ಕುಮಟಾ ತಾಲ್ಲೂಕಿನ ಕೊಡ್ಲಗದ್ದೆಯ ಮಾರುತಿ ಅಂಬಿಗ ಬೆಳಗ್ಗಿನ ಜಾವ ತಮ್ಮ ಅಂಗಡಿಗೆಂದು ಹೋಗುವಾಗ ರಸ್ತೆಯ ಬದಿಯಲ್ಲಿ ಶಾಲಾ ವಿದ್ಯಾರ್ಥಿಗಳು ನಿಂತಿರುವುದನ್ನು ಗಮನಿಸಿದರು. ಅಂಕೋಲಾ ಹುಬ್ಬಳ್ಳಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯದು. ವೇಗವಾಗಿ ವಾಹನಗಳು ಚಲಿಸುತ್ತವೆ. ತಿರುವು ಇರುವ ಅಲ್ಲಿನ ರಸ್ತೆಯ ಬದಿಯಲ್ಲಿ ನಿಲ್ಲುವುದು ಅತ್ಯಂತ ಅಪಾಯಕಾರಿ.

ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿದರು. “ಬಸ್ ತಂಗುದಾಣ ಇರುವಾಗ ಇಲ್ಲಿ ಏಕೆ ನಿಂತಿದ್ದೀರಿ?. ತಿರುವಿನ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದ ಅಪಾಯ ಉಂಟಾಗಬಹುದು. ತಂಗುದಾಣದಲ್ಲಿ ನಿಂತಿರಿ” ಸಲಹೆ ನೀಡಿದರು.
“ಅಲ್ಲಿ ಕಸ ಕಡ್ಡಿಗಳು ತುಂಬಿವೆ. ಮಳೆಯ ನೀರು ತಂಗುದಾಣದೊಳಗೆ ಬಿದ್ದು ನಿಲ್ಲಲು ಸಾಧ್ಯವಿಲ್ಲದಂತಾಗಿದೆ. ತಂಗುದಾಣದ ಎದುರು ನೀರು ನಿಂತು ಅಲ್ಲಿಗೆ ಹೋಗಲು ಕಷ್ಠವಾಗುತ್ತಿದೆ. ಅದಕ್ಕೇ ಅನಿವಾರ್ಯವಾಗಿ ಮಳೆಯಿದ್ದರೂ ಇಲ್ಲಿಯೇ ನಿಲ್ಲಬೇಕಾಗಿದೆ” ಕಾಲೇಜು ವಿದ್ಯಾರ್ಥಿಯೊಬ್ಬ ಪ್ರತಿಕ್ರಯಿಸಿದರು.

ಬಸ್ ಬಂದಿತು. ವಿದ್ಯಾರ್ಥಿಗಳು ತೆರಳಿದರು. ಅಲ್ಲಿಯೇ ಇದ್ದ ಮಾರುತಿ ಅಂಬಿಗ ತಂಗುದಾಣವನ್ನು ಪರಿಶೀಲಿಸಿದರು. ಎದುರು ಸಂಗ್ರಹವಾಗಿರುವ ನೀರನ್ನು ದಾಟಿಕೊಂಡು ಹೋಗಲು ಕಷ್ಠವಾಯಿತು. ತಂಗುದಾಣದೊಳಗೆ ಕಸ ಕಡ್ಡಿಗಳು ತುಂಬಿ ಗಲೀಜಾಗಿತ್ತು.
ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮಾರುತಿ ಅವನ್ನು ನೋಡಿ ಸುಮ್ಮನಾಗಲಿಲ್ಲ. ತನ್ನ ಘಟಕದ ಇತರ ಸದಸ್ಯರಿಗೆ ಪರಿಸ್ಥಿತಿ ವಿವರಿಸಿದರು. ಆ ಘಟಕದ ಎಲ್ಲಾ ಸದಸ್ಯರು ಸಹೃದಯರು. ಸಾಮಾಜಿಕ ಕಳಕಳಿಯ ಸೇವೆಗಳಿಗೆ ಸದಾ ಮುಂದಿರುವವರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದರು.

ತಂಗುದಾಣದ ಎದುರು ನೀರು ನಿಲ್ಲಲು ಕಾರಣ ಅದು ತಗ್ಗಿನಿಂದ ಕೂಡಿತ್ತು. ಮಣ್ಣು ತುಂಬಿಸಿ ನೀರು ನಿಲ್ಲದಂತೆ ಮಾಡಬೇಕಾಗಿತ್ತು. ಕೆಲಸ ಶುರು ಮಾಡಿದರು. ಮಣ್ಣು, ಕಲ್ಲುಗಳನ್ನು ತಂದು ನೆಲ ಮಟ್ಟ ಮಾಡಿದರು. ತಂಗುದಾಣದ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿದರು. ಒಳಗೆ ತೊಳೆದು ಸ್ವಚ್ಚಗೊಳಿಸಿದರು. ರಸ್ತೆಯ ತಿರುವಿನಲ್ಲಿರುವ ಮರದ ಗೆಲ್ಲುಗಳನ್ನು ಕಡಿದು ವಾಹನ ದೂರದಿಂದಲೇ ಕಾಣುವಂತೆ ಮಾಡಿದರು.
ಶ್ರೀ ಧರ್ಮಸ್ಥಳ ಶೌರ್ಯ ತಂಡ ಕೊಡ್ಲಗದ್ದೆಯ ಸದಸ್ಯರಾದ ತಿಮ್ಮಪ್ಪ, ಮಾದೇವ, ಮೋಹನ್, ಮಧುಕರ್, ಕೃಷ್ಣ, ನಾಗೇಶ್, ಮಾರುತಿ ಇವರು ದಿನವಿಡೀ ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದರು.
ಎಂದಿನಂತೆ ಪುನಃ ಮಾರುತಿ ಅಂಬಿಗ ಬೆಳ್ಳಂಬೆಳಗ್ಗೆ ಅದೇ ಮಾರ್ಗವಾಗಿ ತಮ್ಮ ಅಂಗಡಿಗೆ ಹೊರಟಿದ್ದರು. ಈಗ ಮಾರ್ಗದ ಬದಿಯಲ್ಲಿ ವಿದ್ಯಾರ್ಥಿಗಳು ನಿಂತಿರಲಿಲ್ಲ. ಹನಿಸುವ ಮಳೆಯಲ್ಲಿ ರಕ್ಷಣೆ ಪಡೆಯಲೆಂಬಂತೆ ಬಸ್ ತಂಗುದಾಣದೊಳಗೆ ಕುಳಿತು ಬಸ್ಸಿಗಾಗಿ ಕಾಯುತ್ತಿದ್ದರು.

ನಮ್ಮ ಶ್ರಮ ಸಾರ್ಥಕವಾಯಿತೆನ್ನುವ ಭಾವ ಮಾರುತಿಯವರಲ್ಲಿ ಮೂಡಿತು. ಇಂತಹ ಸೇವಾಪ್ರಜ್ಞೆ ಮನಸ್ಸಿನಲ್ಲಿ ಮೂಡಲು ಕಾರಣೀಕರ್ತರಾದ ಪೂಜ್ಯರಿಗೆ ಮನಸ್ಸಿನಲ್ಲಿಯೇ ವಂದಿಸಿ ತಮ್ಮ ಕೆಲಸಕ್ಕೆ ತೆರಳಿದರು.