ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಸಮೀಪ ಪ್ರಸಿದ್ಧ ಚಾರಣ ಕ್ಷೇತ್ರ ಗಡಾಯಿ ಕಲ್ಲಿನಲ್ಲಿ ಚಾರಣಕ್ಕೆಂದು ತೆರಳಿದ ಪ್ರವಾಸಿಗನೋರ್ವ ಮೊಣಕಾಲಿನಲ್ಲಿ ನೋವು ಉಂಟಾಗಿ ಗುಡ್ಡದ ಮೇಲೆ ಅಸ್ವಸ್ಥನಾಗಿ ಕೆಳಗೆ ಇಳಿಯಲಾಗದೇ ಇದ್ದು ಶೌರ್ಯ ತುರ್ತು ಸ್ಪಂದನಾ ತಂಡ, ಅಗ್ನಿಶಾಮಕ ತಂಡದಿಂದ ಗುಡ್ಡದ ಮೇಲಿನಿಂದ ಸುಮಾರು 1.5 ಕಿಲೋಮೀಟರ್ ವರೆಗೆ ಹೊತ್ತು ತಂದು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂಥದ ಮಹಮದ್ ಶರೀಫ್ ಎನ್ನುವವರು ಗಡಾಯಿಕಲ್ಲು ಗುಡ್ಡಕ್ಕೆ ಚಾರಣಕ್ಕೆಂದು ಬಂದಿದ್ದು ಗುಡ್ಡ ಹತ್ತಿದಾಗ ಆಕಸ್ಮಿಕವಾಗಿ ಕಾಲು ಉಳುಕಿ ಮೇಲಕ್ಕೂ ಹೋಗಲಾಗದೇ ಕೆಳಕ್ಕೆ ಇಳಿಯಲಾಗದೇ ಕಷ್ಠಪಡುತ್ತಿದ್ದರು.

ಇದನ್ನು ಗಮನಿಸಿದ ಜೊತೆಗಾರರು ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ನಂತರ ಅಗ್ನಿಶಾಮಕದಳದಿಂದ ಶೌರ್ಯ ತಂಡಕ್ಕೆ ಮಾಹಿತಿ ಬಂದಿದ್ದು ಸ್ಥಳೀಯ ನಡ-ಕನ್ಯಾಡಿ ಶೌರ್ಯ ತಂಡದ ಘಟಕ ಪ್ರತಿನಿಧಿ ಮಂಜುನಾಥ್ ಮತ್ತು ಇತರ ಸದಸ್ಯರ ಜೊತೆಗೆ ತುರ್ತು ಸ್ಪಂದನಾ ತಂಡದ ಸದಸ್ಯರು ಸ್ಥಳಕ್ಕೆ ಬಂದು ಸುಮಾರು 1500 ಮೆಟ್ಟಿಲುಗಳನ್ನು ಹತ್ತಿ ವ್ಯಕ್ತಿಯನ್ನು ಹೊತ್ತುಕೊಂಡು ಬಂದು ಕೆಳಕ್ಕೆ ಇಳಿಸಿರುತ್ತಾರೆ.
ರಕ್ಷಣಾ ಕಾರ್ಯಾಚರಣೆ ಸುಮಾರು 3 ಗಂಟೆಗಳ ಕಾಲ ನಡೆದಿದೆ. ನಡ ಕನ್ಯಾಡಿ ಘಟಕದ ಪ್ರತಿನಿಧಿ ಮಂಜುನಾಥ್, ಸದಸ್ಯರಾದ ಅರ್ವಿನ್ ಮಿರಾಂದ, ರವೀಂದ್ರನಾಥ, ತುರ್ತು ಸ್ಪಂದನಾ ತಂಡದ ಮಾಸ್ಟರ್ ಅವಿನಾಶ್ ಬಿಡೆ, ಕ್ಯಾಪ್ಟನ್ ರವೀಂದ್ರ, ಸಚಿನ್ ಬಿಡೆ, ರಮೇಶ್ ಬಿ, ಸುಧೀರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶೌರ್ಯ ತಂಡದ ಸ್ವಯಂಸೇವಕರ ಸೇವೆಯನ್ನು ಮೆಚ್ಚಿ ಅಗ್ನಿಶಾಮಕ ದಳ ಪ್ರಶಂಸೆ ವ್ಯಕ್ತಪಡಿಸಿದೆ.