ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡ ಮಹಿಳೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಸುಳ್ಯದ ಸದಸ್ಯರು ಶ್ರಮದಾನದ ಮೂಲಕ ಹೊಸ ಮನೆ ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮಪಂಚಾಯತ್ ವ್ಯಾಪ್ತಿಯ ಅಂಜಿಕ್ಕಾರಿ ನಿವಾಸಿ ಸವಿತಾ ಎಂಬುವವರು ವಾಸಕ್ಕೆ ಸರಿಯಾದ ಮನೆ ಇಲ್ಲದೇ ಇರುವುದರಿಂದ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಮನೆ ತೀರಾ ಹಳೆಯದಾಗಿತ್ತು. ವಾಸಕ್ಕೆ ಕಷ್ಠಪಡುತ್ತಿದ್ದ ಮನೆಯ ಮೇಲೆಯೇ ಹತ್ತಿರದಲ್ಲಿದ್ದ ಮರವೊಂದು ಅತಿಯಾದ ಮಳೆ ಗಾಳಿಗೆ ಮುರಿದು ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಹಾನಿಯಾಗಿತ್ತು.
ವಾಸಕ್ಕೆ ಅತ್ಯಂತ ಕಷ್ಠಪಡುತ್ತಿದ್ದ ಈ ಕುಟುಂಬವನ್ನು ಗಮನಿಸಿದ ಶೌರ್ಯ ಘಟಕದ ಸದಸ್ಯ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ರತೀಶನ್ ರವರು ತಾವೇ ಸ್ವತಃ ಮುತುವರ್ಜಿ ವಹಿಸಿ ಪ್ಲಾಸ್ಟಿಕ್ ಹೊದಿಕೆಯ ಸಣ್ಣ ತಾತ್ಕಾಲಿಕ ಮನೆಯನ್ನು ಶೌರ್ಯ ಶ್ರೀ ಘಟಕದ ಸ್ವಯಂಸೇವಕರ ಸಹಕಾರದಿಂದ ಕಟ್ಟಿಕೊಟ್ಟಿದ್ದರು.

ಅತಿಯಾದ ಮಳೆಯಲ್ಲಿ ಸಣ್ಣ ಗುಡಿಸಲಿನಲ್ಲಿ ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿ ಜೀವನ ನಡೆಸಲು ಪ್ರಯಾಸ ಪಡುತ್ತಿದ್ದ ಕುಟುಂಬ ಸದಾ ಆತಂಕದಲ್ಲಿರಬೇಕಾಗಿತ್ತು. ಇಬ್ಬರು ಸಣ್ಣ ಮಕ್ಕಳು, ವಯಸ್ಸಾದ ತಾಯಿಯೊಂದಿಗೆ ಚಿಕ್ಕ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ. ಜೋರಾದ ಗಾಳಿಗೆ ಎಲ್ಲಿ ಮನೆಯ ಮೇಲ್ಚಾವಣಿಗೆ ಹೊದಿಸಿದ ಪ್ಲಾಸ್ಟಿಕ್ ಹೊದಿಕೆ ಹಾರಿ ಹೋಗಬಹುದೋ, ಮಳೆಗಾಲದಲ್ಲಿ ಹಾವು, ಹುಳಹುಪ್ಪಡಿಗಳು, ಸರಿಸೃಪಗಳು ಮನೆಯೊಳಗೆ ಸೇರಿಕೊಂಡು ಅಪಾಯಕಾರಿಯಾಗಬಹುದೋ ಎನ್ನುವ ಭಯದಲ್ಲಿ ವಾಸ ಮಾಡಬೇಕಾಗಿತ್ತು.

ಬಡ ಕುಟುಂಬದ ಕಷ್ಠವನ್ನು ಕಣ್ಣಾರೆ ಕಂಡ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಹೊಸ ಮನೆ ನೀರ್ಮಾಣ ಮಾಡಿಕೊಡಲು ನಿರ್ಧರಿಸಿದರು. ಗ್ರಾಮ ಪಂಚಾಯತಿಯಿಂದ ರೂ. 50,000 ಅನುದಾನ ದೊರೆಯಿತು.
ಮನೆಯ ಅಡಿಪಾಯ, ಕಟ್ಟಡದ ಕೆಲಸ, ಗಾರೆ ಕೆಲಸ, ಮೇಲ್ಚಾವಣಿ ಹೊದಿಕೆ, ವಿದ್ಯುತ್ ಸಂಪರ್ಕ, ಬಣ್ಣ ಬಳಿಯುವುದು ಇತ್ಯಾದಿ ಕೆಲಸಗಳನ್ನು ಶೌರ್ಯ ಘಟಕದ ಸದಸ್ಯರು ಸ್ವತಃ ತಾವೇ ಮಾಡಿದರು. ಪಂಚಾಯತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ಪಂಚಾಯತಿ ಸದಸ್ಯ ರತೀಶನ್ ಕೊಡಿಸಲು ಶ್ರಮಿಸಿದರು.

ಶೌರ್ಯ ವಿಪತ್ತು ನಿರ್ವಹಣಾ ಘಟಕದಲ್ಲಿರುವ ಸದಸ್ಯರು ಶ್ರೀಮಂತರೇನಲ್ಲ. ಅವರ ಹೃದಯ ಶ್ರೀಮಂತಿಕೆ ವಿಶಾಲವಾದುದು. ಪ್ರತಿ ಸ್ವಯಂಸೇವಕರು ತಮ್ಮ ಜೀವನಕ್ಕಾಗಿ ಕೂಲಿ, ಕೃಷಿ, ವಾಹನ ಚಾಲನೆ ಮತ್ತಿತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ಶ್ರೀಮಂತರಲ್ಲದ ಸ್ವಯಂಸೇವಕರಲ್ಲಿ ಮನೆ ಇಲ್ಲದ ಬಡ ಕುಟುಂಬಕ್ಕೆ ನೆರವಾಗಬೇಕೆನ್ನುವ ಶ್ರೀಮಂತ ಆಲೋಚನೆ ನೆಲೆಯೂರಿದ್ದರಿಂದ ತಮ್ಮ ದೈನಂದಿನ ಕೆಲಸಗಳನ್ನು ಪೂರೈಸಿಕೊಂಡು ಸಂಜೆ 7 ಗಂಟೆಯ ನಂತರದಲ್ಲಿ ಮನೆ ರಚನೆ ಕೆಲಸವನ್ನು ಆರಂಭಿಸುತ್ತಿದ್ದರು. ರಾತ್ರಿ 10 ಗಂಟೆಯ ವರೆಗೆ ವಿದ್ಯುತ್ ದೀಪದ ಬೆಳಕಿನಲ್ಲಿ ಮನೆ ನಿರ್ಮಾಣದ ವಿವಿಧ ಹಂತದ ಕೆಲಸಗಳನ್ನು ಪೂರೈಸಿದ್ದಾರೆ.

ತಮ್ಮ ಕುಟುಂಬವನ್ನೂ ನೋಡಿಕೊಳ್ಳಬೇಕು. ಕಷ್ಠದಲ್ಲಿರುವವರಿಗೂ ನೆರವಾಗಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಸ್ವಯಂಸೇವಕರು ತಮ್ಮ ಕೆಲಸಗಳನ್ನು ಪೂರೈಸಿಕೊಂಡು ಬಿಡುವಿನ ವೇಳೆಯಲ್ಲಿ ಸತತವಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಮನೆ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ.
ಸುಳ್ಯ ಘಟಕದಲ್ಲಿ 19 ಮಂದಿ ಸ್ವಯಂಸೇವಕರು ಇದ್ದು ಎಲ್ಲಾ ಸದಸ್ಯರು ತಮ್ಮದೇ ಆದ ರೀತಿಯಲ್ಲಿ ಸಹಕಾರವನ್ನು ನೀಡಿರುತ್ತಾರೆ. ಗಾರೆ ಕೆಲಸ, ವಸ್ತುಗಳ ಸಾಗಾಟ ಸೇರಿದಂತೆ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರು ನೋಡಿಕೊಂಡಿದ್ದು, ಮನೆಯ ಸುತ್ತಲಿನ ಸ್ವಚ್ಚತೆ, ದಾರಿ ಮಾಡಿಕೊಡುವುದು, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಸ್ವಯಂಸೇವಕರು ಮಾಡಿರುತ್ತಾರೆ.

