ಧಾರಾಕಾರವಾಗಿ ಹರಿಯುತ್ತಿದ್ದ ಮಳೆಯ ನಡುವೆ ಉಕ್ಕಿ ಹರಿದ ಕಪಿಲಾ ನದಿಯ ಮಧ್ಯೆ ಸಿಲುಕಿದ್ದ ಶಿಶಿಲ ಗ್ರಾಮದ ಕೊಳಂಬೆ ನಿವಾಸಿ ಬಾಲಪ್ಪ (72) ಅವರನ್ನು ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆಗೆ ಬದಿಗುಡ್ಡೆ ಪ್ರದೇಶದ ಕಪಿಲಾ ನದಿ ತೀರಕ್ಕೆ ತೆರಳಿದ್ದ ಕೆಲವು ಯುವಕರು ನದಿಯ ಮಧ್ಯೆ ಅಸಾಹಯಕ ಸ್ಥಿತಿಯಲ್ಲಿ ನಿಂತಿರುವ ವ್ಯಕ್ತಿಯನ್ನು ಗಮನಿಸಿದ್ದಾರೆ. ನಿರಂತರ ಸುರಿಯುತ್ತಿದ್ದ ಮಳೆಯಿಂದ ನೀರಿನ ಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದ ಕಾರಣ ಇವರು ನದಿ ದಾಟಿ ಆ ವ್ಯಕ್ತಿಯ ಸಮೀಪ ಹೋಗುವ ಸಾಹಸ ಮಾಡಲಿಲ್ಲ. ಈಜುವಿಕೆಯಲ್ಲಿ ಪರಿಣತರ ಅಗತ್ಯ ಮನಗಂಡು ತಕ್ಷಣ ಶ್ರೀ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರಾದ ರಾಧಾಕೃಷ್ಣ ಗುತ್ತು ಮತ್ತು ರಮೇಶ್ ಭೈರಕಟ್ಟಾ ಇವರು ಸ್ಥಳೀಯ ಪರಿಣತ ಈಜುಗಾರ ಮೋಹನ್ ಗೌಡ ಅವರ ಸಹಕಾರ ಪಡೆದು ಹರಿಯುವ ನದಿಯನ್ನು ದಾಟಿದ್ದಾರೆ.

ಅಸಾಹಯಕನಾಗಿ ನಿಂತಿದ್ದ ವಯೋವೃದ್ದನತ್ತ ತಲುಪಿದ ಸ್ವಯಂಸೇವಕರು ವೃದ್ದನಿಗೆ ಧೈರ್ಯ ತುಂಬಿದ್ದಾರೆ. ಭಯಗೊಂಡಂತೆ ಕಂಡುಬರುತ್ತಿದ್ದ ಅವರಿಗೆ ಸಾಂತ್ವಾನ ಹೇಳಿ ಲೈಫ್ ಜಾಕೆಟ್ ತೊಡಿಸಿ ಹಗ್ಗದ ಸಹಾಯದಿಂದ ನದಿಯ ಮದ್ಯದಿಂದ ಹರಿಯುವ ನೀರನ್ನು ದಾಟಿಸಿ ರಕ್ಷಣೆ ಮಾಡಿದ್ದಾರೆ. ನಂತರ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಶೌರ್ಯ ವಿಪತ್ತು ನಿರ್ವಹಣಾ ತಂಡದ ರಕ್ಷಣಾ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.