ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರಚಿಸಲಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಎನ್.ಡಿ.ಆರ್.ಎಫ್ ಯೋಧರಿಂದ ನಡೆದ ಪ್ರಥಮ ಪ್ರತಿಕ್ರಿಯೆ ತರಬೇತಿಯಲ್ಲಿ ಹಣ್ಣು ಹಂಪಲು ಗಿಡಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರು ವಿತರಣೆ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಕಾಡಿನಲ್ಲಿ ಪಕ್ಷಿಗಳಿಗೆ ಹಣ್ಣು ಹಂಪಲು ಗಿಡಗಳನ್ನು ನಾಟಿ ಮಾಡಲಾಗುತ್ತಿದ್ದು, ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
ಕಾಡಿನಲ್ಲಿ ಪ್ರಾಣಿಗಳು ಆಹಾರದ ಕೊರತೆಯಿಂದ ಜನವಸತಿ ಸ್ಥಳಗಳಿಗೆ, ಕೃಷಿ ಜಮೀನುಗಳಿಗೆ ನುಗ್ಗುವ, ಧಾಳಿ ನಡೆಸುವ ಘಟನೆಗಳು ನಡೆಯುತ್ತಿವೆ. ಕಾಡಿನಲ್ಲಿ ತನಗೆ ಅಗತ್ಯವಿರುವ ಆಹಾರವಿಲ್ಲದೇ ಇದ್ದಾಗ ಪ್ರಾಣಿಗಳು ಸಹಜವಾಗಿಯೇ ಆಹಾರ ಹುಡುಕಿ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ.

ಕಾಡಿನ ಅಂಚಿನಲ್ಲಿ ಹಣ್ಣು ಹಂಪಲು ಗಿಡಗಳನ್ನು ನಾಟಿ ಮಾಡಿ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ 6 ವರ್ಷಗಳಿಂದ ಶೌರ್ಯ ತಂಡದ ಸ್ವಯಂಸೇವಕರಿಗೆ ಹಣ್ಣು ಹಂಪಲು ಗಿಡ ನಾಟಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ.
2026 ನೇ ಸಾಲಿನಲ್ಲಿ ರಾಜ್ಯದಾದ್ಯಂತ ಹಣ್ಣು ಹಂಪಲು ಗಿಡಗಳನ್ನು ನಾಟಿ ಮಾಡಲು ಮತ್ತು ಕಳೆದ ವರ್ಷದಲ್ಲಿ ನಾಟಿ ಮಾಡಿದ ಗಿಡಗಳ ಪೋಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ.
ಈ ಪ್ರಯುಕ್ತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ದಕ್ಷಿಣ ಕನ್ನಡ ಜಿಲ್ಲೆಯ 10 ತಾಲ್ಲೂಕಿನ ವಿಪತ್ತು ನಿರ್ವಹಣಾ ಸಮಿತಿಗಳ ಮಾಸ್ಟರ್ ಮತ್ತು ಕ್ಯಾಪ್ಟನ್ ರಿಗೆ ಹಣ್ಣು ಹಂಪಲುಗಳ ಗಿಡಗಳನ್ನು ವಿತರಣೆ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಕಿಶೋರ್ ಕುಮಾರ್, ಬೆಳ್ತಂಗಡಿ ತಾಲ್ಲೂಕಿನ ಯೋಜನಾಧಿಕಾರಿ ಶ್ರೀ ಯಶೋಧರ, ಶ್ರೀ ಹರೀಶ್ ಉಪಸ್ಥಿತರಿದ್ದರು.