ಬಸ್ ತಂಗುದಾಣ ನಿರ್ಮಾಣ ಮಾಡಿದ ಮಣಿಪಾಲ ಶೌರ್ಯ ತಂಡ

ಉಡುಪಿ, ಎಪ್ರಿಲ್, 11: ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಮಣಿಪಾಲ ಶೌರ್ಯ ಘಟಕದ ಸ್ವಯಂಸೇವಕರು ಉಡುಪಿ ತಾಲ್ಲೂಕಿನ ಮಂಚಿಕುಮೇರಿಯಲ್ಲಿ ಬಸ್ ತಂಗುದಾಣ ನಿರ್ಮಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನೂರಾರು ಸಾಮಾಜಿಕ ಕಳಕಳಿಯ ಸೇವೆಗಳನ್ನು ಸಲ್ಲಿಸಿದ ಈ ತಂಡದ ಸದಸ್ಯರು ಜನದಟ್ಟಣೆಯಿಂದ ಕೂಡಿದ್ದು ಬಿಸಿಲಿನಲ್ಲಿಯೇ ನಿಂತು ಬಸ್ ಏರಬೇಕಾದ ಅನಿವಾರ್ಯತೆ ಇರುವ ಪ್ರದೇಶದಲ್ಲಿ ತಂಗುದಾಣದ ಅಗತ್ಯತೆಯನ್ನು ಮನಗಂಡು ಸ್ವಯಂಪ್ರೇರಣೆಯಿಂದ  ಬಸ್ ತಂಗುದಾಣ ನಿರ್ಮಿಸಿ ಜನಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ತಾತ್ಕಾಲಿಕವಾಗಿ ನಿರ್ಮಿಸಿದ್ದರು:

ಮಣಿಪಾಲದಿಂದ ಕೇವಲ ಒಂದುವರೆ ಕಿಲೋಮೀಟರ್ ದೂರದ ಕರ್ನಾಟಕ ಹೌಸಿಂಗ್ ಬೋರ್ಡ್ ಸಮೀಪದಲ್ಲಿ ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತು ಬಸ್ ಗಾಗಿ ಕಾಯುತ್ತಾ ನಿಂತಿರುತ್ತಿದ್ದರು. ಆ ಪ್ರದೇಶದಲ್ಲಿ ಯಾವುದೇ ಬಸ್ ನಿಲ್ದಾಣ ಕಟ್ಟಡ ಇಲ್ಲದೇ ಇರುವುದರಿಂದ ಬಿಸಿಲು ಮಳೆಯೆನ್ನದೇ ಬಸ್ ಬರುವ ವರೆಗೆ ಕಾದು ನಿಲ್ಲಬೇಕಾಗಿತ್ತು. ಇದನ್ನು ಗಮನಿಸಿದ ಶೌರ್ಯ ತಂಡದ ಮಾಸ್ಟರ್ ಹಾಗೂ ಮಣಿಪಾಲ ಘಟಕದ ಘಟಕಪ್ರತಿನಿಧಿಯಾದ ಹರೀಶ್ ಇವರು ಈ ಪ್ರದೇಶದಲ್ಲಿ ಬಸ್ ತಂಗುದಾಣದ ಅಗತ್ಯತೆಯನ್ನು ಮನಗಂಡು ಕಟ್ಟಡವನ್ನು ನಿರ್ಮಿಸಲು ಮುಂದಾದರು. ಶೌರ್ಯ ತಂಡದ ಸದಸ್ಯರು ಹಾಗೂ ಸ್ಥಳೀಯ ಯುವಕರ ಸಹಕಾರದಿಂದ ಮೂರು ತಿಂಗಳ ಹಿಂದೆ ತೆಂಗಿನ ಗರಿಗಳನ್ನು ಬಳಸಿಕೊಂಡು ಆಕರ್ಷಕವಾದ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಿದ್ದರು.

