
ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಲ್ಲಿ ಸ್ವಲ್ಪ ಓಡಾಡಿದರೂ ದಾಹವಾಗಿ ನೀರು ಕುಡಿಯೋಣ ಎನಿಸುತ್ತದೆ. ಮನುಷ್ಯರಾದ ನಮಗೆ ಈ ರೀತಿಯಾದರೆ ಮೂಕ ಪ್ರಾಣಿಗಳ ಕಥೆಯೇನು? ಪಕ್ಷಿಗಳ ವ್ಯಥೆಯೇನು? ಇಂತಹದೊಂದು ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಕಾಡದೇ ಇರದು.
ಬತ್ತಿದ ಕೆರೆಯಲ್ಲಿ ಇರುವ ಅಲ್ಪಸ್ವಲ್ಪ ಗಲೀಜು ನೀರನ್ನೇ ಬಾಯಾರಿಕೆಗೆ ಕುಡಿಯುತ್ತಿರುವ ಹಸುಗಳು, ನಲ್ಲಿಗೆ ಜೋತುಬಿದ್ದು ನೀರು ಹನಿಸಬಹುದೆಂದು ಕಾಯುವ ಪಕ್ಷಿಗಳು, ಮನೆಯ ತಾರಸಿಯ ಮೇಲಿನ ನೀರಿನ ಟ್ಯಾಂಕ್ ಮುಚ್ಚಳ ತೆಗೆದು ನೀರು ಕುಡಿಯಲು ಸಾಹಸ ಮಾಡುವ ಮಂಗಗಳು ಹೀಗೆ ಸಾಮಾನ್ಯವೆಂಬತೇ ಹನಿ ಗುಟುಕಿಗಾಗಿ ಪರಿತಪಿಸುವ ಪಕ್ಷಿ, ಪ್ರಾಣಿಗಳು ನಮ್ಮ ಪರಿಸರದಲ್ಲಿ ಕಂಡುಬರತೊಡಗಿವೆ.

ಮಾತೃಶ್ರೀ ಅಮ್ಮನವರ ಪರಿಕಲ್ಪನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಯವರ ಆಶಯದಂತೆ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರು ಪ್ರಾಣಿ ಪಕ್ಷಿಗಳಿಗೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈ ವರ್ಷವೂ ಬಿಸಿಲ ಝಳ ಅತಿಯಾದ ಹಿನ್ನಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡತೊಡಗಿದ್ದು ಮಾನವೀಯತೆ ಮೆರೆಯುತ್ತಿದ್ದಾರೆ.

ಎಲ್ಲೆಲ್ಲಿ ನೀರು? ತಮ್ಮ ಮನೆಯ ಚಾವಣಿಯ ಮೇಲೆ, ತಾರಸಿಯ ಮೇಲ್ಗಡೆ, ಅಂಗಡಿಗಳ ಮುಂದೆ ನೀರಿನ ಚಿಕ್ಕ ಚಿಕ್ಕ ನೀರಿನ ತೊಟ್ಟಿಗಳುನ್ನು ಅಥವಾ ತಟ್ಟೆಗಳನ್ನು ಇಟ್ಟು ದಿನನಿತ್ಯ ನೀರು ತುಂಬಿಸುತ್ತಿದ್ದಾರೆ. ಮರದಲ್ಲಿ ನೀರಿನ ಬಾಟಲಿಗಳನ್ನು ಕಟ್ಟಿ ಮೂಕಪ್ರಾಣಿ ಮತ್ತು ಪಕ್ಷಿಗಳ ದಾಹ ತೀರಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ತಮ್ಮ ಮನೆಯ ಮುಂದೆ ನೀರಿನ ತೊಟ್ಟಿಯಿಟ್ಟು ಅದಕ್ಕೆ ನೀರು ಹಾಕುವುದರ ಮೂಲಕ ಬೀದಿ ನಾಯಿ ಮತ್ತು ಬಿಡಾಡಿ ದನಗಳ ದಾಹತಣಿಸುವ ಕಾರ್ಯದಲ್ಲಿ ಸ್ವಯಂಸೇವಕರು ನಿರತರಾಗಿದ್ದಾರೆ.

ಪ್ರಾಣಿಗಳಿಗಾಗಿಯೇ ಪ್ರತ್ಯೇಕ ನೀರಿನ ತೊಟ್ಟಿ ತಂದಿರಿಸಿ ಅದರಲ್ಲಿ ಸದಾ ನೀರು ಸಂಗ್ರಹವಾಗಿರುವಂತೆ ನೋಡಿಕೊಂಡು ಮೂಕ ಪ್ರಾಣಿಗಳ ದಾಹ ತಣಿಸುವುದು ಸುಲಭದ ಕೆಲಸವಲ್ಲ. ಇಂತಹ ಕಾರ್ಯವನ್ನು ಶೌರ್ಯ ಸ್ವಯಂಸೇವಕರು ಮಾಡುತ್ತಿದ್ದಾರೆ.

3 ವರ್ಷಗಳಿಂದ ನಡೆಯುತ್ತಿದೆ: ಚಿಕ್ಕೋಡಿ, ನಿಪ್ಪಾಣಿ, ರಾಮದುರ್ಗ, ಗೋಕಾಕ್, ಹುಕ್ಕೇರಿ ತಾಲ್ಲೂಕುಗಳ ಶೌರ್ಯ ಘಟಕಗಳ ಸ್ವಯಂಸೇವಕರು ಕುಡಿಯುವ ನೀರು ಇಡುವ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈ ವರ್ಷವೂ ಮಾರ್ಚ್ ಮೊದಲ ವಾರದಿಂದಲೇ ತಯಾರಿ ಆರಂಭಿಸಿ, ಸ್ಥಳ ಗುರುತಿಸಿ ನೀರು ಇಡುವ ಕೆಲಸ ಆರಂಭಿಸಿದ್ದಾರೆ. ಮಳೆ ಹನಿಸುವ ವರೆಗೆ ಈ ಕಾರ್ಯ ಮುಂದುವರೆಸುವುದಾಗಿ ಸ್ವಯಂಸೇವಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಲ್ಲಿ ಸೋರದಂತೆ ಜಾಗೃತೆ: ಹಳ್ಳಿಗಳಲ್ಲಿ ರಸ್ತೆ ಬದಿಯಲ್ಲಿ, ಮನೆಯಲ್ಲಿ ನಲ್ಲಿಗಳು ಸೋರುವುದು ಸಾಮಾನ್ಯ. ಇದರಿಂದ ಸಾಕಷ್ಠು ನೀರು ಪೋಲಾಗುತ್ತದೆ. ಇವುಗಳ ಕಡೆಗೆ ಗಮನ ವಹಿಸಿದ ಸ್ವಯಂಸೇವಕರು ಸೋರುವ ನಲ್ಲಿಗಳನ್ನು ಗುರುತಿಸಿ ಸರಿಪಡಿಸುವ ಕೆಲಸಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ನಲ್ಲಿಗಳಲ್ಲಿ ನೀರು ಸೋರದಂತೆ ಕ್ರಮ ತೆಗೆದುಕೊಳ್ಳಲು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

ರಣಬಿಸಿಲಿನ ಕಾಲವಾಗಿರುವುದರಿಂದ ಪ್ರಾಣಿ, ಪಕ್ಷಿಗಳು ನೀರಿಗಾಗಿ ಹಾತೊರೆಯುತ್ತವೆ. ಒಂದು ಪುಟ್ಟ ಬಟ್ಟಲಲ್ಲಿ ನೀರಿಟ್ಟರೂ ಸಾಕು ಅವುಗಳು ನೀರು ಕುಡಿಯಲು ದುಂಬಾಲು ಬೀಳುತ್ತವೆ. ಪ್ರಾಣಿ ಪಕ್ಷಿಗಳ ದಾಹತಣಿಸಲು ಶೌರ್ಯ ಸ್ವಯಂಸೇವಕರು ನೀಡುತ್ತಿರುವ ಸೇವೆ ಮಾದರಿಯೇ ಸರಿ.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