
ಶಿರಸಿ ತಾಲ್ಲೂಕಿನ ಮುರ್ಕಿಕೊಡ್ಲದಲ್ಲಿ ಆಕಸ್ಮಿಕ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ (23.09.2025) ಯುವತಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ರಂಜನಾ ನಾಗಪ್ಪ ದೇವಾಡಿಗ (21) ಮೃತ ದುರ್ದೈವಿ.
ಸ್ಪೋಟ ಸಂಭವಿಸಿದ ಅವರ ಮನೆಯ ಪರಿಸರ ಗುಡ್ಡಗಾಡು ಪ್ರದೇಶವಾಗಿದ್ದು ಇತರ ಮನೆಗಳು ದೂರ ಇದ್ದವು. ಸರಿಯಾದ ನೆಟ್ವರ್ಕ್ ಸಿಗದ ಪ್ರದೇಶ ಅದಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದೊಡ್ಡ ಸ್ಪೋಟದ ಶಬ್ದ ಕೇಳಿಬಂದಿದೆ. ಆ ಸಮಯದಲ್ಲಿ ಅಲ್ಲಿನ ಸುತ್ತಲಿನ ಪ್ರದೇಶದಲ್ಲಿ ಇರುವ ಮನೆಗಳಲ್ಲಿ ಕೆಲಸಕ್ಕೆ ಹೋಗಿದ್ದು ಯಾರೂ ಇರಲಿಲ್ಲ. ಪಕ್ಕದ ಮನೆಯ ಶರತ್ ಎನ್ನುವವರು ಶಬ್ದ ಕೇಳಿದ ತಕ್ಷಣ ಮನೆಗೆ ತೆರಳಿ ಅವಘಡ ಗಮನಿಸಿ ಬಾಗಿಲು ಒಡೆಯುವ ಪ್ರಯತ್ನ ಮಾಡಿದ್ದಾರೆ.

ಸ್ಪೋಟದ ಶಬ್ದವು ಸುಮಾರು 3 ಕಿಲೋಮೀಟರ್ ದೂರದ ಮಣಬಾಗಿ ಎಂಬಲ್ಲಿನ ಕೆಲವು ತೋಟದಲ್ಲಿ ಕೆಲಸ ಮಾಡುತ್ತಿದ್ದವರಿಗೂ ಕೇಳಿಸಿದೆ. ಕೂಡಲೇ ಅವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಸಂತೋಷ ದೇವಾಡಿಗ ಇವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಇವರ ಮೂಲಕ ಶೌರ್ಯ ಘಟಕದ ಉಳಿದ ಸದಸ್ಯರು ಮತ್ತು ಗ್ರಾಮದ ಹಲವರಿಗೆ ತಿಳಿದಿದ್ದು ಸ್ಪೋಟ ಸಂಭವಿಸಿದ ಸ್ಥಳಕ್ಕೆ ಎಲ್ಲರೂ ಧಾವಿಸಿದ್ದಾರೆ.

ಆ ಸಮಯದಲ್ಲಿ ಮನೆಯಲ್ಲಿ ದಟ್ಟ ಹೊಗೆ ಕಾಣುತ್ತಿತ್ತು. ಯುವತಿಯ ಚಪ್ಪಲಿ ಮನೆಯ ಹೊರಗೆ ಇರುವುದನ್ನು ಗಮನಿಸಿದ ಅವರು ಯುವತಿ ಮನೆಯೊಳಗೇ ಇರುವುದನ್ನು ಖಾತ್ರಿಪಡಿಸಿಕೊಂಡು ಬಾಗಿಲು ಒಡೆಯಲು ಮುಂದಾಗಿದ್ದಾರೆ.
ಯುವತಿ ರಂಜನಾ ತಲೆನೋವಿನ ಕಾರಣ ಕಾಲೇಜಿಗೆ ರಜಾ ಮಾಡಿ ಮನೆಯಲ್ಲಿಯೇ ಇದ್ದರು. ತಂದೆ ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದರಿಂದ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ರಂಜನಾ ಅವರು ಊಟ ಮಾಡಿ ಮಲಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಕೋಣೆಯಲ್ಲಿ ಮಲಗಿದ್ದರಿಂದ ಬಾಗಿಲು ಮತ್ತು ಕಿಡಕಿಯನ್ನು ಸ್ಥಳೀಯರು ಒಡೆದಿದ್ದಾರೆ. ದಟ್ಟವಾದ ಬೆಂಕಿ ಮತ್ತು ಹೊಗೆಯ ಕಾರಣದಿಂದ ಯುವತಿ ಮೃತಳಾಗಿದ್ದಳು.

ಸ್ಪೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಿಗೆ ಮನೆಯ ಪೂರ್ತಿ ಆವರಿಸಿದ್ದು, ಮನೆ ಬಿರುಕು ಬಿಟ್ಟಿತ್ತು. ಅಡುಗೆ ಮನೆಯ ಪಕಾಸ್, ಹಂಚು ಸ್ಫೋಟದ ತೀವ್ರತೆಗೆ ಹಾರಿಹೋಗಿವೆ.
ಸಿಲಿಂಡರ್ ಸ್ಫೋಟದ ಸ್ಥಳಕ್ಕೆ ಬಂದ ಸ್ಥಳೀಯರು ಮತ್ತು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ತಕ್ಷಣ ಅಗ್ನಿಶಾಮಕದಳ ಮತ್ತು ಅಂಬುಲೆನ್ಸ್ ಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮತ್ತು ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ತರುವ ಕಾರ್ಯಾಚರಣೆ ನಡೆಸಿದರು.

ಶೌರ್ಯ ತಂಡದ ಸ್ವಯಂಸೇವಕರು ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರ ಜೊತೆಯಾಗಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು. ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಲೇಕಲ್ ಘಟಕದ ಸಂಯೋಜಕರಾದ ಸರಸ್ವತಿ, ಘಟಕ ಪ್ರತಿನಿಧಿ ಮಮತಾ, ಸ್ವಯಂಸೇವಕರಾದ ನರಸಿಂಹ, ಸಂತೋಷ, ಗೋಪಾಲ, ಪ್ರಜ್ವಲ, ಮಂಜುನಾಥ,ನಾಗರಾಜ, ಹರೀಶ ಸಂತೋಷ ಪಾಲ್ಗೊಂಡಿದ್ದರು.