ಹೆಚ್ಚಳವಾದ ವಿರಮಿಸುವವರ ಸಂಖ್ಯೆ :

ಬಸ್ ನಿಲುಗಡೆ ಪ್ರದೇಶದಲ್ಲಿ ಯಾವುದೇ ವಿರಾಮ ಸ್ಥಳ  ಇಲ್ಲದೇ ಇರುವುದರಿಂದ ಜನರು ಶೌರ್ಯ ತಂಡದ ಸದಸ್ಯರು ನಿರ್ಮಿಸಿದ ತಂಗುದಾಣದಲ್ಲಿ ವಿರಮಿಸಲು ತೊಡಗಿದರು. ನೆರಳಿನಲ್ಲಿ ಬಸ್ ಬರುವ ವರೆಗೆ ಕಾದು ನಿಲ್ಲತೊಡಗಿದರು. ಚಿಕ್ಕಮಕ್ಕಳನ್ನು ಎತ್ತಿಕೊಂಡ ತಾಯಂದಿರು, ವಯಸ್ಸಾದ ವೃದ್ಧರು, ಗರ್ಭಿಣಿಯರು ಹೀಗೆ ಅನೇಕರಿಗೆ ಈ ತಾತ್ಕಾಲಿಕ ಕಟ್ಟಡ ವರದಾನವಾಗಿತ್ತು. ಇದನ್ನು ಗಮನಿಸಿದ ಮಾಸ್ಟರ್ ಹರೀಶ್ ಇವರು ಈ ಸ್ಥಳದಲ್ಲಿ ಶಾಶ್ವತವಾದ ಕಟ್ಟಡದ ಅಗತ್ಯತೆಯನ್ನು ಮನಗಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದರು.

12 ದಿನದ ಶ್ರಮ ಸೇವೆ:

ಶೌರ್ಯ ಘಟಕದಲ್ಲಿರುವ ಸ್ವಯಂಸೇವಕರು ತಮ್ಮದೇ ಆದ ಒಂದು ವೃತ್ತಿಯಲ್ಲಿ ಇರುವುದರಿಂದ ಹಗಲಿನ ವೇಳೆಯಲ್ಲಿ ಕೆಲಸಕ್ಕೆ ಸಿಗುವುದು ಕಷ್ಠವಾಗಿತ್ತು. ಇದರಿಂದಾಗಿ ಎಲ್ಲಾ ಸ್ವಯಂಸೇವಕರು ಚರ್ಚಿಸಿಕೊಂಡು ಸಾಯಂಕಾಲ 6 ಗಂಟೆಯಿಂದ ಕೆಲಸ ಮಾಡುವುದೆಂದು ತೀರ್ಮಾನಿಸಿದರು. ದಿನನಿಗದಿಪಡಿಸಿ ಕೆಲಸ ಮಾಡತೊಡಗಿದರು. ಸಂಜೆ 6 ಗಂಟೆಯಿಂದ ಶುರುವಾದ ಕೆಲಸ ರಾತ್ರಿ 10 ಗಂಟೆಯ ವರೆಗೂ ಮುಂದುವರೆಯುತ್ತಿತ್ತು. ಒಟ್ಟು 12 ದಿನಗಳ ಕಾಲ ಶ್ರಮದಾನ ನಡೆಸಿದ ಸ್ವಯಂಸೇವಕರು ಸುಂದರವಾದ ತಂಗುದಾಣ ನಿರ್ಮಿಸಿದ್ದಾರೆ.

ಯಾರಿಂದಲೂ ಹಣ ಸಂಗ್ರಹಿಸಿಲ್ಲ:

