ಪೊಲೀಸ್ ಇಲಾಖೆಯೊಂದಿಗೆ ಶೌರ್ಯ ಶ್ರೀ ಧರ್ಮಸ್ಥಳ ತಂಡ; ಲಕ್ಷಾಂತರ ಮಂದಿ ಸೇರುವ ಜಾತ್ರೆಯಲ್ಲಿ ಭದ್ರತಾ ವ್ಯವಸ್ಥೆಗೆ ಶೌರ್ಯ ತಂಡವನ್ನು ನಿಯೋಜಿಸಿದ ಪೊಲೀಸ್ ಇಲಾಖೆ

ಖಾನಾಪುರ, ಫೆಬ್ರವರಿ 10: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕ್ಷೇತ್ರ ನಂದಗಡದ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಿಯ ಜಾತ್ರೆಯು 25 ವರ್ಷಗಳ ನಂತರ ನಡೆಯುತ್ತಿರುವ ಹಿನ್ನೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುವ ಸಂಭವನೀಯತೆ ಇರುವುದರಿಂದ ಭದ್ರತೆಯ ದೃಷ್ಠಿಯಿಂದ ಪೊಲೀಸ್ ಇಲಾಖೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೋರಿ ಪತ್ರ ಬರೆದಿದೆ.

ನಂದಗಡ ಗ್ರಾಮದಲ್ಲಿ ಇದೇ ಬರುವ 12 ರಂದು ಆರಂಭವಾಗಲಿರುವ ಜಾತ್ರೆಯು 22 ರ ವರೆಗೆ ನಡೆಯಲಿದೆ. ರಾಜ್ಯದ ಭಕ್ತಾದಿಗಳು ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಭಕ್ತಾದಿಗಳು ಬರುವುದರಿಂದ ಸೂಕ್ತ ಭದ್ರತೆ, ಜನಸಂದಣಿ ನಿಯಂತ್ರಣೆ, ಟ್ರಾಫಿಕ್ ನಿಯಂತ್ರಣೆ ಸವಾಲಿನ ಕೆಲಸವಾಗಿದೆ. ಭದ್ರತಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿದ್ದು ಪರಿಣಿತರಾಗಿರಬೇಕಾದ ಅವಶ್ಯಕತೆ ಇರುವುದರಿಂದ ಪೊಲೀಸ್ ಇಲಾಖೆಯು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಎನ್.ಡಿ.ಆರ್.ಎಫ್ ಮೂಲಕ ತರಬೇತಿ ಪಡೆದಿರುವ ಸಂಘಟನೆಯಾದ ‘ಶೌರ್ಯ’ ವಿಪತ್ತು ನಿರ್ವಹಣಾ ಸಮಿತಿಗೆ ಅವಕಾಶ ಒದಗಿಸಿದೆ.

ನಂದಗಡ ಪೊಲೀಸ್ ಠಾಣೆಯ ಠಾಣಾಧಿಕಾರಿಯವರಾದ ಶ್ರೀಯುತ ಸಿ ಸಿ ಪಾಟೀಲ್ ರವರು ಭದ್ರತಾ ವ್ಯವಸ್ಥೆಯ ಪೂರ್ವಭಾವಿ ತರಬೇತಿಯನ್ನು ನಂದಗಡ ಪೊಲೀಸ್ ಠಾಣೆಯ ಆವರಣದಲ್ಲಿ ನೀಡಿದರು. ಭದ್ರತೆಯ ಜೊತೆಗೆ ಭಕ್ತರ ಆರೋಗ್ಯ ಸ್ಥಿತಿ, ಜನರ ಹಿತಾಸಕ್ತಿ, ಊಟ ಉಪಚಾರ, ಶೌಚ, ಸ್ವಚ್ಚತೆ ಮತ್ತು ಸುವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಜನರೊಂದಿಗೆ ಸಭ್ಯವಾಗಿ ನಡೆದುಕೊಳ್ಳುವುದು, ಮಾತಿನ ಚಕಮಕಿ ನಡೆಸದೇ ಶಾಂತಚಿತ್ತರಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಸ್ವಯಂಸೇವಕರಿಗೆ ತರಬೇತಿ ನೀಡಿದರು.

