
ಕುಮಟಾ ತಾಲ್ಲೂಕಿನ ಅಘನಾಶಿನಿ ಗ್ರಾಮದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುವ ಹಾಗೂ ರಸ್ತೆಯುದ್ದಕ್ಕೂ ಸ್ವಚ್ಚತೆ ಮಾಡುವ ಶ್ರಮದಾನ ನಡೆಸಿದರು.
ಅಘನಾಶಿನಿ ಆಂಜನೇಯ ದೇವಸ್ಥಾನದಿಂದ ನಾಮದಾರಿ ಸಭಾ ಭವನದ ವರೆಗೆ ಸುಮಾರು 1 ಕಿಲೋಮೀಟರ್ ವರೆಗೆ ಗುಂಡಿ ಬಿದ್ದಿದ್ದು ಅತಿಯಾದ ಮಳೆ ಯಾದಾಗ ಗುಂಡಿಯಲ್ಲಿ ನೀರು ತುಂಬಿ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನದೀ ತೀರದ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರತೀ ವರ್ಷ ಈ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದು ಪ್ರತೀ ವರ್ಷ ಶೌರ್ಯ ತಂಡದ ಸ್ವಯಂಸೇವಕರು ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಚತೆ ಮತ್ತು ಗುಂಡಿಗಳನ್ನು ಮುಚ್ಚುವ ಶ್ರಮದಾನ ಮಾಡಿಕೊಂಡು ಬಂದಿದ್ದಾರೆ.

ಈ ಬಾರಿ ಸುರಿದ ಅತಿಯಾದ ಮಳೆಯಿಂದಾಗಿ ರಸ್ತೆಯ ಗುಂಡಿಗಳು, ರಸ್ತೆಯ ಇಕ್ಕೆಲಗಳಲ್ಲಿ ಕುಸಿದ ಕಡೆಗಳಲ್ಲಿ ಕಲ್ಲು, ಮಣ್ಣು ತುಂಬಿ ಸರಿಪಡಿಸುವ ಕೆಲಸವನ್ನು ಸ್ವಯಂಸೇವಕರು ಮಾಡಿದರು. ರಸ್ತೆಯ ಬದಿಯಲ್ಲಿ ಕುಸಿತವಾಗಿರುವುದರಿಂದ ಎದುರು ಬದುರಾಗಿ ವಾಹನಗಳು ಬಂದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಇದನ್ನು ಗಮನಿಸಿದ ತಂಡದ ಸದಸ್ಯರು ಸರಿಪಡಿಸುವ ಕೆಲಸ ಮಾಡಿದರು.

ಗುಂಡಿಯನ್ನು ಮುಚ್ಚಲು ಕಲ್ಲು ಮಣ್ಣುಗಳು ಅಗತ್ಯವಿದ್ದು ಸಮೀಪದ ಗುಡ್ಡದಿಂದ ಸಾಗಿಸಲು ಘಟಕದ ಸ್ವಯಂಸೇವಕರಾದ ವಿಷ್ಣು ರವರು ತಮ್ಮ ಪಿಕಪ್ ವಾಹನವನ್ನು ಉಚಿತವಾಗಿ ನೀಡಿ ಸಹಕಾರ ನೀಡಿದರು.

ಅಘನಾಶಿನಿ ವಲಯದ ಮೇಲ್ವಿಚಾರಕರಾದ ಕೇಶವ್ ಇವರ ಉಪಸ್ಥಿತಿಯಲ್ಲಿ ಶ್ರಮದಾನ ನಡೆಯಿತು. ಘಟಕದ ಸ್ವಯಂಸೇವಕರಾದ ವಿಷ್ಣು, ಮೂರ್ತಿ, ಸಂದೀಪ, ಸುದೀಪ, ದೇವೇಂದ್ರ, ನಾಗೇಂದ್ರ, ಹರೀಶ್, ಪ್ರಮೋದ್, ನಾಗವೇಣಿ, ರಮಣಿ, ಪ್ರದೀಪ್, ಶ್ರವಣ ಕುಮಾರ್ ಇವರು ಶ್ರಮದಾನದಲ್ಲಿ ಉಪಸ್ಥಿತರಿದ್ದರು.