ಉತ್ತರ ಪ್ರದೇಶ ಮೂಲದ ಅನಾಥ ವ್ಯಕ್ತಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಸ್ವಯಂಸೇವಕರು

ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಗ್ರಾಮಕ್ಕೆ ಪ್ರವೇಶಿಸಿ ಅಲ್ಲಲ್ಲಿ ಏಕಾಂಗಿಯಾಗಿ ಅಲೆಯುತ್ತಿರುವುದನ್ನು ಕಂಡ ಖಾಂಡ್ಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಆತನನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ದಿನಾಂಕ ೧೨.೦೨.೨೦೨೦ ರಂದು ಅಪರಿಚಿತ ವ್ಯಕ್ತಿ ಖಾಂಡ್ಯ ವ್ಯಾಪ್ತಿಯ ಬಿದರೆಗೆ ಸಂಜೆಯ ವೇಳೆಯಲ್ಲಿ ಪ್ರವೇಶಿಸಿದ್ದ. ಗಡ್ಡ ಬಿಟ್ಟುಕೊಂಡು ತಲೆ ಬಾಚದೇ ಕುರೂಪಿಯಾಗಿರುವ ಆ ವ್ಯಕ್ತಿ ಬಹಳ ದಿನಗಳಿಂದ ಸ್ನಾನ ಮಾಡದೇ ಮೇಲ್ನೋಟಕ್ಕೆ ಭಯ ಹುಟ್ಟಿಸುವ ರೀತಿಯಲ್ಲಿದ್ದ. ಅವನನ್ನು ನೋಡಿದ ಜನ ಕಳ್ಳನಿರಬಹುದೆಂದು ಊಹಿಸಿ ಹೋದೆಡೆಯಿಂದೆಲ್ಲ ಓಡಿಸುತ್ತಿದ್ದರು. ಹಸಿವಿನಿಂದ ಬಳಲುತ್ತಿದ್ದ ಆತನ ಸಹಾಯಕ್ಕೆ ನಿಲ್ಲಲು ಅಂಜುತ್ತಿದ್ದರು. ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿದ್ದ ಆತನನ್ನು ಆ ದಾರಿಯಲ್ಲಿ ತೆರಳುತ್ತಿದ್ದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ರಘುಪತಿ ಗಮನಿಸಿದ್ದರು. ಅಂಜದೇ ಆತನನ್ನು ಸಮೀಪಿಸಿ ಮಾತನಾಡಿಸಿದ್ದರು. ಇದೇ ವ್ಯಕ್ತಿ ಮೂರು ದಿನಗಳ ಹಿಂದೆ ಖಾಂಡ್ಯದ ಹತ್ತಿರ ರಸ್ತೆಯ ಬದಿಯಲ್ಲಿ ಮಲಗಿದ್ದುದನ್ನು ರಘುಪತಿ ಕಂಡಿದ್ದರು. ಅದಾಗಿ ಮೂರು ದಿನಗಳ ನಂತರ ಆತ ಬಿದಿರೆ ಊರಿಗೆ ಪ್ರವೇಶಿಸಿದ್ದ.


ಅವನಿಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ಹಿಂದಿಯಲ್ಲಿ ಮಾತನಾಡುತ್ತಿದ್ದ. ಉತ್ತರ ಪ್ರದೇಶ ಮೂಲದ ವ್ಯಕ್ತಿ ಎನ್ನುವುದು ಸಂವಹನದ ನಂತರ ತಿಳಿದು ಬಂತು. ಅಲ್ಲಿನ ಯಾರು ಮಾತನಾಡಿಸಿದರೂ ಆತನಿಗೆ ಅರ್ಥವಾಗುತ್ತಿರಲಿಲ್ಲ. ಹಸಿದು ಬಳಲುತ್ತಿದ್ದ ಆತನಿಗೆ ಊಟ ನೀಡಿ ಬಂದಿದ್ದರು ರಘುಪತಿ. ಅಪರಿಚಿತ ಆ ವ್ಯಕ್ತಿ ಬಸ್ ನಿಲ್ದಾಣದಲ್ಲಿ, ರಸ್ತೆಯ ಬದಿಯಲ್ಲಿ ದಿನ ಕಳೆಯುತ್ತಿದ್ದ. ಕೆಲವು ದಿನಗಳಿಂದ ಆತ ಊರಿನಲ್ಲಿ ಅಲ್ಲಲ್ಲಿ ಅಲೆಯುತ್ತಿರುವುದು ಕಂಡುಬAದ ಹಿನ್ನೆಲೆಯಲ್ಲಿ ರಘುಪತಿ ಅವರು ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಚಂದ್ರಶೇಖರಯ್ಯ ಅವರ ಗಮನಕ್ಕೆ ತಂದರು. ಅವರಿಂದಲೂ ಸಹಕಾರ ದೊರಕಿತು. ಖಾಂಡ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಒಂದೆಡೆ ಸೇರಿ ಚರ್ಚಿಸಿ ಆ ವ್ಯಕ್ತಿಯನ್ನು ಯಾವುದಾದರೂ ಆಶ್ರಮಕ್ಕೆ ಸೇರಿಸಬೇಕು ಎಂದು ನಿರ್ಧರಿಸಿದರು. ರಘುಪತಿ ಅವರು ತಮಗೆ ಪರಿಚಯ ಇರುವ ಹಲವಾರು ವ್ಯಕ್ತಿಗಳನ್ನು, ಗಣ್ಯರನ್ನು, ಸಂಘಟನೆಗಳನ್ನು ಸಂಪರ್ಕಿಸಿದರು. ನಿರ್ಗತಿಕರ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಠಾಣೆ, ಕೆಲವು ಸಮಾಜ ಸೇವಕರು, ಪತ್ರಕರ್ತರು ಹೀಗೆ ಎಷ್ಟು ಸಾಧ್ಯವೋ ಅಷ್ಟು ಪರಿಚಿತರನ್ನು ಸಂಪರ್ಕಿಸಿ ವಿಚಾರಿಸಿದರು.ಮಂಗಳೂರಿನಲ್ಲಿ ಇರುವ ಆಶ್ರಮಕ್ಕೆ ಬಿಟ್ಟು ಬರುವಂತೆ ಸಲಹೆಯೂ ಬಂತು. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಸ್ವಯಂಸೇವಕ ರಘುಪತಿ ಈ ಕುರಿತಂತೆ ವಿಪತ್ತು ನಿರ್ವಹಣಾ ತಾಲ್ಲೂಕು ಘಟಕದ ಸ್ವಯಂಸೇವಕರಲ್ಲಿ ಅಭಿಪ್ರಾಯ ಕೇಳಿದ್ದರು.
ಸ್ವಯಂಸೇವಕರು ನಿರ್ವಹಿಸುತ್ತಿರುವ ಸಾಮಾಜಿಕ ಸೇವಾಕಾರ್ಯಕ್ಕೆ ಹಲವರಿಂದ ಬೆಂಬಲ ವ್ಯಕ್ತವಾಯಿತು. ಕಳಸ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಅಶೋಕ್ ಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ರಘುಪತಿ ಅವರ ಬೆಂಬಲಕ್ಕೆ ನಿಂತರು. ಪೋಲಿಸ್ ಠಾಣೆಯನ್ನು ಭೇಟಿ ಮಾಡಿದರು. ಸಮೀಪದ ಅನಾಥಾಶ್ರಮಕ್ಕೆ ತೆರಳಿ ಅಲ್ಲಿನ ಮುಖ್ಯಸ್ಥರಾದ ಬಿಬಿನ್ ಜೋಸ್ ಅವರಲ್ಲಿ ಚರ್ಚಿಸಿ ಪತ್ರವನ್ನು ನೀಡಿದರು.P Àಳಸ ಸಮೀಪದ ದೇವರಗುಡ್ಡ ಎಂಬಲ್ಲಿನ “ದಿವ್ಯ ಕಾರುಣ್ಯಾಲಯ” ಅನಾಥಾಶ್ರಮದಲ್ಲಿ ಉತ್ತರ ಪ್ರದೇಶ ಮೂಲದ ಅನಾಥ ವ್ಯಕ್ತಿಗೆ ಆಶ್ರಯಕ್ಕೆ ನೆಲೆ ದೊರೆತಂತಾಯಿತು. ಆರೋಗ್ಯದ ವಿಷಯದಲ್ಲಿ ವಿಚಲಿತನಾಗಿರುವಂತೆ ಕಂಡುಬAದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಕೋವಿಡ್ ಪರಿಶೀಲನೆ ಮಾಡಿಸಿದ್ದಾರೆ. ಕುರೂಪಿಯಾಗಿದ್ದ ಆತನನ್ನು ಒಂದೆಡೆ ಕುಳ್ಳರಿಸಿ ಸ್ನಾನ ಮಾಡಿಸಿ, ತಲೆ ಕೂದಲು ಕತ್ತರಿಸಿ, ಶೇವ್ ಮಾಡಿಸಿ ಬಟ್ಟೆಗಳನ್ನು ತೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಾಂಡ್ಯ ಹಾಗೂ ಕಳಸ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಜಂಟಿಯಾಗಿ ಅಪರಿಚಿತ ಆ ವ್ಯಕ್ತಿಯನ್ನು ಆಶ್ರಮಕ್ಕೆ ದಾಖಲಿಸಿದ್ದಾರೆ.
ಅನಾಥನ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿದೆ. ಆತನ ಮುಖದಲ್ಲಿ ಮಂದಹಾಸ ಮೂಡಿದೆ. ರೈಲು ಹತ್ತಿ ಎಲ್ಲಿ ತೋಚುತ್ತೋ ಅಲ್ಲೆಲ್ಲಾ ಸುತ್ತಾಡಿ ಖಾಂಡ್ಯ ಗ್ರಾಮಕ್ಕೆ ಬಂದ ಈತನ ಸುಳಿವು ಶೌರ್ಯ ಸ್ವಯಂಸೇವಕರ ಗಮನಕ್ಕೆ ಬಂದಿದ್ದೇ ಆತನಿಗೆ ವರವಾಗಿ ಪರಿಣಮಿಸಿದೆ. ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಸೇವಾಕಾರ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ. ಕಳಸ ಘಟಕದ ಸ್ವಯಂಸೇವಕರಾದ ಅಶೋಕ್ ಕುಮಾರ್ ಸಿ, ಮೃತ್ಯುಂಜಯ ಆಚಾರ್, ಮಂಜುನಾಥ್, ಸೇವಾಪ್ರತಿನಿಧಿ ಸುಧಾಕರ್ ಹಾಗೂ ಖಾಂಡ್ಯ ಘಟಕದ ರಘುಪತಿ ಹಾಗೂ ಚಂದ್ರಶೇಖರಯ್ಯ ವಿಶೇಷವಾದ ಕಾಳಜಿ ವಹಿಸಿ ನಿರ್ಗತಿಕನ ಪಾಲಿಗೆ ಕರುಣಾಮಯಿಗಳಾಗಿದ್ದಾರೆ.

Share Article
Previous ಮೂಡಿಗೆರೆ: ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved