ಧರ್ಮಸ್ಥಳದಿಂದ ರಚಿಸಲಾದ ಶೌರ್ಯ ತಂಡಗಳಲ್ಲಿ ಎಲ್ಲಾ ರೀತಿಯ ಕೌಶಲ್ಯ ಹೊಂದಿರುವ ಸ್ವಯಂಸೇವಕರು ಹೊಂದಿರುವುದು ವಿಶೇಷವಾಗಿದೆ ಎಂದು ಹೆಬ್ರಿ ಆರಕ್ಷಕ ಠಾಣಾ ಉಪ ನಿರೀಕ್ಷಕರಾದ ಶ್ರೀ ಚಂದ್ರ ಎ.ಕೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜುಲೈ 21 ರಂದು ಹೆಬ್ರಿಯ ಚೈತನ್ಯ ಸಮುದಾಯ ಭವನದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಪತ್ತು ನಿರ್ವಹಣೆಗೆಂದು ರಚಿಸಿಕೊಂಡ ಕೆಲವು ತಂಡಗಳಿವೆ. ಅವುಗಳಲ್ಲಿ ಕೇವಲ ಈಜು ಪರಿಣಿತರು ಮಾತ್ರ ಇರುತ್ತಾರೆ. ಭೂಕುಸಿತವಾದರೆ, ರಸ್ತೆ ಅಪಘಾತವಾದರೆ, ಮನೆಯಲ್ಲಿ ಉರಗ ಸೇರಿಕೊಂಡರೆ, ವಾಸದ ಮನೆ ಮಳೆಯಲ್ಲಿ ಹಾನಿಯಾದರೆ ರಿಪೇರಿ ಮಾಡಲು ಈ ತಂಡಗಳು ಬರುವುದಿಲ್ಲ. ಆದರೆ ಶೌರ್ಯ ತಂಡದಲ್ಲಿ ಎಲ್ಲಾ ಕೌಶಲ್ಯ ಹೊಂದಿರುವವರು ಇರುವುದರಿಂದ ಎಲ್ಲಾ ರೀತಿಯ ವಿಪತ್ತುಗಳಿಗೆ ನೆರವಾಗುತ್ತಾರೆ. ಸ್ವಯಂಸೇವಕರ ತಂಡದಿಂದ ಯಾವುದೇ ಸಂದರ್ಭದಲ್ಲಿ ಸಹಕಾರ ಕೇಳಬಹುದು ಎಂದರು.

ಎನ್.ಡಿ.ಆರ್.ಎಫ್ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯ ಇವರು ಮಾತನಾಡಿ ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ತಂಡದ ಕೆಲಸವು ಸೇವಾ ಮನೋಭಾವದಿಂದ ಕೂಡಿದ್ದು, ಯಾವುದೇ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ದ ಎನ್ನುವ ಭಾವನೆಯಿಂದ ದುಡಿಯುತ್ತಿದ್ದಾರೆ. ನೀವು ಮಾಡುವ ಸೇವೆಯು ದೇಶಸೇವೆಗೆ ಸಮಾನವಾದದು, ಸೈನಿಕನು ಗಡಿಯನ್ನು ರಕ್ಷಿಸಿದರೆ ಸೇವಾ ಮನೋಭಾವವನ್ನು ಹೊಂದಿರುವ ಶೌರ್ಯ ತಂಡದ ಸದಸ್ಯರು ತಮ್ಮ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ತಮ್ಮ ಸೇವೆಯ ಮೂಲಕ ಸಮಾಜವನ್ನು ಸರಿಪಡಿಸುತ್ತಿದ್ದೀರಿ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿ ರವರು ಮಾತನಾಡಿ ಧರ್ಮಸ್ಥಳ ಯೋಜನೆಯಿಂದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ರಚನೆಯ ಉದ್ದೇಶಗಳ ಬಗ್ಗೆ ತಿಳಿಸಿ ಹೆಬ್ರಿ ತಾಲ್ಲೂಕಿನ ಘಟಕಗಳ ಸಾಧನೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನೀರೆ ಕೃಷ್ಣ ಶೆಟ್ಟಿ ಸಂಘಟನಾ ಅಧ್ಯಕ್ಷರು ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಇವರು ವಹಿಸಿದ್ದರು.
ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ ಪ್ರಾಸ್ತಾವಿಕ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ ರಶ್ಮಿ ರವರು ಸ್ವಾಗತಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಂದಿಸಿದರು.

ಹೆಬ್ರಿ ಶೌರ್ಯ ಸಮಿತಿಯ ಮಾಸ್ಟರ್ ಸುರೇಶ್ ಭಂಡಾರಿ, ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ನಿತೇಶ್ ಕೆ, ಶ್ರೀ ಉದಯ್, ಹಣಕಾಸು ಪ್ರಬಂಧಕರಾದ ಶ್ರೀ ಗುರುಪ್ರಸಾದ್ ಉಪಸ್ಥಿತರಿದ್ದರು.

ಉದ್ಘಾಟನಾ ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ASI ಸುಭಾಷ್ ಶಿಂಧೆ ನೇತೃತ್ವದ ತಂಡದಿಂದ ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷತೆಗಳ ಮೂಲಕ ತರಬೇತಿ ನಡೆಯಿತು.