ಶೌರ್ಯ ಸಮಿತಿಯ ಮಾಸ್ಟರ್ ಹರೀಶ್ ಇವರು ಇಲೆಕ್ಟ್ರಿಕ್ ಕಾಂಟ್ರಾಕ್ಟ್ ಕೆಲಸವನ್ನು ಮಾಡುತ್ತಿದ್ದು ಪ್ರತೀ ವರ್ಷ ತಮ್ಮ ಸ್ವಂತ ಹಣದಿಂದ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡುತ್ತಿರುತ್ತಾರೆ. ಕಳೆದ ವರ್ಷ 16 ಬಡ ಕುಟುಂಬಗಳನ್ನು ಗುರುತಿಸಿ ಅವರ ಮನೆಗೆ ವಿದ್ಯುತ್ ಅಳವಡಿಕೆಗೆ ಸಂಬಂಧಿಸಿದ ಕೆಲಸವನ್ನು ಉಚಿತವಾಗಿ ಮಾಡಿಕೊಟ್ಟಿದ್ದರು. ಈ ವರ್ಷ ಯಾವುದಾದರೂ ಸೇವೆ ಸಲ್ಲಿಸಬೇಕೆನ್ನುವ ಹಂಬಲ ಹೊಂದಿದ್ದ ಇವರಿಗೆ ಬಸ್ ತಂಗುದಾಣದ ಅಗತ್ಯತೆ ಅರಿವಾಗಿದೆ. ಇದಕ್ಕೆ ಬರುವ ಎಲ್ಲಾ ಖರ್ಚುಗಳನ್ನು ತಾವೇ ನಿಭಾಯಿಸುತ್ತೇನೆ ಎಂದು ಸ್ವಯಂಸೇವಕರಿಗೆ ತಿಳಿಸಿ ಶ್ರಮಸೇವೆಯನ್ನು ತಾವು ನೀಡಬೇಕಾಗಿ ವಿನಂತಿಸಿಕೊಂಡಿದ್ದರು. ಈ ಪ್ರಕಾರವಾಗಿ ತಂಡದ ಸದಸ್ಯರು ಮತ್ತು ಸ್ಥಳೀಯ ಯುವಕರು 12 ದಿನಗಳ ಕಾಲ ಶ್ರಮದಾನ ನಡೆಸಿದ್ದರು.  ಕಟ್ಟಡ ರಚನೆಗೆ ರೂ. 50,000 ಖರ್ಚಾಗಿದ್ದು ಹರೀಶ್ ಇವರೇ ಭರಿಸಿರುತ್ತಾರೆ. ತಮ್ಮ ಉದ್ಯೋಗದಿಂದ ಬರುವ ಆದಾಯದ ಒಂದಿಷ್ಟು ಭಾಗ ಜನಸಮುದಾಯಕ್ಕೆ ಅನುಕೂಲವಾಗಬೇಕು ಎನ್ನುವ ಹಂಬಲ ಇವರದು. ಆದುದರಿಂದ ಯಾವುದೇ ಸಂಘ ಸಂಸ್ಥಗಳಿಗೆ, ಗಣ್ಯರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎನ್ನುತ್ತಾರೆ ಹರೀಶ್.

ಯುವಕರಿಗೆ ಸ್ಪೂರ್ತಿಯಾಗಲಿ ಎನ್ನುವ ಆಶಯ:

          ನೂತನವಾಗಿ ರಚಿಸಿದ ತಂಗುದಾಣಕ್ಕೆ ಸ್ವಾಮಿ ವಿವೇಕಾನಂದ ಬಸ್ಸು ತಂಗುದಾಣ ಎಂದು ಹೆಸರನ್ನಿಟ್ಟಿದ್ದಾರೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ದರ್ಶಗಳನ್ನು ನಾವು ರೂಢಿಸಿಕೊಳ್ಳಬೇಕಿದೆ. ಈ ತಂಗುದಾಣವನ್ನು ಯುವಕರೇ ಸೇರಿಕೊಂಡು ನಿರ್ಮಾಣ ಮಾಡಿದ್ದೇವೆ. ಆದುದರಿಂದ ಸ್ವಾಮಿ ವಿವೇಕಾನಂದ ಬಸ್ಸು ತಂಗುದಾಣ ಎಂದು ಹೆಸರನ್ನು ಇಟ್ಟಿದ್ದೇವೆ ಎನ್ನುತ್ತಾರೆ ಮಾಸ್ಟರ್ ಹರೀಶ್.

ಸರಳ ಉದ್ಘಾಟನೆ:

ದಿನಾಂಕ 10/04/2025 ರಂದು ಸ್ಥಳೀಯರಾದ ಈಶ್ವರ್ ರವರು ಉದ್ಘಾಟನೆ ಮಾಡಿದರು, ನಗರಸಭೆ ಸದಸ್ಯರಾದ ಅಶೋಕ್ ನಾಯ್ಕ್, ಜನಜಾಗೃತಿ ವೇದಿಕೆ ಸದಸ್ಯರಾದ ಕುಶಾಲ್ ಶೆಟ್ಟಿ, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ವಲಯ ಮೇಲ್ವಿಚಾರಕರಾದ ಬಾಲಚಂದ್ರ ಸೇವಾಪ್ರತಿನಿಧಿ ಚಂದ್ರಕಲಾ ಉಪಸ್ಥಿತರಿದ್ದರು. ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಣಿಪಾಲದ ಎಲ್ಲಾ ಸ್ವಯಂಸೇವಕರು, ಸ್ಥಳೀಯ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸ್ ತಂಗುದಾಣದಲ್ಲಿ ಶ್ರಮದಾನ ನಡೆಸಿದ ಮಣಿಪಾಲ ಘಟಕದ ಸ್ವಯಂಸೇವಕರ ತಂಡ

Share Article
Previous ಬಡ ಕುಟುಂಬಕ್ಕೆ ಮನೆ ರಿಪೇರಿ ಖಾಂಡ್ಯಾ ಶೌರ್ಯ ಘಟಕದಿಂದ ಮಾನವೀಯ ಸೇವೆ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved