
ಮೂಡಿಗೆರೆ, ಏಪ್ರಿಲ್ ೨೨: ಕೊರೋನ ಮಹಾಮಾರಿಯ ಎರಡನೇ ಅಲೆ ತೀವ್ರವಾಗಿದ್ದು ಕರ್ನಾಟಕ ರಾಜ್ಯ ಸರ್ಕಾರ ತಂದಿರುವ ಹೊಸ ಮಾರ್ಗಸೂಚಿಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.ಬಣಕಲ್, ಕೊಟ್ಟಿಗೆಹಾರ, ಮತ್ತಿಕಟ್ಟೆ, ಇಂದಿರಾನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಆಟೋರಿಕ್ಷಾದಲ್ಲಿ ಧ್ವನಿವರ್ಧಕವನ್ನು ಕಟ್ಟಿಕೊಂಡು ಪ್ರಚಾರ ಮಾಡಲಾಯಿತು.ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ವಾಹನದಲ್ಲಿ ಶೇಕಡಾ ೫೦ ರಷ್ಟು ಜನರಿಗೆ ಮಾತ್ರ ಅವಕಾಶ, ಮದುವೆ ಕಾರ್ಯಕ್ಕೆ ೫೦ ಜನರಿಗೆ ಅವಕಾಶ, ರಾತ್ರಿ ಕರ್ಫ್ಯೂ, ಮಸೀದಿ, ಮಂದಿರ, ಚರ್ಚ್ ಗೆ ತೆರಳುವುದು ನಿಷೇಧ ಹೀಗೆ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಚಾರಕಾರ್ಯ ಮಾಡಲಾಯಿತು.ಪೊಲೀಸ್ ಇಲಾಖೆಯೊಂದಿಗೆ ಬಣಕಲ್ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಆರಿಫ್ ಬಣಕಲ್, ರವಿ ಕೂಡ ಹಳ್ಳಿ ಭಾಗವಹಿಸಿದ್ದರು.ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ತೊಡಗಿಸಿಕೊಳ್ಳುವಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.