
ಮೂಡಿಗೆರೆ, ಮೇ ೦೬: ಕುಸಿದು ಬೀಳುವ ಹಂತದಲ್ಲಿ ಇರುವ ಮನೆಯೊಂದನ್ನು ಗುರುತಿಸಿ ಶ್ರಮದಾನದ ಮೂಲಕ ರಿಪೇರಿ ಮಾಡಿಕೊಟ್ಟು ಆ ಕುಟುಂಬಕ್ಕೆ ಎದುರಾಗಲಿರುವ ಸಂಭವನೀಯ ಅಪಾಯವನ್ನು ತಪ್ಪಿಸಿ ಮಾನವೀಯತೆ ಮೆರೆದಿದ್ದಾರೆ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕ ಜಾವಳಿ ವಲಯದ ಸ್ವಯಂಸೇವಕರು.ಮೂಡಿಗೆರೆ ತಾಲೂಕಿನ ಕಲ್ಮನೆ ಎಂಬ ಗ್ರಾಮದಲ್ಲಿ ಶ್ರೀಮತಿ ರತ್ನ ಎಂಬವರ ಮನೆ ಕುಸಿದು ಬೀಳುವ ಹಂತದಲ್ಲಿ ಇತ್ತು. ಮನೆಯ ಮೇಲ್ಚಾವಣಿಗೆ ಹೊದಿಸಿದ್ದ ಕಟ್ಟಿಗೆಗಳು ಒರಲೆ ಹಿಡಿದು ಮುರಿದು ಬೀಳುವ ಹಂತದಲ್ಲಿತ್ತು. ಈ ಬಾರಿ ಬೀಸಿದ ಸಣ್ಣ ಗಾಳಿಗೆ ಹಂಚು ಅಲ್ಲಲ್ಲಿ ಹಾರಿ ಹೋಗಿತ್ತು. ಮಾಡು ಸೋರುತ್ತಿದ್ದುದರಿಂದ ಮನೆಯೊಳಗೆ ನೀರೇ ನೀರು. ಮಣ್ಣಿನ ಗೋಡೆಯಾಗಿದ್ದರಿಂದ ಎಷ್ಟು ಹೊತ್ತಿಗೆ ಕುಸಿಯುತ್ತದೆ ಎನ್ನುವ ಅಂದಾಜು ಇರಲಿಲ್ಲ.ಇಷ್ಟೆಲ್ಲಾ ತೊಂದರೆ ಇದ್ದರೂ ಮನೆಯ ಯಜಮಾನ್ತಿ ಮಾತ್ರ ಆ ಮನೆಯೊಳಗೆ ವಾಸವಿದ್ದರು. ಮಳೆ ಬಂದರೂ, ಗಾಳಿ ಬೀಸಿದರೂ ಕದಲುತ್ತಿರಲಿಲ್ಲ.ರತ್ನ (೬೮) ಇರುವುದು ಒಬ್ಬರೇ. ಮಕ್ಕಳಿಬ್ಬರು ತೀರಿ ಹೋಗಿದ್ದಾರೆ. ಗಂಡ ಮರಣ ಹೊಂದಿದ್ದಾರೆ. ಇರುವುದು ಇವರೊಬ್ಬರೇ. ಮನೆ ಮದುವೆಗೂ ಮೊದಲು ಕಟ್ಟಿದ ಮನೆ. ಹೆಚ್ಚು ಕಡಿಮೆ ತೊಂಬತ್ತು ವರ್ಷಗಳಾಗಿವೆ.ವಯಸ್ಸಾಗಿದ್ದರಿಂದ ಅಜ್ಜಿ ರತ್ನಮ್ಮ ಅವರಿಗೆ ದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮನೆ ರಿಪೇರಿ ಮಾಡಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಮನೆ ಸರಿಪಡಿಸಿ ಕೊಳ್ಳಲು ಆರ್ಥಿಕ ಶಕ್ತಿ ಇಲ್ಲದ ಕಾರಣದಿಂದ ಭಯದ ನಡುವೆಯೂ ಅದೇ ಮನೆಯೊಳಗೆ ವಾಸವಾಗಿದ್ದರು.ಮನೆಯ ದುಸ್ಥಿತಿಯನ್ನು ಕಂಡು ಶೌರ್ಯ ವಿಪತ್ತು ನಿರ್ವಹಣೆ ತಂಡ ಆ ಮನೆಯ ದುರಸ್ತಿ ಕೆಲಸವನ್ನು ಮಾಡಲು ನಿರ್ಧರಿಸಿ ಶ್ರಮದಾನ ನಡೆಸಿದರು.

ತಾಲೂಕು ಯೋಜನಾಧಿಕಾರಿ ವಿಠ್ಠಲ್ ಪೂಜಾರಿ ಅವರು ಮಾನವೀಯ ಸೇವೆಯಲ್ಲಿ ತೊಡಗಿಕೊಂಡ ಸ್ವಯಂಸೇವಕರಿಗೆ ಸ್ಥಳದಲ್ಲಿ ಇದ್ದು ಪ್ರೇರಣೆ ನೀಡಿದರು.ಹಳೆಯ ಮೇಲ್ಛಾವಣಿಯನ್ನು ಬಿಡಿಸಿ, ರೀಪು, ಪಕಾಸುಗಳನ್ನು ಹೊಸದಾಗಿ ತಂದು ಅಳವಡಿಸಿ ಹೆಂಚಿನ ಹೊದಿಕೆ ಮಾಡಿರುತ್ತಾರೆ. ಶ್ರಮದಾನ ಮೂರು ದಿನಗಳ ಕಾಲ ನಡೆಯಿತು.ವಿಪತ್ತು ನಿರ್ವಹಣಾ ಘಟಕದ ಸಂಯೋಜಕರದ ಸಾಗರ್ ಜಾವಳಿ, ವಲಯದ ಮೇಲ್ವಿಚಾರಕರದ ಚಿತ್ತರಂಜನ್ ಹಾಗೂ ಸ್ವಯಂಸೇವಕರಾದ ದಿನಕರ್ ಪೂಜಾರಿ, ಚಂದ್ರುಶೇಖರ್, ಫೋಟೋಗ್ರಾಫರ್ ಕೂವೆ, ರಂಜಿತ್, ಅಜಿತ್, ಅಭಿಷೇಕ್, ರಮಿತ್, ಏ ಖ ಚಂದ್ರಶೇಖರ್ ಕಲ್ಮನೆ ಶ್ರಮದಾನದ ಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು.ಮೂಡಿಗೆರೆ ಕಸಬ ಘಟಕದ ಸಂಯೋಜಕರಾದ ಪ್ರವೀಣ್ ಪೂಜಾರಿ, ಸ್ವಯಂಸೇವಕರಾದ ಅರುಣ್ ಪಿಂಟೊ, ಹಾಗೂ ಸುರೇಶ್ ಸೇವಾಕಾರ್ಯದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು.ಸೇವಾಪ್ರತಿನಿಧಿ ಜ್ಯೋತಿ, ಪ್ರೇಮ, ಸುಮತಿ, ವೀರೇಂದ್ರ, ಹಾಜರಿದ್ದು ಕೈಜೋಡಿಸಿದರು.ಎಲ್ಲಾ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಭಾಗವಹಿಸಿ ದಿನವಿಡೀ ದುಡಿದರು.ಕರೆಯದೇ ಮನೆಗೆ ಬಂದು ಕುಶಲೋಪಚರಿ ವಿಚಾರಿಸಿ, ಮನೆಯನ್ನೆಲ್ಲ ಸುತ್ತು ಹಾಕಿ, ಗಮನಿಸಿ ಮನೆ ರಿಪೇರಿ ಮಾಡಿಕೊಟ್ಟ ಸ್ವಯಂಸೇವಕರ ಸೇವಾಕಾರ್ಯ ಮನೆಯೊಡತಿಗೆ ಭಾವುಕರಾಗುವಂತೆ ಮಾಡಿದೆ. ಇಳಿ ವಯಸ್ಸಿನಲ್ಲಿ ಮನೆ ರಿಪೇರಿ ಸಾಧ್ಯವಿರಲಿಲ್ಲ. ಗುಡುಗು, ಸಿಡಿಲಿನ ನಡುವೆ ಇರುವಷ್ಟು ದಿನ ಒಳ್ಳೆಯ ಮನೆಯಲ್ಲಿ ವಾಸವಾಗುವ ಭಾಗ್ಯ ನನ್ನ ಪಾಲಿಗೆ ಸ್ವಯಂಸೇವಕ ರಿಂದ ದೊರಕಿತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅಜ್ಜಿ ಎಲ್ಲಾ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಸ್ವಯಂಸೇವಕರ ಈ ಸೇವಾಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳೀಯ ರು ಸ್ವಯಂಸೇವಕರನ್ನು ಮೆಚ್ಚಿ ಅಭಿನಂದಿಸಿದ್ದಾರೆ.