ಸುಳ್ಯ ಘಟಕದಲ್ಲಿ ವಿವಿಧ ಕೌಶಲ್ಯ ಹೊಂದಿರುವ ಸದಸ್ಯರಿದ್ದಾರೆ. ಗಾರೆ ಕೆಲಸ ಮಾಡುವ ಕೌಶಲ್ಯ ಹೊಂದಿರುವವರು, ಇಲೆಕ್ಟ್ರಿಷಿಯನ್, ಕಾರ್ಪೆಂಟರ್, ಮರ ಏರುವವರು, ಪೇಂಟರ್ ಹೀಗೆ ನಾನಾ ಕೌಶಲ್ಯವನ್ನು ಹೊಂದಿರುವವರು ಇರುವುದರಿಂದ ಪ್ರತಿಯೊಬ್ಬರು ತಮಗೆ ಗೊತ್ತಿರುವ ಕೌಶಲ್ಯದಿಂದ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ.

ಘಟಕದ ಸಂಯೋಜಕರಾದ ಸುರೇಶ್, ಘಟಕ ಪ್ರತಿನಿಧಿ ಜಯರಾಮ ಪಿ.ಜಿ, ಸದಸ್ಯರಾದ ರತೀಶನ್ ಆರಂಬೂರು, ಪ್ರಶಾಂತ್ ಡಿ, ಸುನೀಲ್, ಶರತ್ ಕಲ್ಲುಗುಂಡಿ, ಯತೀಶ್ ಡಿ, ಹರ್ಷಿತ್, ಮಧುಸೂದನ್ ದೊಡ್ಡೇರಿ, ಚಿದಾನಂದ ಪರಿವಾರಕಾನ, ದಿನೇಶ್ ಆರಂಬೂರು, ಭರತ್, ಗುರುರಾಜ್, ಕೌಶಿಕ್ ಕಾನತ್ತಿಲ, ಜಯಪ್ರಕಾಶ್, ಯೋಗೀಶ್, ಬಾಲಚಂದ್ರ, ಲವಕುಮಾರ್ ರವರು ಮನೆ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿದ್ದರು.
ಸುಳ್ಯ ವಿಪತ್ತು ನಿರ್ವಹಣಾ ಘಟಕವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂಧ ಕಳೆದ 6 ವರ್ಷದ ಹಿಂದೆ ರಚಿಸಲ್ಪಟ್ಟ ಘಟಕವಾಗಿದ್ದು ನೂರಾರು ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿತವಾದ ಸಮಯದಲ್ಲಿ ಈ ತಂಡದ ಹಲವು ಸ್ವಯಂಸೇವಕರು ಒಂದು ವಾರಗಳ ಕಾಲ ಮಡಿಕೇರಿ, ಭಾಗಮಂಡಲ ಭಾಗದಲ್ಲಿ ಇದ್ದುಕೊಂಡು ಗುಡ್ಡ ಕುಸಿತದಲ್ಲಿ ಸಂತ್ರಸ್ಥರಾದವರ ನೆರವಿಗೆ ನಿಂತಿದ್ದರು. 2024 ರಲ್ಲಿ ಸುಬ್ರಹ್ಮಣ್ಯ, ಹರಿಹರ ಪಲ್ಲತಡ್ಕ ಭಾಗದಲ್ಲಿ ಅತಿವೃಷ್ಠಿಯಿಂದ ಉಂಟಾದ ಗುಡ್ಡ ಕುಸಿತದ ಸಮಯದಲ್ಲಿ ಸ್ಥಳಕ್ಕೆ ಧಾವಿಸಿ ವಿಪತ್ತು ನಿರ್ವಹಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಪೊಲೀಸ್ ಇಲಾಖೆ, ಅಗ್ನಿಶಾಮಕದಳದೊಂದಿಗೆ ಸಂಪರ್ಕದಲ್ಲಿರುವ ಇವರು ಇಲಾಖೆಯ ವಿನಂತಿಯ ಮೇರೆಗೆ ವಿಪತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಸ್ವಯಂಸೇವಕರ ಶ್ರಮವನ್ನು ಮೆಚ್ಚಿಕೊಂಡು ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಮಾರ್ಗದರ್ಶನ ನೀಡಿರುತ್ತಾರೆ. ಕಷ್ಠದಲ್ಲಿರುವವರಿಗೆ ನೆರವಾಗುವ ಆಸಕ್ತಿಯನ್ನು ತೋರಿದ ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಿ ಬೆನ್ನುತಟ್ಟಿದ್ದಾರೆ. ವಲಯ ಮೇಲ್ವಿಚಾರಕರಾದ ದಿನೇಶ್ ರವರು ಸ್ವಯಂಸೇವಕರ ಜೊತೆಯಾಗಿ ಪ್ರೇರಣೆ ನೀಡಿದ್ದಾರೆ. ಮನೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಸ್ವಯಂಸೇವಕರೊಂದಿಗೆ ಕೆಲಸದಲ್ಲಿಯೂ ಜೊತೆಯಾಗಿದ್ದಾರೆ.

ಕಷ್ಠದಲ್ಲಿದ್ದ ಬಡ ಕುಟುಂಬಕ್ಕೆ ನೆರವಾಗಲು ಮನಸ್ಸು ಮಾಡಿದಾಗ ಶ್ರೀ ಮಂಜುನಾಥ ಸ್ವಾಮಿಯ ಸೇವೆಯೆಂದೇ ಕೆಲಸ ಮಾಡಿದ್ದೇವು. ನಮ್ಮ ಘಟಕದ ಎಲ್ಲಾ ಸದಸ್ಯರ ನಡುವೆ ಇರುವ ಹೊಂದಾಣಿಕೆ ಮನೋಭಾವ, ಒಗ್ಗಟ್ಟು ಇಂತಹ ಕೆಲಸ ಮಾಡಲು ಪ್ರೇರಣೆಯಾಯಿತು ಎನ್ನುತ್ತಾರೆ ಸಮಿತಿಯ ಮಾಸ್ಟರ್ ಹಾಗೂ ಘಟಕ ಪ್ರತಿನಿಧಿಯಾದ ಜಯರಾಮ್ ಪಿ.ಜಿ.

ಪಂಚಾಯತಿ ಸದಸ್ಯನಾದ ನನಗೆ ಬಡವರಿಗೆ ಸ್ಪಂದಿಸಬೇಕೆನ್ನುವ ಆಸಕ್ತಿ ಇದ್ದರೂ ಅದನ್ನು ಓರ್ವನಿಂದ ಮಾಡಲು ಸಾಧ್ಯವಿಲ್ಲ. ಶೌರ್ಯದಂತಹ ಸಂಘಟನೆಯಿದ್ದರೆ ಇಂತಹ ಮಾನವೀಯ ಸೇವೆಯನ್ನು ಕಷ್ಠವಿಲ್ಲದೇ ಅತ್ಯಂತ ಸಂತೋಷದಿಂದ ಮಾಡಬಹುದು. ಮನೆ ನಿರ್ಮಾಣಕ್ಕೆ ನಾವು ಪಟ್ಟಿರುವ ಕಷ್ಠ ಮನೆಯಲ್ಲಿ ವಾಸ ಮಾಡಲು ಸಿದ್ದವಾದ ಕುಟುಂಬದವರ ಸಂತೋಷವನ್ನು ಕಂಡಾಗ ನಮ್ಮಲ್ಲಿ ಸಾರ್ಥಕತೆ ಭಾವನೆ ಮೂಡಿಸಿದೆ. ಇಂತಹ ಸಂಘಟನೆಗೆ ಅವಕಾಶ ಮಾಡಿಕೊಟ್ಟ ಪೂಜ್ಯರಿಗೆ ಹಾಗೂ ಮಾತೃಶ್ರೀ ಅಮ್ಮನವರಿಗೆ ನಾವು ಯಾವತ್ತೂ ಕೃತಜ್ಞರಾಗಿರುತ್ತೇವೆ ಎನ್ನುತ್ತಾರೆ ರತೀಶನ್.
