ಲಿ ಚರ್ಚಿಸಿ ಶೌಚಾಲಯ ರಚನೆ ಮಾಡಿಕೊಡುವ ಬಗ್ಗೆ ತೀರ್ಮಾನಿಸಿ ವಿಷಯವನ್ನು ಬೈಂದೂರು ತಾಲ್ಲೂಕು ಯೋಜನಾಧಿಕಾರಿಯವರಾದ ವಿನಾಯಕ್ ಪೈ ಇವರ ಗಮನಕ್ಕೆ ತಂದು ಶ್ರಮದಾನವನ್ನು ಆರಂಭಿಸಿದ್ದಾರೆ.

ಘಟಕದ ಸ್ವಯಂಸೇವಕರಾದ ಚಂದ್ರ ಬೆಳಾರಿ ಇವರ ನೇತ್ರತ್ವದಲ್ಲಿ ಸ್ವಯಂಸೇವಕರ ತಂಡ 9 ದಿನಗಳ ಕಾಲ ಶ್ರಮದಾನವನ್ನು ನಡೆಸಿ ಸ್ನಾನಗ್ರಹ ಮತ್ತು ಶೌಚಾಲಯ ರಚನೆ ಮಾಡಿಕೊಟ್ಟಿದ್ದಾರೆ. ಶೌಚಾಲಯ ರಚನೆ ಮಾಡಿಕೊಟ್ಟಿರುವ ಸ್ವಯಂಸೇವಕರ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ. ಯಾವುದೇ ಸಹಕಾರ ಸಿಗದೇ ಕಷ್ಟವನ್ನೇ ನಿತ್ಯ ಅನುಭವಿಸುತ್ತಿದ್ದ ಕುಟುಂಬಕ್ಕೆ ಶೌರ್ಯ ಸ್ವಯಂಸೇವಕರು ಆಪತ್ ಬಾಂಧವರಾಗಿದ್ದಾರೆ. ವಲಯದ ಮೇಲ್ವಿಚಾರಕರಾದ ಭರತ್ ಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ, ಯೋಜನಾಧಿಕಾರಿ ವಿನಾಯಕ್ ಪೈ ಇವರು ಸ್ಥಳಕ್ಕೆ ಭೇಟಿ ನೀಡಿದ್ದು ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದ್ದಾರೆ.
ಘಟಕದ ಸಂಯೋಜಕರಾದ ರಾಮ ಶೆಟ್ಟಿ, ಘಟಕ ಪ್ರತಿನಿಧಿ ಮತ್ತು ಘಟಕದ ಎಲ್ಲಾ ಸ್ವಯಂಸೇವಕರು ಶೌಚಾಲಯ ರಚನೆ ಶ್ರಮದಾನದಲ್ಲಿ ತೊಡಗಿಕೊಂಡಿದ್ದು ತಮ್ಮ ಸಾಮಾಜಿಕ ಪ್ರಜ್ಞೆ ಮೆರೆದಿರುತ್ತಾರೆ.