ಭದ್ರತಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರಿಗೆ ಪೊಲೀಸ್ ಇಲಾಖೆಯಿಂದ ಕ್ಯಾಪ್, ರಿಫ್ಲೆಕ್ಟರ್ ಜಾಕೆಟ್, ಮಾಸ್ಕ್ ಪೂರೈಸಲಾಗಿದೆ.

ಬೆಳಗ್ಗಿನ ಜಾವ 3 ಗಂಟೆಯಿಂದಲೇ ಸ್ವಯಂಸೇವಕರು ಕರ್ತವ್ಯ ನಿರ್ವಹಣೆ ಆರಂಭಿಸಬೇಕಾಗಿದ್ದು, ಸುಗಮ ಕೆಲಸಕ್ಕೆ ಅನುಕೂಲವಾಗುವಂತೆ ನಾಲ್ಕು ಜನರಂತೆ ತಲಾ ಒಂದೊಂದು ತಂಡವನ್ನು ರಚಿಸಿ ವಿವಿಧ ಸ್ಥಳಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಪ್ರತಿ ನಾಲ್ಕು ಜನರ ಸ್ವಯಂಸೇವಕರ ತಂಡಕ್ಕೆ ಓರ್ವ ಪೊಲೀಸ್ ಸಿಬ್ಬಂದಿ ಮಾರ್ಗದರ್ಶನ ನೀಡಲಿದ್ದಾರೆ.

ಯಾವುದೇ ಘಟನೆಗಳು ನಡೆದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದ್ದು ಸ್ವಯಂಸೇವಕರು ಜವಾಬ್ದಾರಿ ನಿರ್ವಹಣೆಗೆ ಸಜ್ಜುಗೊಂಡಿದ್ದಾರೆ.

ಖಾನಾಪುರ ತಾಲ್ಲೂಕು ಯೋಜನಾಧಿಕಾರಿಯವರಾದ ಶ್ರೀ ಗಣಪತಿ ನಾಯ್ಕ್ ಇವರ ಮಾರ್ಗದರ್ಶನದಲ್ಲಿ ಶೌರ್ಯ ತಂಡಗಳು ತಮಗೆ ದೊರಕಿರುವ ಅವಕಾಶವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾದ ರಕ್ಷಣಾ ಪರಿಕರಗಳನ್ನು ಬಳಸಿಕೊಂಡು  ಶಿಸ್ತಿನಿಂದ, ಬದ್ಧತೆಯಿಂದ ನಿರ್ವಹಿಸಲು ಯೋಜನೆ ರೂಪಿಸಿದೆ.

ಜಾತ್ರಾ ಮಹೋತ್ಸವದ ಭದ್ರತೆಯ ಕುರಿತಂತೆ ಪೂರ್ವ ಸಿದ್ಧತಾ ಸಭೆಯು ಪೊಲೀಸ್ ಠಾಣೆ ನಂದಗಡದಲ್ಲಿ ನಡೆದಿದ್ದು ಸಿ.ಪಿ.ಐ ಶ್ರೀ ಸಿ. ಸಿ ಪಾಟೀಲ್ ಖಾನಾಪುರ ತಾಲೂಕಿನ ಯೋಜನಾಧಿಕಾರಿ ಶ್ರೀ ಗಣಪತಿ ನಾಯ್ಕ,  ಪೊಲೀಸ್ ಇಲಾಖೆ ಅಧಿಕಾರಿಗಳು, ಫೇಸ್ಬುಕ್ ಗ್ರೂಪ್ ನಿರ್ವಹಣಾ ಪೊಲೀಸ್ ಅಧಿಕಾರಿಗಳು, ವಲಯ ಮೇಲ್ವಿಚಾರಕರು, ಸಂಯೋಜಕರು, ಮಾಸ್ಟರ್, ಕ್ಯಾಪ್ಟನ್, ಘಟಕ ಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ  ಗ್ರಾಮದಲ್ಲಿ ಪರೇಡ್ ನಡೆಸುವ  ಮೂಲಕ ಜಾಗೃತಿ ಮೂಡಿಸಲಾಯಿತು.

Share Article
Previous ಕಾಯಿಲೆಯಿಂದ ಹೈರಾಣಾದ ಕುಟುಂಬಕ್ಕೆ ಧರ್ಮಸ್ಥಳದ ಸಹಾಯಹಸ್ತ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved