
ಮೂಡಿಗೆರೆ, ಏಪ್ರಿಲ್ ೨೩: ತಾಲ್ಲೂಕಿನ ಬಕ್ಕಿ ಗ್ರಾಮದಲ್ಲಿ ೪೫ ವರ್ಷದ ಮೇಲ್ಪಟ್ಟವರಿಗೆ ಆರೋಗ್ಯ ಸಿಬ್ಬಂದಿಯಿAದ ಕೊರೋನಾ ವ್ಯಾಕ್ಸಿನ್ ಚುಚ್ಚುಮದ್ದನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಶೌರ್ಯ ತಂಡದ ಸ್ವಯಂಸೇವಕರು ಮಾಡಿದರು. ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮನವರಿಕೆ ಮಾಡಿ ಲಸಿಕಾ ಕೇಂದ್ರಕ್ಕೆ ಕರೆದು ತರುವ, ಮತ್ತು ಮಾಹಿತಿ ನೀಡುವ ಕೆಲಸ ಮಾಡಿದರು.ಲಸಿಕೆ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನಡೆಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಭೆಯನ್ನುದ್ದೇಶಿಸಿ ಮಾತನಾಡುತ್ತ ವಿಪತ್ತು ನಿರ್ವಹಣೆಯ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ವಿಪತ್ತು ನಿರ್ವಹಣೆಯಲ್ಲಿ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನೀಡಿದ ಕೊಡುಗೆ ಅಪಾರ ಎಂದರು.ಊರಿನ ಹಿರಿಯರಾದ ಪುಟ್ಟೇಗೌಡರು ಮಾತನಾಡುತ್ತಾ ವಿಪತ್ತು ಸೇವೆ ನೀಡುವಂತಹ ಒಂದು ತಂಡ ಇದೆ ಎನ್ನುವುದೇ ಹೆಮ್ಮೆಯ ವಿಷಯ.

ಅದರಲ್ಲಿ ನಮ್ಮೂರಿನ ಯುವಕರು ತೊಡಗಿಕೊಂಡಿದ್ದಾರೆ ಎಂದರೆ ಹಿರಿಯರಾದ ನಾವು ಹೆಮ್ಮೆ ಪಡುತ್ತೇವೆ ಎಂದರು. ಸ್ವಯಂಸೇವಕರ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಿಮ್ಮ ಸೇವೆ ನಮ್ಮೂರಿಗೆ ಸಿಗಲಿ ಎಂದು ಹಾರೈಸಿದರು.ಲಸಿಕೆ ವಿತರಣೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಕ್ಕಿ ಶಾಲೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಶ್ರೀಯುತ ವಿಠ್ಠಲ್ ಪೂಜಾರಿ, ವಲಯದ ಮೇಲ್ವಿಚಾರಕರಾದ ಶ್ರೀನಿವಾಸ್, ಮೂಡಿಗೆರೆಯ ವಿಪತ್ತು ನಿರ್ವಹಣೆಯ ಸಂಯೋಜಕರಾದ ಪ್ರವೀಣ್ ಪೂಜಾರಿ, ಬಣಕಲ್ ವಲಯದ ಸಂಯೋಜಕರಾದ ಪ್ರಕಾಶ್ ಬಕ್ಕಿ, ವಿಪತ್ತು ನಿರ್ವಹಣೆಯ ಸದಸ್ಯರಾದ ವಿಜಯ್ ಮತ್ತು ರವಿ ಉಪಸ್ಥಿತರಿದ್ದರು.
