
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಮ ಪೂಜ್ಯನೀಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ವಿಪತ್ತುಗಳ ನಿರ್ವಹಣೆಗೆಂದು ರಚಿಸಲಾದ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಆಯ್ದ ಸ್ವಯಂಸೇವಕರಿಗೆ ಈಜುವಿಕೆ ಹಾಗೂ ಮುಳುಗುವಿಕೆಯ ಮೂಲಕ ಆಪತ್ತಿನಲ್ಲಿರುವವರ ರಕ್ಷಣೆಯ ವಿಧಾನಗಳ ಬಗ್ಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮ ಯಶಸ್ವೀಯಾಗಿ ಸಂಪನ್ನಗೊಂಡಿತು.

ವಿಟ್ಲ ಸಮೀಪದ ವಾರಾಣಾಸಿ ಸಾವಯವ ಫಾರ್ಮ್ ಅಡ್ಯನಡ್ಕದಲ್ಲಿ ನಡೆದ ತರಬೇತಿಯು ದಿನಾಂಕ: 07.01.2026 ರಿಂದ ಆರಂಭಗೊಂಡು 13.01.2026 ರಂದು ಮುಕ್ತಾಯಗೊಂಡಿತು. ಅಂತರಾಷ್ಟ್ರೀಯ ಈಜು ಹಾಗೂ ಸುರಕ್ಷಿತ ಮುಳುಗುವಿಕೆ ತರಬೇತಿ ಸಂಸ್ಥೆಯಾದ FCOA (Freeduving Coaches Of Asia) ವತಿಯಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಫ್ರೀ-ಡೈವಿಂಗ್ ಎಂದರೆ ನೀರೊಳಗಿನ ಡೈವಿಂಗ್ ಅಭ್ಯಾಸವಾಗಿದೆ. ಇದರಲ್ಲಿ ಧುಮುಕುವವನು ತನ್ನ ಉಸಿರನ್ನು ಹಿಡಿದಿಟ್ಟುಕೊಂಡು ನೀರಿನ ಅಡಿಯಲ್ಲಿ ಧುಮುಕಬೇಕಾಗುತ್ತದೆ. ಡೈವರ್‌ಗಳು ತಮ್ಮ ಉಸಿರನ್ನು ಮತ್ತೆ ಮೇಲೆ ಬರುವವರೆಗೆ ಹಿಡಿದಿಟ್ಟುಕೊಳ್ಳಬೇಕು. ಮತ್ತು ಈ ಉಸಿರನ್ನು ಹಿಡಿದಿಟ್ಟುಕೊಳ್ಳುವ ಡೈವ್‌ಗಳನ್ನು ಯಾವುದೇ ಸ್ಕೂಬಾ ಉಪಕರಣವಿಲ್ಲದೆ ಮಾಡಲಾಗುತ್ತದೆ.
FCOA ಸ್ಥಾಪಕರಾದ ಹಾಲೆಂಡ್ ನ ಶ್ರೀ ಜೆರೋಯೆನ್ ಎಲೌಟ್, ನ್ಯೂಯಾರ್ಕಿನ ಅಂಜಲಿ, ಕೇರಳ ಕೊಟ್ಟಯಂನ ಜಾಕೋಬ್ ಜೋಸ್ ಹಾಗೂ ತಂಡದವರು ಶೌರ್ಯ ತಂಡದ ಸ್ವಯಂಸೇವಕರಿಗೆ ವಿಶೇಷ ತರಬೇತಿ ನಡೆಸಿದರು.

ನೀರಿನ ಮೇಲ್ಮೈಯಲ್ಲಿ ದಣಿವಿರದ ದೀರ್ಘ ತೇಲುವಿಕೆ, ನೀರಿನಲ್ಲಿ ಮುಳುಗಿ ಪ್ರಜ್ಞಾಹೀನರಾದವರ ರಕ್ಷಣೆ, ಆಳನೀರಿನಲ್ಲಿ ಸುರಕ್ಷಿತ ಮುಳುಗುವಿಕೆ, ಎತ್ತರದ ಕಟ್ಟಡದಿಂದ ಏಕಾಂಗಿಯಾಗಿ ಹಗ್ಗದ ಸಹಾಯದಿಂದ ಇಳಿಯುವಿಕೆ , ನೀರಿನಲ್ಲಿ ಮುಳುಗಿದ ವಸ್ತುಗಳ ಪತ್ತೆಗೆ ಗುರುತುಗಳನ್ನು ನಿಗದಿಪಡಿಸುವುದು ಹಾಗೂ ಹುಡುಕುವುದು, ದಿಕ್ಸೂಚಿ ಸಹಾಯದಿಂದ ಅಪರಿಚಿತ ಸ್ಥಳ ಅಥವಾ ಕಾಡಿನಲ್ಲಿ ಸುರಕ್ಷಿತವಾಗಿ ಹಿಂದಿರುಗುವಿಕೆ, ಹಗ್ಗದ ವಿವಿಧ ಗಂಟುಗಳ ರಚನೆ ಹಾಗೂ ವಿಶ್ರಾಂತಿ ಇಲ್ಲದೆ 200 ಮೀಟರ್ ಗಳ ದಣಿವು ರಹಿತ ಈಜುವಿಕೆಯ ತರಬೇತಿಯನ್ನು ಸ್ವಯಂಸೇವಕರಿಗೆ ತರಬೇತುದಾರರು ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್ ರವರು ಸ್ವಯಂಸೇವಕರಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಈಜುವಿಕೆಯಲ್ಲಿ ಪರಿಣಿತಿ ಸಾಧಿಸಲು ಆಸಕ್ತಿ ಇರುವ ಬೆಳ್ತಂಗಡಿ ತಾಲ್ಲೂಕಿನ 6 ಮಂದಿಯನ್ನು ಗುರುತಿಸಲಾಗಿದ್ದು, ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಶ್ರೀ ವಿವೇಕ್. ವಿ. ಪಾಯ್ಸ ರವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ತರಬೇತಿ ಪಡೆದುಕೊಂಡರು.

ಬೆಳ್ತಂಗಡಿ ‘ಶೌರ್ಯ’ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಸ್ವಯಂಸೇವಕರಾದ ಸಚಿನ್ ಭಿಡೆ, ಜಯರಾಮ ನಡ, ಅನಿಲ್ ಪಿ.ಎ. ಸತೀಶ್ ನೆರಿಯ, ರಮೇಶ ಬೈರಕಟ್ಟ ಇವರು ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ. ತರಬೇತಿಯನ್ನು ಯಶಸ್ವೀಯಾಗಿ ಪೂರೈಸಿದ ಸ್ವಯಂಸೇವಕರಿಗೆ FCOA ಸಂಸ್ಥೆಯು ಪ್ರಮಾಣಪತ್ರ ನೀಡಿ ಗೌರವಿಸಿದೆ.